ಮಂಗಳೂರು: ಕಟೀಲು ಪೇಟೆಯಲ್ಲಿ ಮುಸ್ಲಿಮ್ ಎಳೆನೀರು ವ್ಯಾಪಾರಿಗೆ ವ್ಯಾಪಾರ ನಡೆಸಲು ನಿಷೇಧ ಹೇರಿ, ಬೆದರಿಕೆ ಹಾಕಿದ ಬಿಜೆಪಿಯ ಕ್ರಿಮಿನಲ್ ಕಾರ್ಯಕರ್ತರ ಮೇಲೆ ಕಾನೂನು ಪ್ರಕಾರ ಕ್ರಮಕೈಗೊಂಡ ಬಜಪೆ ಠಾಣಾಧಿಕಾರಿ ಸಂದೇಶ್ ಪಿ.ಜಿ. ಹಾಗೂ ಮೂರು ಸಿಬ್ಬಂದಿಗಳನ್ನು ರಾಜ್ಯ ಬಿಜೆಪಿ ಸರಕಾರ ಅಮಾನತುಗೊಳಿಸಿರುವುದನ್ನು ಸಮಾನ ಮನಸ್ಕ ಸಂಘಟನೆಗಳು ಖಂಡಿಸಿವೆ.
ಈ ಕುರಿತು ಹೇಳಿಕೆಯನ್ನು ನೀಡಿರುವ ಸಂಘಟನೆಯ ಮುಖಂಡರು, ಇದು ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹಾಕುತ್ತಿರುವ ಆಳುವ ಬಿಜೆಪಿ ಬೆಂಬಲಿತ ಕೋಮುವಾದಿ ಗೂಂಡಾಗಿರಿಗೆ ಕಾನೂನು ಪ್ರಕಾರ ತಡೆ ಒಡ್ಡಿದ್ದಕ್ಕಾಗಿ ಪೊಲೀಸ್ ಇಲಾಖೆಯಿಂದ ಪಡೆದ ತಲೆದಂಡ. ನಾಚಿಕೆಗೇಡಿನ ಕ್ರಮ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಆರೋಪಿಸಿವೆ.
ಕೂಡಲೇ ಅಮಾನತನ್ನು ವಾಪಾಸು ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ, ಮುಸ್ಲಿಮರನ್ನು ಮುಖ್ಯವಾಹಿನಿಯಿಂದ ಬೇರ್ಪಡಿಸುವ, ಬಹಿಷ್ಕಾರಗಳನ್ನು ಹಾಕುವ ಮೂಲಕ ಆರ್ಥಿಕವಾಗಿ ದುರ್ಬಲಗೊಳಿಸುವ, ಅಭದ್ರತೆಗೆ ದೂಡುವ ಕೋಮುವಾದಿ ಅಜೆಂಡಾವನ್ನು ಸರಕಾರದ ಬೆಂಬಲದೊಂದಿಗೆ ಬಿಜೆಪಿ ಕಾರ್ಯಕರ್ತರು ಜಾರಿಗೊಳಿಸುತ್ತಿದ್ದಾರೆ. ಕಾನೂನು ಪ್ರಕಾರ ಗಂಭೀರ ಅಪರಾಧ ಪ್ರಕರಣವಾಗಿರುವ ಇಂತಹ ಕೃತ್ಯಗಳನ್ನು ಸಂಸದ, ಶಾಸಕರುಗಳ ಒತ್ತಡದಿಂದಾಗಿ ಪೊಲೀಸ್ ಇಲಾಖೆ ತಡೆಯಲು ಹಿಂಜರಿಯುತ್ತಿದೆ.
ಕಟೀಲು ಪೇಟೆಯಲ್ಲಿಯೂ ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹಾಕಲು ಪ್ರಯತ್ಮಗಳು ನಡೆದಿವೆ. ಅದರ ಭಾಗವಾಗಿಯೇ ಅಂಗಡಿಗಳಿಗೆ ಎಳೆನೀರು ಸರಬರಾಜು ಮಾಡುವ ಮುಸ್ಲಿಂ ವ್ಯಾಪಾರಿಗೆ ಎಳೆನೀರು ಇಳಿಸಲು ತಡೆಹಾಕಲಾಗಿದೆ. ಊರಿಗೆ ಕಾಲಿಡದಂತೆ ಬೆದರಿಸಲಾಗಿದೆ. ಕ್ರಿಮಿನಲ್ ಹಿನ್ನಲೆಯ ಬಿಜೆಪಿ ಕಾರ್ಯಕರ್ತರ ಕೋಮುವಾದಿ ಗೂಂಡಾಗಿರಿಯ ವಿರುದ್ದ ದಕ್ಷ ಅಧಿಕಾರಿ ಎಂದು ಹೆಸರಾಗಿರುವ ಠಾಣಾಧಿಕಾರಿ ಸಂದೇಶ್ ಆರೋಪಿಗಳನ್ನು ವಶಕ್ಕೆ ಪಡೆದು ಕ್ಷಿಪ್ರ ಕಾನೂನು ಕ್ರಮಕೈಗೊಂಡಿದ್ದಾರೆ. ಇದಕ್ಕಾಗಿ ಜನಪ್ರತಿನಿಧಿಗಳು, ಸರಕಾರದ ಮುಖ್ಯಸ್ಥರು ಬಜಪೆ ಠಾಣಾಧಿಕಾರಿಯನ್ನು ಅಭಿನಂದಿಸಬೇಕಿತ್ತು. ಬದಲಿಗೆ ತಮ್ಮ ಬೆಂಬಲದೊಂದಿಗೆ ಕೋಮುವಾದಿ ಅಜೆಂಡಾ ಜಾರಿಗೊಳಿಸುತ್ತಿರುವ ಕ್ರಿಮಿನಲ್ ಕಾರ್ಯಕರ್ತರನ್ನು ತೃಪ್ತಿಪಡಿಸಲು ಠಾಣಾಧಿಕಾರಿ ಸಹಿತ ಬಜ್ಪೆ ಠಾಣೆಯ ಪೊಲೀಸರ ತಲೆದಂಡ ಪಡೆಯಲಾಗಿದೆ.
