ಕೃಷ್ಣಾ ನದಿಯಲ್ಲಿ ಹೆಚ್ಚಿದ ನೀರಿನ ಪ್ರವಾಹ: ನದಿ ಪಾತ್ರದ 60 ಗ್ರಾಮ ಜಲಾವೃತ

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಳವಾಗಿದ್ದರಿಂದ ಕೃಷ್ಣಾ ನದಿಗೆ 4.10 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ನದಿ ಪಾತ್ರದ 60 ಗ್ರಾಮಗಳು ಜಲಾವೃತಗೊಂಡಿವೆ. ಕಳೆದ ಮೂರು ದಿನಗಳಿಂದ ನೀರಿನ ರಭಸ ಜೋರಾಗಿದ್ದು, ಕೃಷ್ಣಾ ನದಿಗೆ 4.10 ಲಕ್ಷ ಕ್ಯೂಸೆಕ್‌, ಘಟಪ್ರಭಾ ನದಿಗೆ 17,379 ಕ್ಯೂಸೆಕ್‌ ಹಾಗೂ ಮಲಪ್ರಭಾ ನದಿಗೆ 5094 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಮೂರು ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ.

ಕಳೆದ ಬುಧವಾರ ಕೃಷ್ಣಾ ನದಿಗೆ 3.82 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿತ್ತು. ಇನ್ನೇನು ಪ್ರವಾಹ ಸಂಕಷ್ಟ ಕಡಿಮೆ ಆಯ್ತು ಎಂದು ಜನ ನಿಟ್ಟುಸಿರುವ ಬಿಡುವಾಗಲೇ ಮತ್ತೆ ನೀರಿನ ಪ್ರವಾಹ ಹೆಚ್ಚಾಗ ತೊಡಗಿದವು.  ಘಟಪ್ರಭಾ ನದಿ ಪ್ರವಾಹದಿಂದ ಮುಧೋಳ ತಾಲೂಕಿನ 36 ಗ್ರಾಮಗಳು, ಕೃಷ್ಣಾ ನದಿ ಪ್ರವಾಹದಿಂದ ರಬಕವಿ-ಬನಹಟ್ಟಿ ತಾಲೂಕಿನ 8, ಜಮಖಂಡಿ ತಾಲೂಕಿನ 11, ಬಾಗಲಕೋಟೆ ತಾಲೂಕಿನ 1, ಮಲಪಭಾ ನದಿ ಪ್ರವಾಹದಿಂದ ಬಾದಾಮಿ ತಾಲೂಕಿನ 4 ಸೇರಿದಂತೆ ಒಟ್ಟು 60 ಗ್ರಾಮಗಳು ಜಲಾವೃತಗೊಂಡಿವೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 100 ಹೆಚ್ಚಿನ ಮನೆಗಳು ಮಳೆಯಿಂದ ಹಾನಿಯಾಗಿವೆ. ಪರಿಹಾರ ವಿತರಿಸುವ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಜಿಲ್ಲೆಯ 60 ಪ್ರವಾಹ ಬಾಧಿತ ಗ್ರಾಮಗಳ 8813 ಕುಟುಂಬಗಳ, 35,157 ಜನ ಸಂತ್ರಸ್ತರಾಗಿದ್ದು, ಅವರಿಗಾಗಿ ಒಟ್ಟು 55 ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. ಸದ್ಯ 55 ಕಾಳಜಿ ಕೇಂದ್ರಗಳಲ್ಲಿ 11,961 ಜನ ಆಶ್ರಯ ಪಡೆದಿದ್ದು, ಉಳಿದವರು ತೋಟದ ಮನೆ, ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲದೇ ಪ್ರವಾಹದಿಂದ ಜನ-ಜಾನುವಾರುಗಳಿಗೂ ತೀವ್ರ ಸಂಕಷ್ಟ ಎದುರಾಗಿದ್ದು, ಅವುಗಳಿಗಾಗಿ ಗೋ ಶಾಲೆ ಆರಂಭಿಸಿ, 9755 ಜಾನುವಾರುಗಳಿಗೆ ಆಶ್ರಯ ನೀಡಲಾಗಿದೆ.

ಜಾನುವಾರುಗಳಿಗೆ 346 ಮೆಟ್ರಿಕ್‌ ಟನ್‌ ಮೇವು ವಿತರಣೆ ಮಾಡಲಾಗಿದೆ. ಜಿಲ್ಲೆಯ ತ್ರಿವಳಿ ನದಿಯ ಪ್ರವಾಹದಿಂದ 19 ಸಣ್ಣ, 5 ದೊಡ್ಡ ಜಾನುವಾರು ಸೇರಿದಂತೆ ಒಟ್ಟು 24 ಜಾನುವಾರುಗಳು ಸಾವನ್ನಪ್ಪಿವೆ. ಅಲ್ಲದೇ 11,149 ಹೆಕ್ಟೇರ್‌ ಕೃಷಿ, 796.60 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಜಮಖಂಡಿ ತಾಲೂಕಿನ ಐತಿಹಾಸಿಕ ಶೂರ್ಪಾಲಿಯ ನರಸಿಂಹ ದೇವಸ್ಥಾನ ಹಾಗೂ ತುಬಚಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ನರಸಿಂಹ ದೇವಸ್ಥಾನ, ಕೃಷ್ಣಾ ನದಿಗೆ ಹೊಂದಿಕೊಂಡಿದ್ದು, ನಡುಗಡ್ಡೆಯಾಗಿದೆ.

ಜಿಲ್ಲೆಯ ತ್ರಿವಳಿ ನದಿಗಳ ಪ್ರವಾಹದಿಂದ ಜನ-ಜಾನುವಾರು ಸಂಕಷ್ಟಕ್ಕೆ ಈಡಾಗಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಮುಧೋಳ, ರಬಕವಿ-ಬನಹಟ್ಟಿ, ಜಮಖಂಡಿ ತಾಲೂಕಿನ ಪ್ರವಾಹ ಪೀಡಿತ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು.

ಪ್ರವಾಹ ಪೀಡಿತ ಸ್ಥಳಗಳಿಗೆ ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ ದೋಣಿಯಲ್ಲಿ ಸಂಚರಿಸಿ ಪರಿಶೀಲಿಸಿದರು. ನೆರೆ ಸಂತ್ರಸ್ತ ಜನರ ಬದುಕು ಕೊಚ್ಚಿ ಹೋಗಿದ್ದು, ಗ್ರಾಮ ಸ್ಥಳಾಂತರ, ಬೆಳೆ ಹಾನಿಗೆ ಸರಕಾರದಿಂದ ಪರಿಹಾರ ಕೊಡಿಸಿ ಎಂದು ಶಾಸಕರಿಗೆ ರೈತರು, ಮಹಿಳೆಯರು ಮನವಿ ಮಾಡಿಕೊಂಡಿದದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರವಾಹದಿಂದ ಜಮಖಂಡಿ ಭಾಗದಲ್ಲಾದ ಹಾನಿ ಹಾಗೂ ಗ್ರಾಮ ಸ್ಥಳಾಂತರದ ಬಗ್ಗೆ ಮಾತನಾಡುವುದಾಗಿ ಸಂತ್ರಸ್ತರಿಗೆ ಶಾಸಕರು ಭರವಸೆ ನೀಡಿದ್ದಾರೆ. ಜಮಖಂಡಿ ತಾಲೂಕಿನಲ್ಲಿ 6512 ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು 21 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.

Donate Janashakthi Media

Leave a Reply

Your email address will not be published. Required fields are marked *