ಬೆಂಗಳೂರು: ಬೆಳಗಾವಿಯಲ್ಲಿ ಹಿಂದೂ ಯುವತಿಯನ್ನು ಮುಸ್ಲಿಂ ಯುವ ಪ್ರೀತಿಸಿದನೆಂಬ ಕಾರಣಕ್ಕೆ ಶ್ರೀರಾಮಸೇನೆ ಕಾರ್ಯಕರ್ತರು ಅನ್ಯಕೋಮಿನ ಯುವಕನನ್ನು ಕೊಲೆ ಮಾಡಿದ್ದಾರೆ. ಅಲ್ಲದೆ, ಯಾದಗಿರಿಯಲ್ಲಿ ಯವತಿಯ ಮೇಲೆ ಅತ್ಯಚಾರಕ್ಕೆ ಪ್ರಯತ್ನಿಸಿ ಆಕೆಯನ್ನು ಪೆಟ್ರೋಲ್ ಸುರಿದು ಕೊಲೆ ಮಾಡಿರುವ ಅಮಾನವೀಯ ಘಟನೆಯನ್ನು ಖಂಡಿಸಿ ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ ನಡೆಸಿದರು.
ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೇರಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ)ಯ ಕಾರ್ಯಕರ್ತರು ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಜಾರಿಗೊಳಿಸಿ ಗಂಭೀರ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ ʻರಾಜ್ಯದಲ್ಲಿ ನಡೆದಿರುವ ಮರ್ಯಾದೆಯ ಹೆಸರಿನ ಹತ್ಯೆಗಳ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅಂತಹ ಹತ್ಯೆಯನ್ನು ನಿಷೇಧಿಸುವಂತಹ ಕಾನೂನು ಜಾರಿತೆ ತಂದು ತಪ್ಪಿತಸ್ಥರ ಮೇಲೆ ಕ್ರಮವಹಿಸಬೇಕು. ಬೆಳಗಾವಿಯಲ್ಲಿ ಯುವಕನನ್ನು ಕೊಂದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ವಹಿಸಬೇಕು. ಇತ್ತೀಚಿನ ವರ್ಷಗಳಲ್ಲಿ ಯುವಜನರು ತಮ್ಮ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಜಾತಿ, ಧರ್ಮಗಳ ಹೆಸರಿನಲ್ಲಿ ಗಂಭೀರವಾದ ದೌರ್ಜನ್ಯವೆಸಗಿ ಕೊಲೆ ಮಾಡುವ ಹಂತಕ್ಕೆ ಹೋಗುತ್ತಿರುವುದನ್ನು ವಿರೋಧಿಸುತ್ತೇವೆʼ ಎಂದು ಹೇಳಿದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ವಿಮಲ ಕೆ.ಎಸ್. ಮಾತನಾಡಿ ʻಸಂವಿಧಾನ ದೇಶದ ಎಲ್ಲ ಜನರಿಗೆ ಅನ್ವಯಯವಾಗುವಂತಹ ಮೂಲಭೂತ ಹಕ್ಕುಗಳನ್ನು ಮತ್ತು ಅದನ್ನು ಪಾಲಿಸಲು ಅಗತ್ಯವಾದ ಕರ್ತವ್ಯಗಳನ್ನು ನೀಡಲಾಗಿದೆ. ಇನ್ನೊಂದು ಕಡೆಗಳಲ್ಲಿ ಆಳುವ ಸರ್ಕಾರಗಳು ಯುವಜನರ ಆಯ್ಕೆಯ ಹಕ್ಕನ್ನು ಖಾತ್ರಿಗೊಳಿಸುವ ಬದಲು ಆಯ್ಕೆಯ ಹಕ್ಕನ್ನೇ ಮೊಟಕುಗೊಳಿಸುವ ಕಾನೂನು ತರಲು ಮುಂದಾಗಿದೆ. ಸಂವಿಧಾನ ಅಂತರ್ಧರ್ಮಿಯ, ಅಂತರ್ಜಾತಿಯ ವಿವಾಹಿತರಿಗೆ ಸರಿಯಾದ ರಕ್ಷಣೆ ಮತ್ತು ಸೌಲಭ್ಯಗಳನ್ನು ಕಲ್ಪಿಸಬೇಕು ಮತ್ತು ವಿಶೇಷ ವಿವಾಹ ಕಾಯ್ದೆಯನ್ನು ಬಲಪಡಿಸಬೇಕುʼ ಎಂದು ಆಗ್ರಹಿಸಿದರು.