ಇಂತಹ ನಾಚಿಕೆಗೇಡಿನ ಕ್ರಮದಿಂದ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯಕ್ಕೆ ಪೆಟ್ಟು ಬಿದ್ದಿದೆ. ಕೋಮುವಾದಿ ಪುಂಡಾಟಿಕೆಗೆ, ಗೂಂಡಾ ಗುಂಪುಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ. ಇದನ್ನು ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಒಕ್ಕೊರಲಿನಿಂದ ಖಂಡಿಸಬೇಕು ಎಂದು ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.
ಹಾಗೆಯೆ ಗೂಂಡಾಗಿರಿಗೆ ಕಡಿವಾಣ ಹಾಕಲು ಯತ್ನಿಸಿದ ಪೊಲೀಸರ ಮೇಲಿನ ಅಮಾನತು ಕ್ರಮ ಬಿಜೆಪಿ ಆಡಳಿತ ಜಿಲ್ಲೆಯಲ್ಲಿ ಚಿಗಿತುಕೊಂಡಿರುವ ಮರಳು, ಟಿಂಬರ್, ಜುಗಾರಿ, ಗ್ಯಾಂಬ್ಲಿಂಗ್ ಮುಂತಾದ ದಂಧೆಯ ಮಾಫಿಯಾಗಳಿಗೆ ಮತ್ತಷ್ಟು ಬಲ ತುಂಬಲಿದೆ. ಕೋಮುವಾದಿ ಪುಂಡರು ಹಾಗೂ ವಿವಿಧ ದಂಧೆಯ ಕ್ರಿಮಿನಲ್ ಗಳ ನಡುವೆ ಈಗಾಗಲೇ ಇರುವ ಹೊಂದಾಣಿಕೆಗಳು ಜಿಲ್ಲೆಯಲ್ಲಿ ಕಾನೂನಿನ ಆಡಳಿತವನ್ನು ಮುರಿದು ಹಾಕಲಿದೆ. ಇದು ಜನಸಾಮಾನ್ಯರ ನೆಮ್ಮದಿಯ ಜೀವನಕ್ಕೆ ಕಂಟಕವಾಗಲಿದೆ.
ಈ ಹಿನ್ನಲೆಯಲ್ಲಿ ಬಜಪೆ ಠಾಣೆಯ ಪೊಲೀಸರ ಮೇಲಿನ ಅಮಾನತು ಕ್ರಮವನ್ನು ವಾಪಾಸು ಪಡೆದು ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು, ಇಲ್ಲದಿದ್ದಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಂಟಿ ಹೇಳಿಕೆಗೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಅಖಿಲ ಭಾರತ ವಕೀಲರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಯಶವಂತ ಮರೋಳಿ, ಹಿರಿಯ ವಕೀಲ ದಯಾನಾಥ ಕೋಟ್ಯಾನ್, ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ), ರಾಜ್ಯ ಸಹ ಸಂಚಾಲಕ ಎಂ. ದೇವದಾಸ್, ಕರ್ನಾಟಕ ಪ್ರಾಂತ ರೈತ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕಿರಣ ಪುಣಚ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಪ್ರಗತಿಪರ ಚಿಂತಕರ ವೇದಿಕೆ ಅಧ್ಯಕ್ಷ ಡಾ. ಕೃಷ್ಣಪ್ಪ ಕೊಂಚಾಡಿ, ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ) ಸಂಚಾಲಕ ರಘು ಎಕ್ಕಾರು, ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಶೇಖರ ಹೆಜಮಾಡಿ, ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಇಮ್ತಿಯಾಜ್ ಬಿ ಕೆ ಜನವಾದಿ ಮಹಿಳಾ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಭಾರತಿ ಬೋಳಾರ, ದಲಿತ ಹಕ್ಕುಗಳ ಸಮಿತಿ ದಕ್ಷಿಣ ಕನ್ನಡ ಜಿಲ್ಲೆ ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವಿ, ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ವಿನಿತ್ ದೇವಾಡಿಗ ಸಹಿ ಮಾಡಿದ್ದಾರೆ.