ರೈತ ವಿರೋಧಿ ಸರಕಾರವನ್ನು ಮನೆಗೆ ಕಳುಹಿಸಿ – ಹನನ್‌ ಮೊಲ್ಲಾ

ರಾಯಚೂರು: ‘ರೈತರ ಸಮಸ್ಯೆಗೆ ಸ್ಪಂದಿಸದ ರೈತ ವಿರೋಧಿ ಸರ್ಕಾರವನ್ನು ಮುಂದುವರಿಯಲು ಅವಕಾಶ ನೀಡ ಬೇಡಿ’ ಎಂದು ಅಖಿಲ ಭಾರತ ಕಿಸಾನ್‌ ಸಭಾ (ಎಐಕೆಎಸ್‌) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹನನ್‌ ಮೊಲ್ಲಾ ಕರೆ ನೀಡಿದರು.

ಕರ್ನಾಟಕ ಪ್ರಾಂತ ರೈತ ಸಂಘದ 17ನೇ ರಾಜ್ಯ ಸಮ್ಮೇಳನದ ಪ್ರಯುಕ್ತ ಶುಕ್ರವಾರ ನಗರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು,
‘ಕೃಷಿವೆಚ್ಚ ಹೆಚ್ಚಳವಾಗಿದ್ದು, ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ದೊರೆಯುತ್ತಿಲ್ಲ’ ಎಂದು ಆಕ್ರೋಶ ಹೊರಹಾಕಿದರು. ‘ಸಂಕಷ್ಟಕ್ಕೆ ಸಿಲುಕಿರುವ ರೈತರು ಆತ್ಮಹತ್ಯೆ ಮಾರ್ಗ ಹಿಡಿದಿದ್ದಾರೆ. ಆದರೆ, ಕೇಂದ್ರ ಸರ್ಕಾರ ಉದಾಸೀನ ಮನೋಭಾವ ತೋರಿಸುತ್ತಿದೆ. ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

‘ದೇಶದಲ್ಲಿ ಈವರೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರದ ಫಸಲ್ ಬಿಮಾ ಯೋಜನೆಯಿಂದ  ಖಾಸಗಿ ವಿಮಾ ಕಂಪೆನಿಗಳಿಗೆ ಲಾಭವಾಗಿದೆ ಹೊರತು ರೈತರಿಗೆ ಅಲ್ಲ.ಕರಾಳ ಕಾಯ್ದೆಗಳ ವಿರುದ್ಧ ದೆಹಲಿ ರೈತರು ಹೋರಾಟ ಆರಂಭಿಸಿದಾಗ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈತ ಹೋರಾಟ ಹಕ್ಕಿಕ್ಕಲು ಶಕ್ತಿ ಪ್ರದರ್ಶನ ಮಾಡಿದರು. ರೈತ ಶಕ್ತಿಗೆ ಮಣಿಯಲೇ ಬೇಕಾಯಿತು. ಒಂದು ವರ್ಷ ನಡೆಸಿದ ಐತಿಹಾಸಿಕ ಹೋರಾಟಕ್ಕೆ ಮಣಿದು ಕೇಂದ್ರವು ಮೂರು ಕಾಯ್ದೆಗಳನ್ನು ವಾಪಸ್‌ ಪಡೆದಿದೆ ಎಂದರು.

ಎಐಕೆಎಸ್‌ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಡಾ.ವಿಜುಕೃಷ್ಣನ್‌ ಮಾತನಾಡಿ, ದೇಶದಲ್ಲಿ ಇಂದಿಗೂ ರೈತರು ಸಂಕಷ್ಟ ಅನುಭವಿಸುವುದು ತಪ್ಪುತ್ತಿಲ್ಲ. ಸ್ವಾಮಿನಾಥನ್‌ ವರದಿ ಆಧರಿಸಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಕಾಯ್ದೆ ರೂಪದಲ್ಲಿ ಜಾರಿಗೊಳಿಸುತ್ತಿಲ್ಲ. ಆದರೆ ಕೇರಳ ಒಂದು ರಾಜ್ಯದಲ್ಲಿ ಮಾತ್ರ ಕೃಷಿ ಉತ್ಪನ್ನಗಳಿಗೆ ಯೋಗ್ಯದರ ನೀಡುವ ಕೆಲಸವನ್ನು ಅಲ್ಲಿನ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.  ಆದರೆ ಕೇಂದ್ರ ಸರಕಾರ ಮತ್ತು ಕರ್ನಾಟಕ ಸರಕಾರ ರೈತರ ಜೊತೆ ಚಲ್ಲಾಟ ಆಡುತ್ತಿವೆ. ಅವರು ಸಂಕಷ್ಟಗಳಿಗೆ ಪರಿಹಾರ ನೀಡುತ್ತಿಲ್ಲ, ಹಾಗಾಗಿ, ‘ಮುಂದಿನ ದಿನಗಳಲ್ಲಿ ಗ್ರಾಮದಿಂದ ಅಖಿಲ ಭಾರತ ಮಟ್ಟದವರೆಗೆ ರೈತ ರನ್ನು ಸಂಘಟಿಸಿ ಚಳವಳಿ ರೂಪಿ ಸಲಾಗುವುದು. ರೈತ ವಿರೋಧಿ ನೀತಿಗಳನ್ನು ರೂಪಿಸುವ ಸರಕಾರಗಳಿಗೆ ಬುದ್ಧಿ ಕಲಿಸಲಾಗುವುದು’ ಎಂದರು.

ಬಹಿರಂಗ ಸಭೆಯಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹನನ್ ಮೊಲ್ಲ ರವರು ರಚಿಸಿರು “ಕಿಸಾನ್ ಸಭಾದ ಸಂಕ್ಷಿಪ್ತ ಚರಿತ್ರೆ” ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಕೆಪಿಆರ್‌ಎಸ್‌ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ಮಾತನಾಡಿ ಸಮ್ಮೇಳನದ ಮಹತ್ವವನ್ನು ವಿವರಿಸಿದರು. ಈ ಸಮ್ಮೇಳನವು ಮೂರು ದಿನಗಳ ಕಾಲ ನಡೆಯಲಿದ್ದು, ಕೃಷಿ ಕುರಿತಾದ ಚರ್ಚೆಗಳು ನಡೆಯಲಿವೆ. ಅಕ್ಟೋಬರ್‌ 16 ರಂದು ನೀತನ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು.
ವೇದಿಕೆಯ ಮೇಲೆ ರೈತ ಮುಖಂಡರಾದ ವೀರನಗೌಡ, ನರಸಣ್ಣ ನಾಯಕ್, ಕೆ.ಜಿ.ವಿರೇಶ್, ಬಿ.ಎಸ್‌.ಸೊಪ್ಪಿನ್‌, ಶಾಂತರಾಮ ನಾಯಕ, ಶರಣಬಸಪ್ಪ, ಮಂಜುನಾಥರೆಡ್ಡಿ, ಲಕ್ಷ್ಮೀ ನಾರಾಯಣ, ನವೀನಕುಮಾರ್‌, ವೆಂಕಟಚಲಯ್ಯ, ಜಿ. ನಾಗರಾಜ, ದೇವೇಂದ್ರಗೌಡ, ಶಬ್ಬೀರ್‌,  ಸೇರಿದಂತೆ ಮತ್ತಿತರರು ಇದ್ದರು.
Donate Janashakthi Media

Leave a Reply

Your email address will not be published. Required fields are marked *