ಸಿನಿಮಾದಲ್ಲಿ ನಟಿಸಿದಂಗೆ ನಿಜ ಜೀವನದಲ್ಲೂ ನಟಿಸಿದಂತೆ ಎಚ್ಚರಿಕೆ
ಮೈಸೂರು ಜ 20 : ನೀವು ತಿನ್ತಿರೋದು ರೈತರ ಅನ್ನ, ರೈತರ ಬಗ್ಗೆ ಹಗುರವಾಗಿ ಮಾತನಾಡ್ತೀರಾ? ಹಸಿರು ಟವಲ್ ಹಾಕಿ ರೈತರ ಮರ್ಯಾದೆ ಕಳೆಯುತೀರಾ? ಜವಾಬ್ದಾರಿ ಇಲ್ಲ ಅಂದರೆ ತೊಲಗಿ ಎಂದು ರೈತ ಮುಖಂಡರೊಬ್ಬರು ಕೃಷಿ ಸಚಿವ ಬಿ.ಸಿ ಪಾಟೀಲ್ ರವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಜಲದರ್ಶಿನಿಯ ಅತಿಥಿಗೃಹದಲ್ಲಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ್ಗೆ ಮಂಗಳವಾರ ರೈತರ ಪ್ರತಿಭಟನೆಯ ಬಿಸಿ ತಟ್ಟಿದೆ. ಜ್ಯೋತಿ ಭತ್ತ ಖರೀದಿಸುವಂತೆ ಮನವಿ ಸಲ್ಲಿಸಿದ ರೈತ ಮುಖಂಡರು, ಭತ್ತ ಖರೀದಿ ಕೇಂದ್ರ ತೆರೆಯದಿದ್ದರೆ ಘೇರಾವ್ ಹಾಕುವುದಾಗಿ ಸಚಿವರಿಗೆ ಎಚ್ಚರಿಕೆಯನ್ನು ನೀಡಿದರು.
ರೈತ ಮುಖಂಡ ಬಸವರಾಜು ಕೃಷಿ ಸಚಿವರನ್ನು ತರಾಟೆಗೆ ತೆಗೆದುಕೊಂಡ್ರು, “ಯಾವ ಕಾಲದಲ್ಲಿ ಭತ್ತ ನಾಟಿ ಮಾಡುತ್ತಾರೆ ಅಂತ ಸರ್ಕಾರಕ್ಕೆ ಗೊತ್ತಿಲ್ಲ ಜಿಲ್ಲಾಡಳಿತವನ್ನು ಕೇಳಿದರೆ ಸರ್ಕಾರ ಆದೇಶ ಮಾಡಬೇಕು ಅಂತಾರೆ. ಇದು ಅಕ್ಷಮ್ಯ ಅಪರಾಧ. ನಾವು ಭತ್ತ ಬೆಳೆಯದೆ ಇದ್ರೆ ನಿಮಗೆ ಹೊಟ್ಟೆಗೆ ಅನ್ನ ಇಲ್ಲ. ಜವಾಬ್ದಾರಿ ಇಲ್ಲ ಅಂದರೆ ತೊಲಗಿ, ನೀವು ನಿಮ್ಮ ಅಧಿಕಾರಿಗಳು ರೈತರ ಜೊತೆ ಆಟ ಆಡ್ತಾ ಇದ್ದೀರಿ ಎಂದು ಬಸವರಾಜ ಆರೋಪಿಸಿದರು.
ಈ ಬಗ್ಗೆ ಸಮಜಾಯಿಷಿ ನೀಡಲು ಮುಂದಾದ ಸಚಿವ ಬಿ.ಸಿ. ಪಾಟೀಲ್, ಹೀಗೆಲ್ಲ ಮಾತಾಡಬಾರದು ಎಂದರು. ಆಗ ಮತ್ತಷ್ಟು ಆಕ್ರೋಶಗೊಂಡ ಬಸವರಾಜು, ನಿಮ್ಮ ಮುಂದೆ ಕೈ ಮುಗಿದು ನಿಂತುಕೊಳ್ಳಬೇಕಾ? ನೀವೇನೂ ಆಕಾಶದಿಂದ ಬಂದಿದ್ದೀರಾ? ನೀವು ತಿಂತಾ ಇರೋದು ರೈತರ ಅನ್ನ, ನೀವು ಮಜಾ ಮಾಡ್ತಾ ಇರೋದು ರೈತರ ಅನ್ನ. ಹಸಿರು ಟವಲ್ ಹಾಕಿಕೊಂಡು ಮಾನ ಮರ್ಯಾದೆ ಕಳೆಯುತ್ತೀರಾ. ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಬೈದು ಅಲ್ಲಿಂದ ಹೊರಟೆ ಬಿಟ್ಟರು. ರೈತನ ಕೋಪ ರಟ್ಟೆಗೆ ಬಂದ್ರೆ ಸಚಿವಾನಾದ್ರೂ ಅಷ್ಟೆ, ಪ್ರಧಾನಿ, ಮುಖ್ಯಮಂತ್ರಿ ಆದ್ರೂ ಅಷ್ಟೆ ಎಂದು ಅಲ್ಲಿ ಸಾರ್ವಜನಿಕರು ಮಾತನಾಡುತ್ತಿದ್ದರು. ಸಿನಿಮಾ ದಲ್ಲಿ ನಟನೆ ಮಾಡಿದಂಗೆ ನಿಜ ಜೀವನದಲ್ಲಿ ಮಾಡಬೇಡಿ ಎಂದು ರೈತ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.