ಹಿರಿಯ ರೈತ ನಾಯಕ ಕಾಮ್ರೇಡ್ ಚನ್ನಪ್ಪ ಆನೇಗುಂದಿ ರವರ ಮೇಲೆ ಬೀಜ,ಗೊಬ್ಬರ ಮಾರಾಟಗಾರರ ದೂರು -KPRS ತೀವ್ರ ಖಂಡನೆ

ಕೃಷಿ ಇಲಾಖೆ ಹಾಗೂ ಯಾದಗಿರಿ ಜಿಲ್ಲಾ ಪಂಚಾಯತ್ ಜಂಟಿಯಾಗಿ ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಾಗಾರದಲ್ಲಿ ನಕಲಿ ಹಾಗೂ ಕಳಪೆ ಬೀಜ ,ರಸಗೊಬ್ಬರ ,ಕ್ರಿಮಿನಾಶಕ ಮತ್ತು ಕಾಳಸಂತೆ ಮಾರಾಟದ ಕುರಿತು ಗಮನ ಸೆಳೆದ ಕಾರಣಕ್ಕಾಗಿ ಕೃಷಿ ಪರಿಕರಗಳ ಮಾರಾಟಗಾರರು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಸಹ ಕಾರ್ಯದರ್ಶಿಗಳು, ಯಾದಗಿರಿ ಜಿಲ್ಲಾ ಅಧ್ಯಕ್ಷರು ಆಗಿರುವ ಹಿರಿಯ ರೈತ ಮುಖಂಡ ಕಾಮ್ರೇಡ್ ಚನ್ನಪ್ಪ ಆನೇಗುಂದಿ ರವರ ಮೇಲೆ ಸುಳ್ಳು ದೂರು ನೀಡಿರುವುದನ್ನು ಹಾಗೂ ನ್ಯಾಯೋಚಿತವಾಗಿ ಪರಿಶೀಲಿಸದೇ ಮಾರಾಟಗಾರರ ದೂರು ದಾಖಲು ಮಾಡಿಕೊಂಡಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.

ಕಾರ್ಯಾಗಾರದಲ್ಲಿ ಆಹ್ವಾನಿತರಾಗಿ ರೈತರಿಗೆ ಆಗುತ್ತಿರುವ ಸೂಕ್ತ ರಶೀದಿ ನೀಡದೇ ಕೃಷಿ ಪರಿಕರಗಳ ಖರೀದಿಗೆ ಒತ್ತಾಯಿಸುವುದು, ದಾಸ್ತಾನು ಪಟ್ಟಿ, ದರ ಪಟ್ಟಿ ಪ್ರಕಟಿಸದೇ ಕಾಳಸಂತೆ ದರದಲ್ಲಿ ಮಾರಾಟ ಮಾಡುವುದು, ರೈತರು ಕೇಳಿದ ಬೀಜ ,ಕ್ರಿಮಿನಾಶಕ ಹಾಗೂ ಗೊಬ್ಬರ ನೀಡದೇ ಕಳಪೆ ಹಾಗೂ ನಕಲಿ ಬ್ರಾಂಡ್ ಗಳನ್ನು ಕೊಳ್ಳುವಂತೆ ಒತ್ತಾಯಿಸುವುದು ಮುಂತಾದ ಕಾನೂನು ಬಾಹಿರ ಹಾಗೂ ಅನುಚಿತ ವ್ಯಾಪಾರ ಕ್ರಮಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ಜಿಲ್ಲಾ ಉಸ್ತುವಾರಿ ಸಚಿವರು ಶಹಾಪುರ ಶಾಸಕರಾದ ಶರಣಬಸಪ್ಪ ದರ್ಶನಾಪುರ ರವರನ್ನು ಚನ್ನಪ್ಪ ಆನೇಗುಂದಿ ರವರು ಆಗ್ರಹಿಸಿದ್ದನ್ನು ತಮಗೆ ಆದ ಅವಮಾನ ಎಂದು ತಿಳಿದು ಕಾರ್ಯಾಗಾರದಲ್ಲಿ ಆಗಮಿಸಿದ್ದ ಸುಮಾರು 400 ಕ್ಕೂ ಹೆಚ್ಚು ಇದ್ದ ಕೃಷಿ ಪರಿಕರಗಳ ಮಾರಾಟಗಾರರು ಮೆರವಣಿಗೆ ತೆಗೆದು ಭೀಮರಾಯಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದು, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡಂತೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಅಪಾದಿಸಿದೆ.

