ಬೆಳಗಾವಿ : ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿ ಪೊಲೀಸರು, ಉಪ ಪ್ರಾಂಶುಪಾಲ ಮತ್ತು ಅವರ ಪುತ್ರ ಸೇರಿದಂತೆ ಒಟ್ಟು 9 ಮಂದಿ ಮುಖ್ಯ ಆರೋಪಿಗಳನ್ನು ಬಂಧಿಸಿದ್ದಾರೆ. ನಾಲ್ವರು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆದಿದೆ.
ಬೆಳಗಾವಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಈ ಅಕ್ರಮವನ್ನು ಭೇದಿಸಿರುವ ಬೆಳಗಾವಿ ಪೊಲೀಸರು ಪ್ರಕರಣದ ಇಂಚಿಂಚೂ ತನಿಖೆ ನಡೆಸಿದ್ದಾರೆ.
2022ರ ಆಗಸ್ಟ್ 7 ರಂದು ಕೆಪಿಟಿಸಿಎಲ್ ಪರೀಕ್ಷೆ ನಡೆದಿದ್ದು, ಗದಗ-ಬೆಟಗೇರಿ ಅವಳಿ ನಗರದ 21 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಜಾಡು ಹಿಡಿದು ಬಂದ ಬೆಳಗಾವಿ ಸೈಬರ್ ಕ್ರೈಂ ಪೊಲೀಸ್ ಇನ್ಸ್‌ಪೆಕ್ಟರ್ ವಿರೇಶ್ ದೊಡ್ಡಮನಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಕ್ಕಿಬಿದ್ದಿದ್ದ ಪರೀಕ್ಷಾರ್ಥಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆ ವೇಳೆ ಬೆಳಗಾವಿಯಲ್ಲಿ ಅಕ್ರಮವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಪರೀಕ್ಷಾರ್ಥಿಗಳಿಂದ ಬಂದ ದೂರು ಮತ್ತು ಗೋಕಾಕದ ಪರೀಕ್ಷಾ ಕೇಂದ್ರದಲ್ಲಿದ್ದ ಸಿಸಿಟೀವಿ ಪರಿಶೀಲಿಸಿದ ವೇಳೆ ಆರೋಪಿ ಸಿದ್ದಪ್ಪ ಮದಿಹಳ್ಳಿ ಸ್ಮಾರ್ಟ್‌ವಾಚ್ ನೋಡಿಕೊಂಡು ಉತ್ತರ ಬರೆಯುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಈತನ ವಿಚಾರಣೆ ವೇಳೆ ಗದಗದಿಂದ ಪ್ರಶ್ನೆಪತ್ರಿಕೆ ಲೀಕ್ ಆಗಿರುವುದು ಖಚಿತಪಟ್ಟಿತ್ತು.
ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು ಹೇಗೆ?: ಪತ್ರಕರ್ತನ ಸೋಗಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದ ಉಪ ಪ್ರಾಚಾರ್ಯ ಮಾರುತಿ ಸೋನಾವನೆ ಮಗ ಸಮೀತ್ ಕುಮಾರ್ ತನ್ನ ಮೊಬೈಲ್ ಮೂಲಕ ಪ್ರಶ್ನೆ ಪತ್ರಿಕೆಯ ಫೋಟೋಗಳನ್ನು ಸೆರೆ ಹಿಡಿದಿದ್ದಾನೆ. ಅಲ್ಲದೇ, ರಾಜ್ಯದ ಬೇರೆ ಬೇರೆ ಪರೀಕ್ಷಾ ಕೇಂದ್ರಗಳಿಗೂ ಪ್ರಶ್ನೆ ಪತ್ರಿಕೆ ಕಳಿಸಿರುವ ಶಂಕೆ ವ್ಯಕ್ತವಾಗಿದೆ. ಸಮೀತ್ ಕುಮಾರನ ಮೊಬೈಲ್ಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಬಾಯಲ್ಲಿ ಡಿವೈಸ್! : ಪರೀಕ್ಷಾ ಅಕ್ರಮ ನಡೆಸಲು ಆರೋಪಿಗಳು ಅನೇಕ ಕಾರ್ಯತಂತ್ರ ಹೆಣೆಯುತ್ತಾರೆ. ಕೆಪಿಟಿಸಿಎಲ್ ಪರೀಕ್ಷೆ ವೇಳೆ ಕಿರಿದಾದ ಬ್ಲೂಟೂತ್ ಕಿವಿಯಲ್ಲಿ ಹಾಕಿಕೊಳ್ಳುತ್ತಾರೆ. ನಂತರ ಅದಕ್ಕೆ ಕನೆಕ್ಟ್ ಇರುವ ಸಾಧನವನ್ನು ಬಾಯಲ್ಲಿ ಇಟ್ಟುಕೊಂಡಿದ್ದರು. ಇನ್ನೂ ಕೆಲವರು ತೋಳಿನಲ್ಲಿ, ಬಟ್ಟೆಯಲ್ಲಿ ಸುತ್ತಿಕೊಂಡು ಒಳ ಉಡುಪಿನಲ್ಲಿ ಇಟ್ಟುಕೊಂಡಿದ್ದರು. ಕಿವಿಯಲ್ಲಿ ಹಾಕುವ ಬ್ಲೂಟೂತ್ ತೆಗೆಯಲು ಸಣ್ಣದಾದ ಕಡ್ಡಿಯೂ ಅಭ್ಯರ್ಥಿಗಳ ಬಳಿ ಪತ್ತೆಯಾಗಿವೆ.
