ಬೆಂಗಳೂರು: ಬಾಕಿ ವೇತನ ಹಾಗೂ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾಳೆಯಿಂದ ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಸೇರಿದಂತೆ ರಾಜ್ಯದ ಎಲ್ಲಾಐದು ವಿದ್ಯುತ್ ಸರಬರಾಜು ಕಂಪನಿಗಳ ನೌಕರರು ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ.
ಮುಷ್ಕರ ಸಂಬಂಧ ನಾಳೆ ರಾಜ್ಯಾದ್ಯಂತ ವಿದ್ಯುತ್ ಸೇವೆಗಳಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮುಷ್ಕರದಲ್ಲಿ ಲೈನ್‌ಮ್ಯಾನ್ ಎಂಜಿನಿಯರ್‌ಗಳು ಸೇರಿ ಸುಮಾರು 60,000 ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತಾಂತ್ರಿಕ ದೋಷಗಳು, ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸುವುದು ಸೇರಿದಂತೆ ಯಾವುದೇ ಆಡಳಿತಾತ್ಮಕ ಕಾರ್ಯಗಳನ್ನು ನೌಕರರು ನಾಳೆ ನಿರ್ವಹಿಸದಿರುವ ಕಾರಣ ವಿದ್ಯುತ್ ಪೂರೈಕೆಯಲ್ಲಿಅಡಚಣೆ ಎದುರಾಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.
ನೌಕರರ ಪ್ರಮುಖ ಬೇಡಿಕೆಗಳೇನು ?
* 2022ರ ಏಪ್ರಿಲ್ 1 ರಿಂದ ಬಾಕಿ ವೇತನ ಬಿಡುಗಡೆ ಮಾಡಬೇಕು.
* ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.
* ಶೇ.40% ವೇತನವನ್ನು ಹೆಚ್ಚಳ ಮಾಡುವುದು.
* ವಿದ್ಯುತ್ ಕಂಪನಿಗಳ ಖಾಸಗೀಕರಣ ಉದ್ದೇಶದ ಪ್ರಸ್ತಾವಿತ ಮಸೂದೆಯನ್ನು ಹಿಂಪಡೆಯಬೇಕು ಮುಂತಾದವು..
ಇದನ್ನೂ ಓದಿ : ಕೆಪಿಟಿಸಿಎಲ್ ಎಇ ಬಡ್ತಿಗೆ ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್!
ಕಳೆದ ವರ್ಷ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯು ನಡೆದಿತ್ತು. ಈ ಪರೀಕ್ಷಾ ಸಂದರ್ಭದಲ್ಲಿ ಅಕ್ರಮ ನಡೆದು ಈ ಸಂಬಂಧ ಸುಮಾರು 20ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿತ್ತು. ಪರೀಕ್ಷಾ ಅಕ್ರಮವನ್ನು ತಡೆಯುವಲ್ಲಿ ಸರ್ಕಾರದ ನಿರ್ಲಕ್ಷ್ಯದ ಕುರಿತು ಹಲವು ಅಭ್ಯರ್ಥಿಗಳು ಕಿಡಿಕಾರಿದ್ದರು. ಇದೀಗ ನೌಕರರು ಸಹ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರವನ್ನು ಹಮ್ಮಿಕೊಂಡಿದ್ದಾರೆ. ಸರ್ಕಾರ ಈ ಬಗ್ಗೆ ಚಿತ್ತ ವಹಿಸುತ್ತಾ ಎಂಬುದನ್ನು ಕಾದುನೋಡಬೇಕಾಗಿದೆ.