ಕೋಲ್ಕತಾ: ಪ್ರತಿಭಟನಕಾರರ ಮೇಲೆ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ

ಕೋಲ್ಕತಾದಲ್ಲಿ ವೈದ್ಯೆ ಹತ್ಯೆ ಖಂಡಿಸಿ ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿರುವ ಬೃಹತ್ ಪ್ರತಿಭಟನೆ ಸಂಘರ್ಷಕ್ಕೆ ಕಾರಣವಾಗಿದ್ದರಿಂದ ಪೊಲೀಸರು ಅಶ್ರುವಾಯು ಪ್ರಯೋಗಿಸಿ ಲಾಠಿಪ್ರಹಾರ ನಡೆಸಿದ್ದಾರೆ.

ಆರ್‌.ಜಿ ಕರ್ ಕಾಲೇಜು ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರಾಜೀನಾಮೆಗೆ ಒತ್ತಾಯಿಸಿ ‘ಪಶ್ಚಿಮ್ ಬಂಗಾ ಛತ್ರ ಸಮಾಜ’ ವಿದ್ಯಾರ್ಥಿ ಸಂಘಟನೆ ಮತ್ತು ರಾಜ್ಯ ಸರ್ಕಾರಿ ನೌಕರರ ವೇದಿಕೆ ‘ಸಂಗ್ರಾಮಿ ಜೌತ ಮಂಚ’ ಪಶ್ಚಿಮ ಬಂಗಾಳದ ರಾಜ್ಯ ಸಚಿವಾಲಯ ‘ನಬನ್ನ’ ಕಡೆಗೆ ಮೆರವಣಿಗೆ ನಡೆಸಲು(ನಬನ್ನ ಅಭಿಜಾನ್) ಇಂದು ಕರೆ ನೀಡಿದ್ದವು. ಹಿಂಸಾಚಾರದ ಸುಳಿವಿನ ಹಿನ್ನೆಲೆಯಲ್ಲಿ ಕೋಲ್ಕತಾ ಪೊಲೀಸ್ ಇಲಾಖೆ 6000 ಪೊಲೀಸರು ಹಾಗೂ ಮೂರು ಸ್ತರಗಳ ಭದ್ರತಾ ವ್ಯವಸ್ಥೆಯನ್ನು ಮಾಡಿತ್ತು.

ಮೆರವಣಿಗೆ ಆಗಮಿಸುತ್ತಿದ್ದ ಪ್ರತಿಭಟನಾಕಾರರು ಹೌರಾ ಸೇತುವೆ ಬಳಿ ಬರುತ್ತಿದ್ದಂತೆ ಕಲ್ಲುತೂರಾಟಕ್ಕೆ ಮುಂದಾದರು. ಅಲ್ಲದೇ ಪೊಲೀಸ್ ಬ್ಯಾರಿಕೇಡ್ ಮುರಿದು ನುಗ್ಗಲು ಪ್ರಯತ್ನಿಸಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದ್ದೂ ಅಲ್ಲದೇ ಅಶ್ರುವಾಯು ಸಿಡಿಸಿದರು.

ಪ್ರತಿಭಟನೆ ವೇಳೆ ಕಲ್ಲುತೂರಾಟ ನಡೆಸಿದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಪ್ರತಿಭಟನಾಕರರು ದಾಂಧಲೆಗೆ ಇಳಿದಿದ್ದರಿಂದ ಗೊಂದಲ ಏರ್ಪಟ್ಟಿತು.

ಆಗಸ್ಟ್ 9ರಂದು ಕೋಲ್ಕತಾದ ಆರ್ ಜೆ ಆಸ್ಪತ್ರೆಯಲ್ಲಿ ವೈದ್ಯೆ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಂತರ ಹತ್ಯೆ ಮಾಡಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ವಿಚಾರಣೆ ಕೂಡ ನಡೆಸುತ್ತಿದೆ.

ಈ ಹಂತದಲ್ಲಿ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದು, ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಪಶ್ಚಿಮ ಬಂಗಾಳದ ಪೊಲೀಸರು 6000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ಪ್ರತಿಭಟನೆ ವೇಳೆ ಕಣ್ಗಾವಲು ಇಡಲು ರೋಬೋ ಕಾಪ್, ಡ್ರೋಣ್ ಗಳನ್ನು ಕೂಡ ನಿಯೋಜಿಸಲಾಗಿದ್ದು, ಮೂರು ಸ್ತರಗಳಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. 26 ಡೆಪ್ಯೂಟಿ ಪೊಲೀಸ್ ಕಮಿಷನರ್ ಗಳಿಗೆ ವಿವಿಧ ಆಯಕಟ್ಟಿನ ಜಾಗದ ಉಸ್ತುವಾರಿ ವಹಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *