ಶಿವಮೊಗ್ಗ :ಬಿಜೆಪಿ ಟಿಕೆಟ್ ಮಿಸ್ ಹಿನ್ನೆಲೆ ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಈಶ್ವರಪ್ಪ ಘೋಷಣೆ ಮಾಡಿದ್ದಾರೆ.
ಶುಕ್ರವಾರ ಸಂಜೆ ಶಿವಮೊಗ್ಗದ ಬಂಜಾರ ಕನ್ವೆನ್ಷನ್ ಹಾಲ್ನಲ್ಲಿ ಈಶ್ವರಪ್ಪ ತಮ್ಮ ಬೆಂಬಲಿಗರ ಸಭೆ ನಡೆಸಿದರು. ಸಭೆಯಲ್ಲಿ ಮುಂದಿನ ನಡೆ ಬಗ್ಗೆ ಮುಖಂಡರ ಅಭಿಪ್ರಾಯ ಸಂಗ್ರಹಿಸಿದರು ಮಾತನಾಡಿದರು. ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಹೋಗುವುದಿಲ್ಲ ಎನ್ನುತ್ತಲ್ಲೇ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದರು. ಇದೇ ವೇಳೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಬಹಿರಂಗವಾಗಿಯೇ ಗುಡುಗಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ನನಗೆ ಆದ ಅನ್ಯಾಯ ಸರಿಪಡಿಸುವ ಭರವಸೆ ಪಕ್ಷದ ನಾಯಕರಿಂದ ಸಿಕ್ಕಿತ್ತು. ಬಿಎಸ್ ಯಡಿಯೂರಪ್ಪ ಸಹ ಹಾವೇರಿಯಲ್ಲಿ ಕಾಂತೇಶ್ ಗೆ ಟಿಕೆಟ್ ಕೊಡಿಸಿ ಗೆಲ್ಲಿಸುವೆ ಎಂದಿದ್ದರು. ಆದರೆ ಅಲ್ಲಿ ಬೊಮ್ಮಾಯಿ ಮತ್ತು ಶೋಭಾ ಪರ ಮಾತ್ರ ಹಠ ಹಿಡಿದು ಟಿಕೆಟ್ ಕೊಡಿಸಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ಮುನ್ನ ಶೋಭಾ ಪರ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಸೂಚನೆಯನ್ನು ಹೇಗೆ ಕೊಟ್ಟರು ಎಂದು ಬಿಎಸ್ವೈ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ನನ್ನ ಪುತ್ರ ಕಾಂತೇಶ್ ಪರ ನಿಲುವು ವ್ಯಕ್ತಪಡಿಸಿದ್ದರು. ಬೊಮ್ಮಾಯಿಗೆ ಇಷ್ಟವಿಲ್ಲದಿದ್ದರೂ ಟಿಕೆಟ್ ಕೊಡಿಸಿದ್ದಾರೆ. ಸಂಸದೆ ಶೋಭಾ ವಿರುದ್ಧ ಕೂಗೆದ್ದರೂ ಟಿಕೆಟ್ ಕೊಡಿಸಿದ್ದಾರೆ. ಸದಾನಂದ ಗೌಡ, ಸಿ.ಟಿ.ರವಿ, ಕಟೀಲು, ಪ್ರತಾಪ ಸಿಂಹ ಅವರಿಗೂ ಟಿಕೆಟ್ ತಪ್ಪಲು ಯಡಿಯೂರಪ್ಪ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಹೋಗುತ್ತಿಲ್ಲ. ಪಕ್ಷ ಒಂದು ಕುಟುಂಬದ ಕೈಯಲ್ಲಿ ಸಿಲುಕಿರುವುದನ್ನು ಬಿಡಿಸಲು ಸ್ಪರ್ಧೆ ಮಾಡುತ್ತೇನೆ. ನೊಂದ ಪಕ್ಷದ ಕಾರ್ಯಕರ್ತರ ಧ್ವನಿಯಾಗಿ ಸ್ಪತಂತ್ರವಾಗಿ ನಿರ್ಧರಿಸುವೆ ಎಂದು ಹೇಳಿದರು.