ಉಡುಪಿ: ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕೆರೆಯಲ್ಲಿ ಕೊರಗ ಸಮುದಾಯದ ಮೆಹಂದಿ ಶಾಸ್ತ್ರ ನಡೆಯುತ್ತಿದ್ದ ಮನೆಗೆ ದಾಳಿ ನಡೆಸಿ ಲಾಠಿಚಾರ್ಜ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಉಪನಿರೀಕ್ಷಕ ಬಿ.ಪಿ. ಸಂತೋಷ್ ಎಂಬಾತನನ್ನು ಅಮಾನತುಗೊಳಿಸಿದ್ದು, ಐವರು ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸಲಾಗಿದೆ.
ಸೋಮವಾರ ರಾತ್ರಿ ಮೆಹಂದಿ ಕಾರ್ಯಕ್ರಮ ನಡೆಸುತ್ತಿದ್ದ ಮನೆಗೆ ನುಗ್ಗಿದ ಪೊಲೀಸರು ಕ್ಷುಲ್ಲಕ ಕಾರಣಕ್ಕೆ ಮದುಮಗ ಸೇರಿದಂತೆ ಇತರರ ಮೇಲೆ ಹಲ್ಲೆ ನಡೆಸಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಘಟನೆ ಸಂಬಂಧ ಕೋಟ ಪೊಲೀಸ್ ಠಾಣೆ ಪಿಎಸ್‌ಐ ಸಂತೋಷ್ರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಉಳಿದ ಐವರು ಪೊಲೀಸರನ್ನು ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಐಜಿಪಿ ಆದೇಶ ಹೊರಡಿಸಿದ್ದಾರೆ.
ಮದುಮಗ ಸೇರಿದಂತೆ ಹಲವರಿಗೆ ಥಳಿಸಿದ್ದ ಪೊಲೀಸರ ರಾಕ್ಷಸೀ ಕೃತ್ಯದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗಿತ್ತು. ಸಮುದಾಯದ ಮುಖಂಡರು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳದೇ ಹೋದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದರು. ಜನಪರು ಸಂಘಟನೆಗಳು ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿ. ಪೊಲೀಸರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದವು. ಹೀಗಾಗಿ ಉಡುಪಿ ಎಸ್ಪಿ ತನಿಖೆಗೆ ಆದೇಶಿಸಿದ್ದು, ಇದೀಗ ದರ್ಪ ಮೆರೆದ ಸಿಬ್ಬಂದಿ ವಿರುದ್ಧ ಕ್ರಮಕೈಗೊಂಡಿದ್ದಾರೆ. ಪೊಲೀಸ್ ದೌರ್ಜನ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದರೆ, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದರು.