ರೋಣ: ನಾಳೆ (ಜುಲೈ 21) ರೈತ ಹುತಾತ್ಮ ದಿನಾಚರಣೆಯ ಅಂಗವಾಗಿ ಹಾಗೂ ಕೃಷಿಗೆ ಮಾರಕವಾಗಲಿರುವ ಕೃಷಿಕಾಯ್ದೆಗಳ ವಾಪಾಸ್ಸಾತಿ ಸೇರಿದಂತೆ ಸ್ಥಳೀಯ ಬೇಡಿಕೆಗಳನ್ನೊ ಒಳಗೊಂಡ ರೈತರ ಬೃಹತ್ ಪಾದಯಾತ್ರೆಗೆ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಚಾಲನೆ ನೀಡಿದರು.
ಇದನ್ನು ಓದಿ: ರಸಗೊಬ್ಬರ, ಬಿತ್ತನೆ ಬೀಜಗಳ ದರ ಏರಿಕೆ ವಿರೋಧಿಸಿ ರೈತರ ಪ್ರತಿಭಟನೆ
ದೇಶದ ಕಾರ್ಪೊರೇಟ್ ಮನೆತನಗಳ ಮಹದಾಸೆಯಂತೆ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವ ಕೇಂದ್ರದ ಬಿಜೆಪಿ ಸರ್ಕಾರವು ರೈತರಿಗೆ ಮರಣ ಶಾಸನ ಬರೆದಿದೆ. ಲಾಕ್‌ಡೌನ್ ಸಮಯವನ್ನು ದುರುಪಯೋಗಪಡಿಸಿಕೊಂಡು ದೇಶಕ್ಕೆ ಅನ್ನ ನೀಡುವ ರೈತರಿಗೆ ದ್ರೋಹವೆಸಗಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರವು ದೇಶದ ಸಂಪತ್ತನ್ನೆ ನುಂಗಿ ಹಾಕುತ್ತಿದೆ. ದೇಶದ ಕಾರ್ಪೊರೇಟ್ ಕಂಪನಿಗಳ ಕರುಣೆಯಿಂದ ರೈತರು ಬದುಕ ಬೇಕಾಗುತ್ತದೆ. ರೈತರ ವೆಚ್ಚದಲ್ಲಿ ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತೆ ಈ ಕಾಯಿದೆ ರೂಪಿಸಲಾಗಿದೆ ಕೇಂದ್ರ ಸರಕಾರ ಜಾರಿ ಮಾಡಿದ ಕೃಷಿ ಮಸೂದೆಗಳು ಜಾರಿಯಾದರೆ ಕೋಟ್ಯಂತರ ರೈತರು ತಮ್ಮ ಕೈಯಲ್ಲಿರುವ ಕೃಷಿ ಭೂಮಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಎಸ್.ಆರ್.ಹಿರೇಮಠ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಕೃಷಿಕಾಯ್ದೆಗಳು ಕೃಷಿ ನಾಶಗೊಳಿಸಲು ಹೊರಟಿದ್ದು, ದೇಶದ ಆಹಾರ ಭದ್ರತೆಗೆ ಹಾಗೂ ಸ್ವಾಲಂಭನೆಗೆ ತೀವ್ರ ಹಾನಿ ಮಾಡಿ ಕಾರ್ಪೋರೇಟ್ ಕಂಪನಿಗಳಿಗೆ ದೇಶದ ಕೃಷಿ ಭೂಮಿಯನ್ನು ಒತ್ತೆ ಇಡುವ ಹುನ್ನಾರ ಇದಾಗಿದೆ. ಅವುಗಳನ್ನು ಹಿಮ್ಮೆಟ್ಟಿಸುವ ಹಕ್ಕೋತ್ತಾಯಗಳು ಒಳಗೊಂಡು ಅಖಂಡ ರೋಣ ತಾಲ್ಲೂಕಿನಲ್ಲಿ ನೆನೆಗೂದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ವಿವಿಧ ರೈತ ಸಂಘಗಳು ಹಾಗೂ ಕಾರ್ಮಿಕ, ದಲಿತಪರ, ಕನ್ನಡಪರ ಸಂಘಟನೆಗಳ ಜಂಟಿ ಆಶ್ರಯದಲ್ಲಿ ರೈತರ ಪಾದಯಾತ್ರೆಗೆ ಚಾಲನೆ ನೀಡಿ ನೀಡಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಹೆಸರಿನಲ್ಲಿ ಹಸಿರು ಶಾಲನ್ನು ಹೊದ್ದುಕೊಂಡು ಅಧಿಕಾರಕ್ಕಾಗಿ ನಿಲ್ಲುತ್ತಿದ್ದಾರೆಯೇ ಹೊರತು ರೈತರ ಹಾಗೂ ದೇಶದ ಅಭಿವೃದ್ಧಿ ಬಗ್ಗೆ ಅವರಿಗೆ ಕಾಳಜಿ ಇಲ್ಲವಾಗಿದೆ. ಮಲಪ್ರಭಾ ನೀರಾವರಿ ಯೋಜನೆಯಿಂದ ರೋಣ ತಾಲ್ಲೂಕಿನ ಕೊನೆ ಅಂಚಿನ ರೈತರು ವಂಚಿತರಾಗಿದ್ದು,ಅವರಿಗೆ ನಿರಾವರಿ ಸೌಲಭ್ಯ ದೊರೆಯಬೇಕು. ಕೃಷ್ಣಾ ಭಿ ಸ್ಕೀಂ ಮೂರನೇಯ ಹಂತದ ಕೊಪ್ಪಳ ಸೂಕ್ಷ್ಮ ಏತ ನೀರಾವರಿ ಯೋಜನೆ ರೋಣ ತಾಲ್ಲೂಕ ಸೇರಿದಂತೆ ಗಜೇಂದ್ರಗಡ ತಾಲ್ಲೂಕಿಗೆ ಶೀಘ್ರವಾಗಿ ಜಾರಿಗೊಳ್ಳಬೇಕು. ಬೆಳೆವಿಮೆ ಪರಿಹಾರ ಎಲ್ಲಾ ಅರ್ಹ ಫಲಾನುಭವಿಗಳಿಗೆ ದೊರೆಯಬೇಕು ಎಂಬ ಸ್ಥಳೀಯ ಬೇಡಿಕೆಗಳನ್ನು ಸಹ ರೈತ ಜಾಥಾದಲ್ಲಿ ಒಳಗೊಂಡಿದೆ ಎಂದು ಕರ್ನಾಟಕ ಪ್ರಾಂತ ಕೃಷಿಕೂಲಿಕಾರ ಸಂಘಟನೆಯ ನಿತ್ಯಾನಂದಸ್ವಾಮಿ ಹೇಳಿದರು.
