ಬೆಂಗಳೂರು : ಬಿಎಂಐಸಿ ಯೋಜನೆಯ ನೈಸ್ ಕಂಪನಿ ಹಗರಣ,ಭ್ರಷ್ಟಾಚಾರ, ಅಕ್ರಮ ಕುರಿತು ಟಿ ಬಿ ಜಯಚಂದ್ರ ಆಧ್ಯಕ್ಷತೆಯ ಸದನ ಸಮಿತಿ ವರದಿ ಅಂಗೀಕರಿಸಿ ಎಂಟು ವರ್ಷಗಳಾದರೂ ಜಾರಿ ಮಾಡಿಲ್ಲವೇಕೆ ಎಂದು ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಾಧೀಶರಾದ ನ್ಯಾಯಮೂರ್ತಿ ವಿ ಗೋಪಾಲಗೌಡ ರವರು ಖಾರವಾಗಿ ಪ್ರಶ್ನಿಸಿದರಲ್ಲದೇ ಜಾರಿ ಮಾಡುವಂತೆ ಆಗ್ರಹಿಸಿದರು.

ಅವರು ಬೆಂಗಳೂರಿನ ತುಮಕೂರು ರಸ್ತೆಯ ಜಯಸೂರ್ಯ ಸಭಾಂಗಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (KPRS) ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಸಂಘಟಿಸಿದ್ದ ಬೆಂಗಳೂರು ಜಿಲ್ಲಾ ಮಟ್ಟದ ನೈಸ್ ಸಂತ್ರಸ್ಥ ರೈತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಬಿಎಂಐಸಿ ಯೋಜನೆಗಾಗಿ ನೈಸ್ ಕಂಪನಿ ಜೊತೆ ಮಾಡಿಕೊಂಡ ಒಪ್ಪಂದ 27 ವರ್ಷಗಳಾದರೂ ಕಾರ್ಯಗತ ಆಗಿಲ್ಲ. ಪ್ರತಿಯೊಂದು ಹಂತದಲ್ಲಿಯೂ ಒಪ್ಪಂದಗಳನ್ನು ನೈಸ್ ಕಂಪನಿ ಉಲ್ಲಂಘಿಸಿದೆ. ಆದರೂ ನೈಸ್ ಕಂಪನಿ ಪರವಾಗಿ ಭೂ ಸ್ವಾಧೀನ ಪ್ರಕ್ರಿಯೆ ಮುಂದುವರೆಸುತ್ತಿರುವುದು ರೈತ ವಿರೋಧಿ ಹಾಗೂ ಜನ ವಿರೋಧಿ ಕ್ರಮ ವಾಗಿದೆ. ಈ ಕೂಡಲೇ ಭೂ ಸ್ವಾಧೀನ ರದ್ದುಪಡಿಸಿ ರೈತರಿಗೆ ಜಮೀನು ವಾಪಸ್ಸು ಮಾಡಲು ಆಗ್ರಹಿಸಿದರು.

ಭೂ ಸ್ವಾಧೀನದ ಅಕ್ರಮ ಮತ್ತು ಕಾನೂನು ಬಾಹಿರ ಕ್ರಮಗಳನ್ನು ಸಿಂಗೂರ್ ತೀರ್ಪಿನಲ್ಲಿ ವಿವರವಾಗಿ ಚರ್ಚಿಸಲಾಗಿದ್ದು, ಪರಿಹಾರ ಹಣ ಮರು ಪಾವತಿಸದೇ ಭೂಮಿ ವಾಪಸ್ಸು ಮಾಡುವ ತೀರ್ಪು ನೀಡಲಾಗಿದೆ. ಅದೇ ತೀರ್ಪಿನ ಆಧಾರದಲ್ಲಿ ಭೂ ಸ್ವಾಧೀನ ರದ್ದುಪಡಿಸಬಹುದು ಎಂದು ವಿವರಿಸಿದರು.

ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘಿಸಿ, ಕೆಐಎಡಿಬಿ ಭೂ ಸ್ವಾಧೀನ ದ ಮೂಲಕ ಪಡೆದ ಭೂಮಿಯನ್ನು ಮೂಲ ಒಪ್ಪಂದ ಕ್ಕೆ ವಿರುದ್ಧವಾಗಿ ವಸತಿ -ಅಪಾರ್ಟ್ ಮೆಂಟ್ ನಿರ್ಮಿಸಿ ಮಾರಾಟ ಮಾಡುತ್ತಿರುವ ನೈಸ್ ಸಂಸ್ಥೆ ಅಕ್ರಮ ಕ್ಕೆ ಸರ್ಕಾರಗಳು ಕಡಿವಾಣ ಹಾಕಬೇಕು ಎಂದು ತಿಳಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘ(KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಮಾತನಾಡಿ, ರಸ್ತೆ ನಿರ್ಮಾಣದ ಹೆಸರಿನಲ್ಲಿ ಬೃಹತ್ ಪ್ರಮಾಣದ ಭ್ರಷ್ಟಾಚಾರ, ಹಗರಣ,ಅಕ್ರಮ ನಡೆಸಿರುವ ನೈಸ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು.ರೈತರ ಒಪ್ಪಿಗೆ ಇಲ್ಲದೇ ರೈತರ ಗಮನಕ್ಕೆ ಬಾರದಂತೆ ಭೂ ಸ್ವಾಧೀನ ಮಾಡಿರುವ ಎಲ್ಲಾ ಪ್ರಕರಣಗಳನ್ನು ರದ್ದು ಪಡಿಸಬೇಕು. ವರ್ಷ ಕ್ಕೆ ಹತ್ತು ರೂ ನಂತೆ ಮೂವತ್ತು ವರ್ಷಗಳಿಗೆ ಗುತ್ತಿಗೆ ಪಡೆದಿರುವ ಸರ್ಕಾರಿ ಭೂಮಿಯನ್ನು ಸರ್ಕಾರ ವಾಪಸ್ಸು ಪಡೆಯಬೇಕು ,ಯಾವುದೇ ಕಾರಣಕ್ಕೂ ಗುತ್ತಿಗೆ ನವೀಕರಣ ಮಾಡಬಾರದು. ಮೂವತ್ತು ವರ್ಷಗಳ ಹಿಂದಿನ ಭೂ ಸ್ವಾಧೀನ ಪ್ರಕಟಣೆ ಯ ಆಧಾರದಲ್ಲಿ ಭೂಮಿ ಕಿತ್ತುಕೊಳ್ಳಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಎಟಿ ರಾಮಸ್ವಾಮಿ ಸಮಿತಿ, ಟಿಬಿ ಜಯಚಂದ್ರ ಸಮಿತಿ ಹಾಗೂ ಹಲವಾರು ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳಲ್ಲಿ ಒಪ್ಪಂದಕ್ಕೆ ಹೊರತಾದ ಹೆಚ್ಚುವರಿ ಭೂ ಕಬಳಿಕೆ ವಶಕ್ಕೆ ಪಡೆಯಲು ಸ್ಪಷ್ಟವಾಗಿ ಹೇಳಿದ್ದರೂ ವಾಪಸ್ಸು ಪಡೆಯಲು ಮೀನಮೇಷ ಎಣಿಸಲಾಗುತ್ತಿದೆ .ಈಗಾಗಲೇ ಭ್ರಷ್ಟ ರಾಜಕಾರಣಿಗಳು, ಉನ್ನತ ಅಧಿಕಾರಿಗಳ ಭ್ರಷ್ಟ ಬೆಂಬಲದ ಮೇಲೆ ಕೆಐಎಡಿಬಿ, ಪಿ ಡಬ್ಲ್ಯೂ ಡಿ ಮುಂತಾದ ಇಲಾಖೆಗಳನ್ನು ದಾಳವಾಗಿ ಬಳಸಿ ನಡೆಸಿದ ಕಾನೂನು ಬಾಹಿರ ,ಅಕ್ರಮಗಳ ವಿರುದ್ಧ ತಮ್ಮ ಭೂಮಿ ರಕ್ಷಿಸಿಕೊಳ್ಳಲು ಕೋರ್ಟ್ ಗಳಿಗೆ ಅಲೆದಾಡಿ ಲಕ್ಷಾಂತರ ರೂ ಕಳೆದುಕೊಂಡಿದ್ದಾರೆ. ಇಂತಹ ರೈತ ರನ್ನು ಭೂ ಕಬಳಿಕೆಯಿಂದ ಕಾಪಾಡಬೇಕಾದ ಸರ್ಕಾರಗಳು ನೈಸ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾವೇಶದ ಅಧ್ಯಕ್ಷತೆಯನ್ನು ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಅಧ್ಯಕ್ಷ ಎನ್ ವೆಂಕಟಾಚಲಯ್ಯ ವಹಿಸಿದ್ದರು ,ನೈಸ್ ಹೋರಾಟ ಸಮಿತಿಯ ಮುಖಂಡರಾದ ವೆಂಕಟಚಲಪತಿ,ಸತ್ಯನಾರಾಯಣ, ಯೋಗನರಸಿಂಹಮೂರ್ತಿ, ಸ್ವಾಮಿರಾಜ್ ,ಸಣ್ಣರಂಗಯ್ಯ ,ಅಣ್ಣಯ್ಯ, ಚಂದ್ರಣ್ಣ,ಚನ್ನೇಗೌಡ, ಶ್ರೀನಿವಾಸ ಮುಂತಾದವರು ವೇದಿಕೆಯಲ್ಲಿ ಇದ್ದರು

Donate Janashakthi Media

Leave a Reply

Your email address will not be published. Required fields are marked *