ಬೆಂಗಳೂರು : ಕಳೆದ ವರ್ಷ ನಾಲ್ಕು ಸಾರಿಗೆ ನಿಗಮಗಳ ನೌಕರರ ಮುಷ್ಕರ ವಾಪಸ್ ಪಡೆಯುವ ಸಂದರ್ಭದಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆಯಂಡ್ ವರ್ಕರ್ಸ್ ಫೆಡರೇಷನ್ (ಎಐಟಿಯುಸಿ) ಒತ್ತಾಯಿಸಿದೆ.
2021ರ ಏಪ್ರಿಲ್ 7ರಿಂದ 21ರವರೆಗೆ ಕರೆ ನೀಡಿದ್ದ ಮುಷ್ಕರ ಯಾವುದೇ ‘ಕೈಗಾರಿಕಾ ಒಪ್ಪಂದ’ ಇಲ್ಲದೆ ಅಂತ್ಯಗೊಂಡಿತ್ತು. ಈ ಮುಷ್ಕರ ವಾಪಸ್ ಪಡೆಯುವ ವಿಚಾರದಲ್ಲಿ ಮುಷ್ಕರದ ನೇತೃತ್ವ ವಹಿಸಿದವರಿಗೆ ಕೋಟ್ಯಂತರ ರೂಪಾಯಿ ಕಿಕ್‌ಬ್ಯಾಕ್ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ ಎಂದು ಫೆಡರೇಷನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ತಿಳಿಸಿದ್ದಾರೆ.
ನೌಕರರ ನಾಯಕತ್ವವನ್ನು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಹಿಸಿದ್ದರು. ಮುಷ್ಕರವನ್ನು ವಾಪಸ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವರು ₹35 ಕೋಟಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಮೊತ್ತವನ್ನು ಯಾವ ಸಂಪನ್ಮೂಲದಿಂದ ನೀಡಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಕಿಕ್‌ಬ್ಯಾಕ್‌ನ ಅರ್ಧ ಮೊತ್ತವನ್ನು ಕಪ್ಪು ಹಣದ ರೂಪದಲ್ಲಿ ಮತ್ತು ಉಳಿದರ್ಧ ಹಣವನ್ನು ದುಬೈನಲ್ಲಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರ ಪತ್ನಿ ಮತ್ತು ಮಗನ ಖಾತೆಗೆ ಹಾಕಿದ್ದಾರೆ ಎನ್ನಲಾಗಿದೆ. ಕಪ್ಪು ಹಣ ಯಾರಿಗೆ ನೀಡಲಾಗಿದೆ ಎನ್ನುವುದು ಬಹಿರಂಗವಾಗಬೇಕು. ಹೀಗಾಗಿ, ತಕ್ಷಣವೇ ಕೋಡಿಹಳ್ಳಿ ಚಂದ್ರಶೇಖರ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪದ ಮೇಲೆ ಮೊಕದ್ದಮೆ ದಾಖಲಿಸಬೇಕು ಮತ್ತು ಎಲ್ಲ ಅಂಶಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೋಡಿಹಳ್ಳಿ ವಿರುದ್ಧ ಪ್ರತಿಭಟನೆ : ಬೆಂಗಳೂರು ನಗರ ಜೆಡಿಎಸ್ ಕಾರ್ಯಕರ್ತರು, ಕೋಡಿಹಳ್ಳಿ ವಿರುದ್ಧ ಪ್ರತಿಭಟನೆ ನಡೆಸಿ ತನಿಖೆಗೆ ಆದೇಶಿಸಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ನಾಮಫಲಕವನ್ನು ನೆಲಕ್ಕೆ ಹಾಕಿ, ಕಲ್ಲಿನಿಂದ ಪುಡಿ ಪುಡಿ ಮಾಡಿದ ಘಟನೆಯೂ ನಡೆದಿದೆ. ಚಿತ್ರದುರ್ಗದಲ್ಲಿ ರೈತ ಸಂಘಟನೆಗಳು ಚಂದ್ರಶೇಖರ್ ರವರ ಶವಯಾತ್ರೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಅವರ ಒಟ್ಟಾರೆ ಆಸ್ತಿಯನ್ನು ತನಿಖೆ ಮಾಡಬೇಕು, ಅಕ್ರಮವಾಗಿ ಗಳಿಸಿದ್ದನ್ನು ಸರಕಾರ ವಾಪಸ್ಸು ಪಡಿಯಬೇಕು ಎಂದರು.