ಕೋಲು ಮುಟ್ಟಿದಕ್ಕೆ ದಲಿತ ಬಾಲಕ ಮೇಲೆ ಹಲ್ಲೆ: ತಪ್ಪಿತಸ್ಥ ಸವರ್ಣೀಯರ ವಿರುದ್ಧ ಕ್ರಮಕ್ಕೆ ಆಗ್ರಹ

ಮಾಲೂರು: ಭೂತಮ್ಮನ ಮೂರ್ತಿ ಉತ್ಸವದ ಸಂದರ್ಭದಲ್ಲಿ ದೇವರನ್ನು ಹೊರುವ ಗುಜ್ಜ ಕೋಲು ಕೆಳಕ್ಕೆ ಬಿದ್ದಿದ್ದನ್ನು ಗಮನಿಸಿ ಚೇತನ ಎಂಬ 14 ವರ್ಷದ ದಲಿತ ಬಾಲಕ ಕೋಲನ್ನು ಎತ್ತಿ ಕೊಟ್ಟಿದ್ದನ್ನು ಮೈಲಿಗೆಯಾಗಿದೆ ಎಂದು ಸವರ್ಣೀಯರು ಬಾಲಕನನ್ನು ಥಳಿಸಿ, ದಂಡ ವಿಧಿಸಿರುವುದನ್ನು ಖಂಡಿಸಿ ದಲಿತ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಬೇಕೆಂದು ಆಗ್ರಹಿಸಿದರು.

ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕು, ಟೇಕಲ್ ಹೋಬಳಿ, ಉಳ್ಳೇರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಸವರ್ಣೀಯರು ದಲಿತ ಬಾಲಕನನ್ನು ಥಳಿಸಿ ನ್ಯಾಯ ಪಂಚಾಯಿತಿ ಸೇರಿಸಿ ದೇವಸ್ಥಾನ ಮೈಲಿಗೆಯಾಗಿದೆ ಅದಕ್ಕೆ ಶುದ್ದೀಕರಣ ಮಾಡಬೇಕು ಹಾಗಾಗಿ ದೇವಸ್ಥಾನಕ್ಕೆ ಬಣ್ಣ ಬಳಿಯುವ ಖರ್ಚು 60,000/- ರೂಪಾಯಿಗಳನ್ನು ಬಾಲಕನ ಕುಟುಂಬದವರೇ ಪಾವತಿಸಬೇಕೆಂದು ಹೇಳಿ ಬಾಲಕನ ಕುಟುಂಬವನ್ನು ಗ್ರಾಮದಿಂದ ಬಹಿಷ್ಕರಿಸಿರುವ ಘಟನೆ ನಡೆದಿದೆ.

ಟೇಕಲ್ ಹೋಬಳಿಯ ವೀರಕಪತ್ರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಶಿಕ್ಷಕರಿದ್ದು, ಅದೇ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀನಿವಾಸ್ ಎಂಬುವರ ಮಗ ಎರಡನೇ ತರಗತಿಯ ವಿದ್ಯಾರ್ಥಿ ಚಂದನ್ ಆಕಸ್ಮಿಕವಾಗಿ ಆಟವಾಡುವಾಗ ಬಿದ್ದಿದ್ದಾನೆ. ಪರಿಶಿಷ್ಟ ಜಾತಿಗೆ ಸೇರಿದ ಎಂ.ಕೃಷ್ಣಪ್ಪನವರನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿ ಥಳಿಸಿರುವ ಘಟನೆ ನಡೆದಿದೆ. ಆದರೂ ಪೊಲೀಸರು ಕ್ರಮಕೈಗೊಳ್ಳದೆ ತಾರಮತ್ಯವೆಸಗಿ ಆರೋಪಿಯನ್ನು ಬಿಡುಗಡೆ ಮಾಡಿದ್ದಾರೆ. ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀನಿವಾಸ್‌ ಅವರನ್ನು ಕೂಡಲೇ ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕೆಂದು ಪ್ರತಿಭಟನೆ ಮೂಲಕ ಆಗ್ರಹಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಸಂವಿಧಾನದ ಮೂಲ ಸಿದ್ಧಾಂತಗಳು ಕಗ್ಗೋಲೆಯಾಗುತ್ತಿದ್ದು, ಇಂತಹ ಅಮಾನವೀಯ ಘಟನೆಯನ್ನು ಖಂಡಿಸಿ ಎಲ್ಲಾ ದಲಿತ ಪ್ರಗತಿಪರ ಸಂಘಟನೆಗಳು ಕೋಲಾರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸುವ ಮೂಲಕ ಕ್ರಮಕ್ಕೆ ಆಗ್ರಹಿಸಿದರು.

ಪ್ರತಿಭಟನೆ ನಂತರ ಕೋಲಾರ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಂತ್ರಸ್ಥ ಕುಟುಂಬದ ಒಬ್ಬ ಸದಸ್ಯರಿಗೆ ಖಾಯಂ ಸರ್ಕಾರಿ ಕೆಲಸ ನೀಡಬೇಕು. ದಲಿತ ಬಾಲಕನ ಕುಟುಂಬಕ್ಕೆ ಊರಿನ ಸೂಕ್ತ ಸ್ಥಳದಲ್ಲಿ ನಿವೇಶನ ನೀಡಿ ಮನೆಯನ್ನು ಕಟ್ಟಿಕೊಡಬೇಕು. ವಿದ್ಯಾರ್ಥಿ ಚೇತನ್‌ಗೆ ಪ್ರತಿಷ್ಠಿತ ಶಾಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸದ ಪೂರ್ಣ ಖರ್ಚನ್ನು ಸರ್ಕಾರವೇ ಭರಿಸಬೇಕು. ಎಂದು ಆಗ್ರಹಿಸಲಾಗಿದೆ.

ಅಲ್ಲದೆ, ಸಂತ್ರಸ್ಥ ಕುಟುಂಬಕ್ಕೆ 5 ಎಕರೆ ಜಮೀನು ಮಂಜೂರು ಮಾಡಬೇಕು. ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ನಾರಾಯಣಸ್ವಾಮಿ ಮತ್ತು ಅವರ ಸಹಚರರ ಮೇಲೆ ಪಿ.ಎ. ಕಾಯಿದೆಯ ಪ್ರಕಾರ ಗೂಂಡಾ ಕಾಯ್ದೆಯಡಿ ಕೂಡಲೇ ಬಂಧಿಸಿ ಜಿಲ್ಲೆಯಿಂದ ಗಡಿ ಪಾರು ಮಾಡಬೇಕು ಜಿಲ್ಲೆಯ ಎಲ್ಲಾ ಮುಜರಾಯಿ ಮತ್ತು ಸಾರ್ವಜನಿಕ ದೇವಸ್ಥಾನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರಿಗೆ ದೇವಾಲಯ ಪ್ರವೇಶವಿದೆ ಎಂದು ದೇವಾಲಯಗಳ ಮುಂಭಾಗದ ನಾಮಫಲಕ ಹಾಕಿ ಅದನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

ವೀರಕಪುತ್ರ ಸರ್ಕಾರಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀನಿವಾಸ್‌ ಅವರನ್ನು ಕೂಡಲೇ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕೆಂದು ಆಗ್ರಹಿಸಲಾಗಿದೆ.

ವರದಿ: ಪಿ ವಿ ರಮಣ

Donate Janashakthi Media

Leave a Reply

Your email address will not be published. Required fields are marked *