ಇದನ್ನು ಓದಿ: ರೈತ ಹುತಾತ್ಮ ದಿನ: ನರಗುಂದದಲ್ಲಿ ಭಾರಿ ಸಮಾವೇಶಕ್ಕೆ ಸಿದ್ಧತೆ- ರಾಕೇಶ್ ಟಿಕಾಯತ್ ಭಾಗವಹಿಸುವ ನಿರೀಕ್ಷೆ
ಕಾರ್ಮಿಕ ಮುಖಂಡ ಎಮ್.ಎಸ್.ಹಡಪದ ಮಾತನಾಡಿ ʻʻಈ ಭಾಗದ ನೀರಾವರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗದೆ ಇರುವುದರಿಂದ ಸಾಕಷ್ಟು ಕಾರ್ಯಗಳ ನೆನೆಗುದಿಗೆ ಬಿದ್ದಿವೆ. ಕೇರಳ ಮಾದರಿಯ ಎಲ್ಲಾ ರೈತರು ಪಡೆದುಕೊಂಡಿರುವ ಖಾಸಗಿ-ಸರ್ಕಾರಿ ಸಾಲಗಳ ಸಂಪೂರ್ಣವಾಗಿ ಮನ್ನಾ ಮಾಡುವ ಋಣಮುಕ್ತ ಕಾಯ್ದೆ ಜಾರಿಯಾಗಬೇಕು. ಜನತೆಯನ್ನು ತೀವ್ರವಾಗಿ ಬಾಧಿಸುತ್ತಿರುವ ಅಗತ್ಯ ವಸ್ತುಗಳ ಬೆಲೆ ಸೇರಿದಂತೆ ತೈಲ ಬೆಲೆ ಏರಿಕೆಯನ್ನು ಕೇಂದ್ರ-ರಾಜ್ಯ ಸರ್ಕಾರಗಳು ನಿಯಂತ್ರಿಸಬೇಕು. ವೈಜ್ಙಾನಿಕ ಬೆಂಬಲ ಬೆಲೆ ನಿಗದಿಗೊಳಿಸುವ ಕಾನೂನು ಜಾರಿಗೆ ತರಬೇಕುʼʼ ಎಂದು ಒತ್ತಾಯಿಸಿದರು.
ರೋಣ ನಗರದಿಂದ ಪೋತರಾಜನ ಕಟ್ಟಿಯಿಂದ ಪ್ರಾರಂಭಗೊಂಡ ಪಾದಯಾತ್ರೆಯು ನರಗುಂದದ ರೈತ ಹುತಾತ್ಮ ಸ್ಮಾರಕದವರೆಗೆ 2 ದಿನಗಳು ಜಾಥಾ ನಡೆಯಲಿದೆ. ಪಾದಯಾತ್ರೆಯು ಚಿಕ್ಕಮಣ್ಣೂರ, ಮಲ್ಲಾಪೂರ, ಬೆಳವಣಿಕಿ, ಯಾವಗಲ್ಲ ಹಾಗೂ ಮದುಣುಕಿ ಗ್ರಾಮಗಳಿಗೆ ತೆರಳಲಿದೆ.
ಪಾದಯಾತ್ರೆಯಲ್ಲಿ ಮುತ್ತಣ್ಣ ಚೌಡರೆಡ್ಡಿ, ಮೇಘರಾಜ ಬಾಯಿ, ಸಂಗಣ್ಣ ದಂಡಿನ, ಸಂಕಪ್ಪ ಕುರಹಟ್ಟಿ, ಕಾರ್ಮಿಕ ಮುಖಂಡರಾದ ಮಹೇಶ ಹಿರೇಮಠ, ಎಂ.ಎಸ್.ಹಡಪದ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
ವರದಿ: ದಾವಲ್‌ಸಾಬ ತಾಳಿಕೋಟಿ