4.5 ಲಕ್ಷಕ್ಕೆ ಪ್ರಶ್ನೆ ಪತ್ರಿಕೆ ಮಾರಾಟ!: ಗೋಕಾಕ ಹಾಗೂ ಹುಕ್ಕೇರಿ ಬಿ.ಕೆ.ಶಿರಹಟ್ಟಿಯ ಗ್ಯಾಂಗ್‌ಗೆ 4.5 ಲಕ್ಷ ನೀಡಿದರೆ ಪ್ರಶ್ನೆ ಪತ್ರಿಕೆ ನೀಡುವ ಬಗ್ಗೆ ಸುಮಿತ್‌ಕುಮಾರ್ ಡೀಲ್ ಕುದುರಿಸಿದ್ದ. ನಂತರ ಈ ಗ್ಯಾಂಗ್ ಅಭ್ಯರ್ಥಿಗಳ ಜತೆಗೆ .6 ಲಕ್ಷ ಕೊಟ್ಟರೆ ಉತ್ತರ ನೀಡುವ ಡೀಲ್ ಕುದುರಿಸಿದ್ದಾರೆ. ಮುಂಗಡವಾಗಿ 3 ಲಕ್ಷ ಹಾಗೂ ಕೀ ಉತ್ತರಗಳು ಬಿಡುಗಡೆಯಾದ ಬಳಿಕ 3 ಲಕ್ಷ ನೀಡುವ ಬಗ್ಗೆ ಮಾತುಕತೆಯಾಗಿತ್ತು.
ಬಂಧಿತ ಆರೋಪಿಗಳು : ಗೋಕಾಕ ತಾಲ್ಲೂಕಿನ ನಾಗನೂರು ಗ್ರಾಮದ ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ, ಮಾಲದಿನ್ನಿಯ ಸುನೀಲ ಅಜ್ಜಪ್ಪ ಭಂಗಿ, ಶಿರಹಟ್ಟಿ ಬಿ.ಕೆ. ಗ್ರಾಮದ ಬಸವಣ್ಣಿ ಶಿವಪ್ಪ ಡೊಣವಾಡ, ವೀರನಗಡ್ಡಿಯ ಸಂತೋಷ ಪ್ರಕಾಶ ಮಾಣಗಾವಿ, ಬೆಣಚಿನಮರಡಿಯ ಸಿದ್ಧಪ್ಪ ಕೆಂಚಪ್ಪ ಕೊತ್ತಲ, ಮಾಲದಿನ್ನಿಯ ರೇಣುಕಾ ವಿಠಲ ಜವಾರಿ, ಗದಗ- ಬೆಟಗೇರಿಯ ಅಮರೇಶ ಚಂದ್ರಶೇಖರಯ್ಯ ರಾಜೂರ, ಮಾರುತಿ ಶಂಕರ ಸೋನವಣೆ (ಉಪಪ್ರಾಂಶುಪಾಲ), ಸಮಿತ್‌ಕುಮಾರ ಮಾರುತಿ ಸೋನವಣೆ (ಉಪಪ್ರಾಂಶುಪಾಲರ ಪುತ್ರ)
ರಾಜ್ಯದಲ್ಲಿ ಇತ್ತೀಚೆಗಷ್ಟೇ ಪಿಎಸ್‌ಐ ಪರೀಕ್ಷೆಯ ಅಕ್ರಮ ಹಗರಣ ಭಾರಿ ಸದ್ದು ಮಾಡಿತ್ತು. ಈ ಪ್ರಕರಣದ ತನಿಖೆ ಇನ್ನೂ ಮುಕ್ತಾಯವಾಗಿಲ್ಲ. ಅದರ ಬೆನ್ನಲ್ಲೇ ಮತ್ತೊಂದು ಅಕ್ರಮ ಬಯಲಾಗಿದ್ದು ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.