ಬೆಂಗಳೂರು: ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ನೇತೃತ್ವದ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ಹಲವು ಕೋಳಿ ಸಾಕಾಣಿಕೆ ರೈತರು ಹಾಗೂ ರೈತ ಸಂಘಟನೆಗಳ ಜಂಟಿ ಸಮಾಲೋಚನಾ ಸಭೆಯು ನಡೆದಿದ್ದು, ಕೋಳಿ ಸಾಕಾಣಿಕೆ ಕ್ಷೇತ್ರವನ್ನು ಕೃಷಿ ರಂಗವೆಂದು ಘೋಷಿಸಲು ಆಗ್ರಹಿಸಿದರು.
ನಗರದ ಶಾಸಕರ ಭವನದಲ್ಲಿ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ರಾಜ್ಯಾಧ್ಯಕ್ಷ ಜೆ ಸಿ ಮಂಜುನಾಥ್ ಹಾಗೂ ನಂಜುಂಡಪ್ಪ ರವರ ಜಂಟಿ ಅಧ್ಯಕ್ಷತೆಯ ಈ ಸಮಾಲೋಚನಾ ಸಭೆಯನ್ನು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಜಿ ಸಿ ಬಯ್ಯಾರೆಡ್ಡಿ ಉದ್ಘಾಟಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿ ಸಿ ಬಯ್ಯಾರೆಡ್ಡಿ, ಕೋಳಿ ಸಾಕಾಣಿಕೆ ರೈತರನ್ನು ಕಾರ್ಪೊರೇಟ್ ಶೋಷಣೆಯಿಂದ ರಕ್ಷಿಸಲು ಈಗಾಗಲೇ ನಮ್ಮ ಸಂಘಟನೆ ಹೋರಾಟದಿಂದ ರಚನೆಯಾಗಿರುವ ಕರ್ನಾಟಕ ಕುಕ್ಕಟ ಅಭಿವೃದ್ಧಿ ನಿಯಂತ್ರಣ ಮಸೂದೆ -2022 ಅನ್ನು ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಅಂಗೀಕರಿಸಬೇಕು ಎಂದು ಆಗ್ರಹಿಸಿದರು.
ಮುಖ್ಯ ಆತಿಥಿಗಳಾಗಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ಕೋಳಿ ಸಾಕಾಣಿಕೆ ರೈತ ಸಂಘಟನೆಗಳ ಮುಖಂಡರಾದ ಶ್ರೀಧರ್, ಕುಮಾರಸ್ವಾಮಿ, ರಾಜಕುಮಾರ್, ಸಂತೋಷ್, ಶ್ರೀನಿವಾಸ್, ಶಿವಕುಮಾರ್ ಸೇರಿದಂತೆ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಳಗಾವಿ ಮುಂತಾದ ಜಿಲ್ಲೆಗಳ ಸುಮಾರು ನೂರಕ್ಕೂ ಹೆಚ್ಚು ಮುಖಂಡರಗಳು ಭಾಗವಹಿಸಿದ್ದರು.