ಕಾರಟಗಿ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ದಲಿತ ಸಮುದಾಯದ ಮಗು ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ಮಗುವಿನ ಪಾಲಕರಿಗೆ ದಂಡ ಹಾಕಿದ ಪ್ರಕರಣ ಮಾಸುವ ಮುನ್ನವೇ ಇಂತಹದ್ದೇ ಮತ್ತೂಂದು ಪ್ರಕರಣ ಕಾರಟಗಿ ತಾಲೂಕಿನ ನಾಗನಕಲ್ ಗ್ರಾಮದಲ್ಲಿ ನಡೆದಿದೆ.
ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದ ಪರಿಶಿಷ್ಟ ಜಾತಿಗೆ ಸೇರಿದ ಸಿಂಧೋಳ ಸಮುದಾಯದ ಯುವಕ ಮಾರೆಪ್ಪ ಅವರಿಗೆ, ದೇವಸ್ಥಾನದ ಆಡಳಿತ ಮಂಡಳಿ ₹11 ಸಾವಿರ ದಂಡ ವಿಧಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ದಲಿತ ವ್ಯಕ್ತಿ ದೇವಸ್ಥಾನ ಪ್ರವೇಶ ಮಾಡಿದ್ದಾರೆ ಎನ್ನುವ ಕಾರಣಕ್ಕೆ ದಂಡ ವಿಧಿಸಿ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಕಾರಟಗಿ ಠಾಣೆ ಪೊಲೀಸರು ದೇವಸ್ಥಾನದ ಅರ್ಚಕ ಸೇರಿ ಎಂಟು ಜನರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ: ಸೆ. 16ರಂದು ತಾಲೂಕಿನ ನಾಗನಕಲ್ಲ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನಕ್ಕೆ ದಲಿತ ವ್ಯಕ್ತಿ ಪ್ರವೇಶಿಸಿದ್ದರು. ಈ ಕಾರಣಕ್ಕೆ ಅರ್ಚಕ ಹಾಗೂ ಗ್ರಾಮದ ಇನ್ನುಳಿದ ಏಳು ಜನ ಸವರ್ಣೀಯ ಮುಖಂಡರು ಸಿಂಧೋಳಿ ಸಮಾಜದ ವ್ಯಕ್ತಿ ಮಾರೆಪ್ಪ ಪ್ರವೇಶ ಮಾಡಿದ್ದಕ್ಕೆ ದೇಗುಲ ಮೈಲಿಗೆ ಆಗಿದೆ. ಹೀಗಾಗಿ ಆ ವ್ಯಕ್ತಿಯ ತಂದೆ ಕರೆಮಾರೆಪ್ಪ ಸಿಂಧೋಳಿಯನ್ನು ಕರೆಸಿ ಪಂಚಾಯಿತಿ ನಡೆಸಲು ಮುಂದಾಗುತ್ತಾರೆ.
ನಾಗನಕಲ್ ಗ್ರಾಮದ ದೇವಸ್ಥಾನಕ್ಕೆ ಸೇರಿದ ಕೆಲ ಪ್ರಮುಖರು ಪ್ರಾರಂಭದಲ್ಲಿ ಸಿಂಧೋಳ್ಳಿ ಸಮಾಜದವರು ದೇವಸ್ಥಾನದ ಮೈಲಿಗೆ ನಿವಾರಣೆ, ಶುದ್ಧೀಕರಣಕ್ಕೆ ಮತ್ತು ಪಶ್ಚಾತಪ್ಪಕ್ಕೆ ಸೇರಿ ಒಟ್ಟು ಕನಿಷ್ಠ 5 ಲಕ್ಷ ದಂಡ ಕಟ್ಟುವಂತೆ ಆದೇಶಿಸಿದ್ದರು. ಆದರೆ, ಕೆಲವರು ಇದನ್ನು ಆಕ್ಷೇಪಿಸಿದ್ದರಿಂದ ಕೊನೆಗೆ 11 ಸಾವಿರ ದಂಡ ಕಟ್ಟಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾಗಿದ್ದರು. ದುರಂತದ ವಿಚಾರ ಏನು ಅಂದ್ರೆ, ಈ ಪ್ರಕರಣವನ್ನು ಅಧಿಕಾರಿಗಳು ಮುಚ್ಚಿ ಹಾಕಲು ಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ನಂತರ ಎಚ್ಚೆತ್ತ ಅಧಿಕಾರಿಗಳು 8 ಜನರ ವಿರುದ್ಧ ಶನಿವಾರ ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ : ದಲಿತ ಮಗು ದೇಗುಲ ಪ್ರವೇಶಿಸಿದ್ದಕ್ಕೆ ದಂಡ ವಿಧಿಸಿದ ಗ್ರಾಮಸ್ಥರು?
ತಹಶೀಲ್ದಾರ್ ರವಿ ಅಂಗಡಿ, ಗಂಗಾವತಿ ಸಿಪಿಐ ಉದಯ ರವಿ, ಸಮಾಜ ಕಲ್ಯಾಣ ಇಲಾಖೆ ತಾಲೂಕಾ ಧಿಕಾರಿ ತುಗಲೆಪ್ಪ ದೇಸಾಯಿ, ಇಒ ಚಂದ್ರಶೇಖರ, ಗ್ರೇಡ್-2 ವಿಶ್ವನಾಥ್ ಮುರಡಿ ರಾಜೀವ್ ಗಾಂಧಿ ನಗರದ ಸಿಂಧೋಳಿ ಸಮಾಜದ ನೊಂದ ವ್ಯಕ್ತಿಯನ್ನು ಕುಟುಂಬದವರನ್ನು ಭೇಟಿ ಮಾಡಿ ಚರ್ಚಿಸಿದರು.
ಪ್ರಕರಣ ದಾಖಲು : ಬಸವರಾಜ ಶಂಕ್ರಪ್ಪ ಬಡಿಗೇರ್, ರೇವಣಯ್ಯಸ್ವಾಮಿ ಶೇಖರಯ್ಯಸ್ವಾಮಿ ಗಾಲಿಮಠ, ಶೇಖರಪ್ಪ ಬಸಣ್ಣ ರ್ಯಾವಣಕಿ, ಬಸವರಾಜ ಹನುಮಂತಪ್ಪ ತಳವಾರ, ಕಾಡಪ್ಪ ನಾಯಕ್, ದುರುಗೇಶ ಅಂಬಣ್ಣ ಸಂಕನಾಳ, ಶರಣಪ್ಪ ವೀರಭದ್ರಪ್ಪ ಗುಂಜಳ್ಳಿ, ಪ್ರಶಾಂತ ರಾಯಪ್ಪ ಅಮ್ಮಣ್ಣನವರ್ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.