ನವದೆಹಲಿ : ವಿವಾದಿತ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲು ಪ್ರಧಾನಿ ಮೋದಿ ಸರ್ಕಾರ ನಿರ್ಧರಿಸಿದೆ. ಇಂದು ಬೆಳಿಗ್ಗೆ ಮಾಡಿದ ಭಾಷಣದಲ್ಲಿ ಮೂರೂ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಿಸಿದರು. ಸುಮಾರು ಒಂದು ವರ್ಷದಿಂದ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯ ಗಡಿ ಭಾಗಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಮೂಲಕ ವರ್ಷದಿಂದ ನಡೆಯುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ.
ಕೃಷಿಕಾಯ್ದೆ ವಿರೋಧಿಸಿ ದೇಶದಾದ್ಯಂತ ರೈತರ ಹೋರಾಟ, ಪ್ರತಿಭಟನೆಗಳನ್ನು ಎದುರಿಸಿತ್ತು. ಇದೇ ನವೆಂಬರ್ 26 ಕ್ಕೆ ದೆಹಲಿ ಹೋರಾಟಕ್ಕೆ ಒಂದು ವರ್ಷವಾಗುತ್ತಿತ್ತು. ಆ ಹಿನ್ನಲೆಯಲ್ಲಿ ಕೃಷಿಕಾಯ್ದೆ ರದ್ದು ಮಾಡಬೇಕು ಎಂದು ರೈತರು ತೀವ್ರ ಹೋರಾಟವನ್ನು ನಡೆಸುವುದಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಕೃಷಿಕಾಯ್ದೆ ವಿರುದ್ಧ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಲಾಠಿಚಾರ್ಹ್, ಜಲಫರಂಗಿ ಅಸ್ತ್ರಗಳನ್ನು ಕೇಂದ್ರ ಸರಕಾರ ಪ್ರಯೋಗಿಸಿತ್ತು. ರೈತರು ದೆಹಲಿಯತ್ತ ಬರದಂತೆ ರಸ್ತೆಗಳಿಗೆ ದೊಡ್ಡದಾದ ಬ್ಯಾರಿಕೇಡ್, ಸಿಮೆಂಟ್ ಗೋಡೆ ಹಾಗೂ ರಸ್ತೆಯ ತುಂಬ ಮೊಳೆಗಳನ್ನು ಹಾಕಲಾಗಿತ್ತು. 700 ಕ್ಕೂ ಹೆಚ್ಚು ಜನ ದೆಹಲಿ ಹೋರಾಟದಲ್ಲಿ ರೈತರು ಹುತಾತ್ಮರಾಗಿದ್ದಾರೆ. ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ, ಕೇಂದ್ರ ಸರಕಾರದ ಬೆದರಿಕೆಗೆ ಹೆದರದೆ ರೈತರು ನಿರಂತರ ಹೋರಾಟ ನಡೆಸಿ ಸರಕಾರದ ಮೇಲೆ ಒತ್ತಡ ಹೇರಿದ್ದರು.
ಸಾಲು ಸಾಲು ಚುನಾವಣೆಯಲ್ಲಿ ಮೋದಿ ಸರಕಾರ ಸೋಲಲು ರೈತರ ಹೋರಾಟ ಕಾರಣ ಎಂದು ರಾಜಕೀಯ ಚಿಂತಕರು ವಿಶ್ಲೇಷಿಸಿದ್ದರು. ಇದರ ವಾಸ್ತವವನ್ನು ಅರಿತ ಸರಕಾರ ಈಗ ಕೃಷಿಕಾಯ್ದೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡಿದೆ. ಇಲ್ಲದೆ ಹೋದರೆ ಮುಂಬರುವ ಚುನಾವಣೆಗಳಲ್ಲಿ ಪೆಟ್ಟು ತಿನ್ನುವ ಸಾಧ್ಯತೆ ಇತ್ತು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬಹಳಷ್ಟು ಸಂಕಷ್ಟಗಳ ನಡುವೆ ರೈತರು ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿರುವುದು ರೈತರಲ್ಲಿ ಮಂದಹಾಸ ಬೀರಿದೆ.