ಜಿಲ್ಲಾ ಪಂಚಾಯತ್ ಸಿಇಓ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಮುಂತಾದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲೇ ಉಸ್ತುವಾರಿ ಸಚಿವರಿಗೆ ಆಹವಾಲು ಹೇಳಿಕೊಳ್ಳುವಾಗ ಸುಮ್ಮನಿದ್ದ ಕೃಷಿ ಪರಿಕರಗಳ ಮಾರಾಟಗಾರರು ಅವರೆಲ್ಲರೂ ಕಾರ್ಯಕ್ರಮ ಮುಗಿಸಿ ತೆರಳಿದ ನಂತರ ಕೃಷಿ ಪರಿಕರಗಳ ಮಾರಾಟ ಸಂಘದ ರಾಜ್ಯಾಧ್ಯಕ್ಷ ಬಸನಗೌಡ ಮಾಲೀ ಪಾಟೀಲ್ ಹಾಗೂ ಅಶೋಕರೆಡ್ಡಿ ಲಿಂಗದಾಳ ರವರ ನೇತೃತ್ವದಲ್ಲಿ ದೂರು ಹೇಳಿದ್ದಕ್ಕಾಗಿ ಅವಾಚ್ಯವಾಗಿ ನಿಂದಿಸಿದ್ದಾರೆ ,ಕೊಲೆ ಬೆದರಿಕೆ ಒಡ್ಡಿದ್ದಾರೆ ಮತ್ತು ಸರಿಯಾಗಿ ಬುದ್ದಿ ಕಲಿಸುವುದಾಗಿ ಬೆದರಿಕೆ ಹಾಕಿ ಪೊಲೀಸ್ ದೂರು ನೀಡಿದ್ದಾರೆ. ಇಂತಹ ಬೆದರಿಕೆಗಳಿಂದ ರೈತ ಹೋರಾಟವನ್ನು ಬಗ್ಗು ಬಡಿಯಲು ಸಾಧ್ಯವಿಲ್ಲ . ನಕಲಿ ಹಾಗೂ ಕಳಪೆ ಕೃಷಿ ಪರಿಕರಗಳ ಮಾರಾಟ ಮತ್ತು ಕಾಳಸಂತೆ ಮಾರಾಟದ ವಿರುದ್ಧ ರೈತ ಹೋರಾಟ ವನ್ನು ಇಂತಹ ಗೊಡ್ಡು ಬೆದರಿಕೆ ಮೂಲಕ ನಿಲ್ಲಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ತಿಳಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಧೈರ್ಯವಾಗಿ ದೂರು ಹೇಳಿದ್ದಕ್ಕೆ ನಿಂದನೆ,ಬೆದರಿಕೆ, ದೌರ್ಜನ್ಯ ಎಸಗಿದ ಬಸನಗೌಡ ಮಾಲೀ ಪಾಟೀಲ್, ಅಶೋಕ ರೆಡ್ಡಿ ಲಿಂಗದಾಳ ಮುಂತಾದವರ ಮೇಲೆ ಶಹಾಪುರ ತಾಲ್ಲೂಕು ಅಧ್ಯಕ್ಷ ಭೀಮಣ್ಣ ಟಪೇದಾರ್ ನೀಡಿದ್ದ ದೂರನ್ನು ದಾಖಲಿಸಿಕೊಳ್ಳದೇ ತಿರಸ್ಕರಿಸಿ ದೂರು ಅರ್ಜಿಯ ಮೇಲೆ ತಿರಸ್ಕರಿಸಲಾಗಿದೆ ಎಂದು ಸಹಿ ಮತ್ತು ಶೀಲು ಹಾಕಿದ್ದಾರೆ. ಮಾರಾಟಗಾರರು ನೀಡಿದ ದೂರನ್ನು ದಾಖಲಿಸಿ ರೈತರು ನೀಡಿದ ದೂರನ್ನು ತಿರಸ್ಕರಿಸಿರುವುದು ಪೊಲೀಸರ ಪಕ್ಷಪಾತವನ್ನು ತೋರುತ್ತದೆ. ಕೂಡಲೇ ರೈತರು ನೀಡಿರುವ ದೂರನ್ನು ದಾಖಲಿಸಿ ನಿಂದನೆ, ಬೆದರಿಕೆ ದೌರ್ಜನ್ಯ ಎಸಗಿರುವ ಗುಂಪು ಹಲ್ಲೆಗೆ ಪ್ರಚೋದಿಸಿರುವ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ರಾಜ್ಯಾಧ್ಯಕ್ಷರು ಮತ್ತಿತರರನ್ನು ಬಂಧಿಸಬೇಕು. ಕೂಡಲೇ ನಕಲಿ, ಕಳಪೆ ಬೀಜ, ಗೊಬ್ಬರ, ಕ್ರೀಮಿನಾಶಕಗಳನ್ನು ವಶಕ್ಕೆ ಪಡೆದು ನಾಶ ಪಡಿಸಬೇಕು ,ಕಾಳಸಂತೆ ಮಾರಾಟ ತಡೆಗಟ್ಟಿ ದಾಸ್ತಾನು ಪಟ್ಟಿ ಮತ್ತು ದರ ಪಟ್ಟಿ ಯನ್ನು ಎಲ್ಲರಿಗೂ ಕಾಣುವಂತೆ ಪ್ರತಿ ಮಾರಾಟಗಾರರು ಪ್ರಕಟಿಸುವಂತೆ ಕ್ರಮ ವಹಿಸಬೇಕು ,ದಾಖಲಾಗಿರುವ ಸುಳ್ಳು ದೂರನ್ನು ರದ್ದುಪಡಿಸಿ ಅನ್ಯಾಯ -ಅಕ್ರಮದ ವಿರುದ್ಧ ,ಕಾನೂನು ಬಾಹಿರ ಚಟುವಟಿಕೆ ಗಳ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ರೈತ ನಾಯಕರಿಗೆ ಸೂಕ್ತ ರಕ್ಷಣೆ ನೀಡಬೇಕು .ಇಲ್ಲವಾದರೆ ಬೃಹತ್ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಎಚ್ಚರಿಸಿದೆ.

Donate Janashakthi Media

Leave a Reply

Your email address will not be published. Required fields are marked *