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಅಳ್ಳಳ್ಳ ಗ್ರಾಮದ ಮೂರು ನಾಲ್ಕು ಜನ ಯುವರ ಗುಂಪೊಂದು ಅದೇ ತಾಲ್ಲೂಕಿನ ಚೌಡೇಶ್ವರಿಹಾಳ ಗ್ರಾಮದ ಮಹಿಳೆಯರೊಬ್ಬರ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಪ್ರಯತ್ನಿಸಲಾಗಿದೆ. ಇದನ್ನು ಪ್ರತಿಭಟಿಸಿದ ಆಕೆಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಲಾಗಿದೆ. ಈ ಘಟನೆ ನಾಗರೀಕ ಸಮಾಜ ತಲ್ಲೆ ತಗ್ಗಿಸುವಂತಹದು. ಇತ್ತೀಚಿಗೆ ಇದೇ ಜಿಲ್ಲೆಯ ಮಹಿಳೆಯೊಬ್ಬರನ್ನು ಬೆತ್ತಲುಗೊಳಿಸಿ ಥಳಿಸಿದ ಘಟನೆ ಮಾಸುವ ಮುನ್ನವೇ ಈ ಘಟನೆ ಇನ್ನಷ್ಟು ಮಹಿಳೆಯರನ್ನು ಬೆಚ್ಚಿ ಬೀಳಿಸುತ್ತದೆ. ಗೃಹ ಇಲಾಖೆ ಶೀಘ್ರವಾಗಿ ತನಿಖೆ ಮಾಡಬೇಕು ಮತ್ತು ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಪ್ರತಿಭಟನೆಯ ಮೂಲಕ ಆಗ್ರಹಿಸಿದರು.
ಯಾದಗಿರಿ ಪ್ರಕರಣದಲ್ಲಿ ಆರೋಪಿಗಳು ತಪ್ಪಿಸಿಕೊಳ್ಳದಂತೆ ಕಾನೂನು ಕ್ರಮವಹಿಸಬೇಕು. ಸಾಕ್ಷಿಗಳು ನಾಶವಾಗದಂತೆ ಕ್ರಮವಹಿಸುವುದು. ಎರಡು ಘಟನೆಗಳ ಸಮಗ್ರ ತನಿಖೆಯಾಗಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಸಂಘಟನೆಯು ಆಗ್ರಹಿಸಿದೆ.
ಜಸ್ಟೀಸ್ ವರ್ಮಾ ಸಮಿತಿ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು. ಉಗ್ರಪ್ಪ ಸಮಿತಿಯ ಶಿಫಾರಸ್ಸುಗಳನ್ನು ಸರ್ಕಾರ ಅಂಗೀಕರಿಸಬೇಕು. ಮಹಿಳೆಯರಿಗೆ, ದಲಿತರಿಗೆ, ಅಲ್ಪ ಸಂಖ್ಯಾತರಿಗೆ ಘನತೆಯ ಬದುಕನ್ನು ಖಾತ್ರಿಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಲಲಿತಾ ಶೆಣೈ, ಶ್ರೀಮತಿ, ಬಸಮ್ಮ, ಸುನಂದ, ಸೆಲ್ವಿ, ರಾಜೇಶ್ವರಿ, ಲಕ್ಷ್ಮಿ ಮತ್ತಿತರು ಭಾಗವಹಿಸಿದ್ದರು.