ಕೆಪಿಟಿಸಿಎಲ್‌ ಎಇ ಬಡ್ತಿಗೆ ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್!

  • ಕೆಪಿಟಿಸಿಎಲ್‌ ಎಇ ಭಡ್ತಿಗೆ ತಾತ್ಕಾಲಿಕ ತಡೆ
  • ತಕರಾರು ಅರ್ಜಿ ಸಲ್ಲಿಸಿದ್ದ ಬಿ, ಸುಮಾ
  • ನಾಲ್ಕು ವಾರಗಳಲ್ಲಿ ಸೂಕ್ತ ಆದೇಶ ನೀಡುವಂತೆ ಮನವಿ

ಬೆಂಗಳೂರು: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್‌)ದ ಸಹಾಯಕ ಎಂಜಿನಿಯರ್‌ ಹುದ್ದೆಗೆ ಭಡ್ತಿ ನೀಡಿ ಅಂತಿಮ ಪಟ್ಟಿ ಪ್ರಕಟಿಸುವ  ಪ್ರಕ್ರಿಯೆಗೆ ಹೈಕೋರ್ಟ್‌ ತಾತ್ಕಾಲಿಕ ತಡೆ ನೀಡಿದೆ.

ಸಹಾಯಕ ಎಂಜಿನಿಯರ್‌ ಹುದ್ದೆಯ ಭಡ್ತಿಗೆ ಕೆಪಿಟಿಸಿಎಲ್‌ ಪ್ರಕಟಿಸಿದ ಸಂಭಾವ್ಯ ಜೇಷ್ಠತಾ ಪಟ್ಟಿಯನ್ನು ಪ್ರಶ್ನಿಸಿ ಕೆಪಿಟಿಸಿಎಲ್‌ನಲ್ಲಿ ಸಹಾಯಕ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ದಾವಣಗೆರೆ ಮೂಲದ ಬಿ. ಸುಮಾ ಅವರು ಸಲ್ಲಿಸಿದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ಸಂಭಾವ್ಯ ಜ್ಯೇಷ್ಠತಾ ಪಟ್ಟಿಗೆ ಅರ್ಜಿದಾರರು ಸಲ್ಲಿಸಿರುವ ಆಕ್ಷೇಪಣೆಯನ್ನು ಪರಿಗಣಿಸಬೇಕು. ಅನಂತರ ಅರ್ಜಿದಾರರು ಹೈದರಾಬಾದ್‌ ಕರ್ನಾಟಕ ಪ್ರದೇಶದ ಮೀಸಲು ಕೋಟಾದಡಿ ಸಹಾಯಕ ಎಂಜಿನಿಯರ್‌ ಹುದ್ದೆ ಭಡ್ತಿ ಪಡೆಯಲು ಅರ್ಹರಾಗಿದ್ದಾರೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಪರಿಶೀಲನೆಮಾಡಿ ನಾಲ್ಕು ವಾರಗಳಲ್ಲಿ ಸೂಕ್ತ ಅದೇಶ ಹೊರಡಿಸಬೇಕು. ಅಲ್ಲಿಯತನಕ ಸಹಾಯಕ ಎಂಜಿನಿಯರ್‌ ಹುದ್ದೆಗೆ ಭಡ್ತಿಯ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಬಾರದು ಎಂದು ಕೆಪಿಟಿಸಿಎಲ್‌ಗೆ ನ್ಯಾಯಪೀಠ ತಿಳಿಸಿದೆ.

2022ರ ಜ. 10ರಂದು ಕೆಪಿಟಿಸಿಎಲ್‌ ಸಂಭಾವ್ಯ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿತ್ತು. ಈ ಪಟ್ಟಿಗೆ ಜ. 12 ಮತ್ತು ಮಾ. 17ರಂದು ಆಕ್ಷೇಪಣೆ ಸಲ್ಲಿಸಿದ್ದ ಬಿ. ಸುಮಾ, ಎಂಬುವರು ಹುದ್ದೆ ಭಡ್ತಿ ಪಡೆಯಲು ಹೈದರಾಬಾದ್‌ ಕರ್ನಾಟಕ ಪ್ರದೇಶದ ಮೀಸಲು ಕೋಟಾದಡಿ ತಮಗೆ ಅರ್ಹತೆ ಇದೆ ಎಂದು ಹೇಳಿದ್ದರು. ಆದರೆ, ತಮ್ಮ ಮನವಿ ಪರಿಗಣಿಸದೆ ಸಹಾಯಕ ಎಂಜಿನಿಯರ್‌ ಹುದ್ದೆಗೆ ಭಡ್ತಿ ಅಂತಿಮ ಪಟ್ಟಿ ಪ್ರಕಟಿಸುವ ಪ್ರಕ್ರಿಯೆಯನ್ನು ಕೆಪಿಟಿಸಿಎಲ್‌ ಮುಂದುವರಿಸಿದೆ ಎಂದು ದೂರಿ ಅವರು ಹೈಕೋರ್ಟ್‌ ಮೊರೆಹೊಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *