ವಿಶೇಷ ಅಧಿವೇಶನದಲ್ಲಿ ನಿರ್ಣಯ ಮಂಡನೆ
ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ಧ ಗುರುವಾರ ವಿಧಾನಸಭೆಯಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ನಿರ್ಣಯ ಹೊರಡಿಸಿದ್ದಾರೆ.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗೆ ಸಂಬಂಧಪಟ್ಟಂತೆ ವಿಧಾನಸಭೆಯ ವಿಶೇಷ ಅಧಿವೇಶನ ನಡೆಯುತ್ತಿದ್ದು, ಕೃಷಿ ಮಸೂದೆ ವಿರುದ್ಧ ನಿರ್ಣಯವನ್ನು ಮಂಡಿಸಲಾಗಿದೆ. ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು ಕೇಂದ್ರ ಸರಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ಕೃಷಿ ಕಾಯ್ದೆಯನ್ನು ರದ್ದು ಪಡಿಸಬೇಕು ಎಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ರೈತರ ವಿರುದ್ಧವಾಗಿದ್ದು ಕಾರ್ಪೊರೇಟ್ ಕಂಪೆನಿಗಳ ಪರವಾಗಿದೆ ಎಂದು ಆರೋಪಿಸಿರುವ ವಿಜಯನ್ ಮೂರು ವಿವಾದಾತ್ಮಕ ಕೇಂದ್ರ ಕೃಷಿ ಕಾನೂನುಗಳ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗುವ ರೀತಿಯಲ್ಲಿ ಕೇರಳ ವಿಧಾನಸಭೆಯ ಅಧಿವೇಶನವನ್ನು ಕರೆಯುವಂತೆ ಮಾಡಿತು ಎಂದರು.
ಈ ಮೊದಲು ಇದೇ 23ರಂದು ವಿಶೇಷ ಅಧಿವೇಶನ ಕರೆಯಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇದನ್ನು ತಿರಸ್ಕರಿಸಿದ್ದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಜನವರಿ 8ರಂದು ಬಜೆಟ್ ಅಧಿವೇಶನ ನಿಗದಿಯಾಗಿರುವಾಗ ಈಗ ‘ವಿಶೇಷ ಅಧಿವೇಶನ ಕರೆಯುವ ತುರ್ತು ಏನಿದೆ?’ ಎಂದು ಮುಖ್ಯಮಂತ್ರಿ ಅವರಿಂದ ವಿವರಣೆ ಕೇಳಿದ್ದರು. ರಾಜ್ಯಪಾಲರ ಈ ನಿರ್ಧಾರವನ್ನು ಆಡಳಿತಾರೂಢ ಸಿಪಿಎಂ ಹಾಗೂ ಪ್ರತಿಪಕ್ಷ ಮೈತ್ರಿಕೂಟ ಯುಡಿಎಫ್ ತೀವ್ರವಾಗಿ ಖಂಡಿಸಿದ್ದವು. ಈ ಕ್ರಮ ಅಸಾಂವಿಧಾನಿಕ ಎಂದೂ ಟೀಕಿಸಿದ್ದವು. ಮುಖ್ಯಮಂತ್ರಿ ಪಿಣರಾಯಿ ಅವರೂ ಪತ್ರದ ಮೂಲಕ ರಾಜ್ಯಪಾಲರಿಗೆ ತೀಕ್ಷ್ಣ ಉತ್ತರ ನೀಡಿದ್ದರು.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇಂದು ವಿಶೇಷ ಅಧಿವೇಶನ ಕರೆಯುವ ಮೂಲಕ ಕೇರಳ ಸರಕಾರ ಕೃಷಿಕಾಯ್ದೆ ವಿರುದ್ದ ಮಹತ್ವ ನಿರ್ಣಯ ತೆಗೆದುಕೊಂಡಿದೆ. ಪ್ರಮುಖ ವಿರೋಧ ಪಕ್ಷ ಕೂಡ ಸರಕಾರದ ನಿರ್ಣಯಕ್ಕೆ ಬೆಂಬಲವ್ಯಕ್ತಪಡಿಸಿದೆ. ಈಗಾಗಲೆ 35 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 40 ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. 6 ಸುತ್ತಿನ ಮಾತುಕತೆಗಳು ನಡೆದಿದ್ದರೂ ರೈತರ ಪರವಾದ ನಿಲುವಿಗೆ ಕೇಂದ್ರ ಸರಕಾರ ಬಂದಿಲ್ಲ. ವಿಶೇಷ ಅಧಿವೇಶನ ನಡೆಸಿ ಕೃಷಿ ಕಾಯ್ದೆ ವಿರುದ್ಧ ಕೇರಳ ಸರಕಾರ ನಿರ್ಣಯ ಮಂಡಿಸಿರುವುದು ಮೋದಿ ಸರಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.