ಮಡಿಕೇರಿ: ಕರ್ನಾಟಕ ಬುಡಕಟ್ಟು ಸಂಶೋಧನಾ ಸಂಸ್ಥೆಯು ಕೊಡವ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ ನೀಡುವ ಕುರಿತು ಮಾಡಿರುವ ಸಮೀಕ್ಷೆ ಅಧ್ಯಯನ ವರದಿಯೂ ಎಲ್ಲ ರೀತಿಯಲ್ಲಿ ಸಮಪರ್ಕವಾಗಿ ಇವೆಯೇ ಎಂದು ಪರಿಶೀಲಿಸಬೇಕೆಂದು ರಾಜ್ಯ ಹೈಕೋರ್ಟ್ ಸರಕಾರಕ್ಕೆ ಸೂಚಿಸಿದೆ.
ಅಧ್ಯಯನದ ಸಂದರ್ಭದಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನೀಡಿರುವ ಪ್ರಶ್ನಾವಳಿ ಮತ್ತು ಅರ್ಜಿ ನಮೂನೆಯನ್ನು ರದ್ದಪಡಿಸುವಂತೆ ಕೋರಿ ಕೊಡವ ನ್ಯಾಷನಲ್ ಕೌನ್ಸಿಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ನೆನ್ನೆ ಈ ನಿರ್ದೇಶನ ನೀಡಿದೆ.
ಇದನ್ನು ಓದಿ: ಭ್ರಷ್ಟಾಚಾರದ ಆರೋಪದಿಂದಾಗಿಯೇ ಯಡಿಯೂರಪ್ಪ ಬದಲಾವಣೆ: ಹೆಚ್ ವಿಶ್ವನಾಥ್
“ಈಗಾಗಲೇ ನಡೆಸಿರುವ ಸಮೀಕ್ಷೆಯಲ್ಲಿ ಲೋಪ ಕಂಡು ಬಂದರೆ ಹೊಸ ಸಮೀಕ್ಷೆಯನ್ನು ನಡೆಸಲು ರಾಜ್ಯ ಸರಕಾರ ಮುಕ್ತವಾಗಿದೆ” ಎಂದು ವಿಭಾಗೀಯ ಪೀಠ ತಿಳಿಸಿತು. ವರದಿಯನ್ನು ಒಪ್ಪುವ ಮುನ್ನ ಕೊಡವ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಕುರಿತಾಗಿ ಅಧ್ಯಯನ ನಡೆಸಲು 2016ರ ಡಿಸೆಂಬರ್ 1ರಂದು ಹೊರಡಿಸಿದ ಆದೇಶದಲ್ಲಿ ವಿಧಿಸಿದ್ದ ಷರತ್ತು ಮತ್ತು ಮಾನದಂಡಗಳಿಗೆ ಅನುಗುಣವಾಗಿ ಅಧ್ಯಯನ ನಡೆಸಲಾಗಿದೆಯೇ ಎಂದು ಸರಕಾರ ಪರಿಶೀಲಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ವಾದ ಮಂಡಿಸಿ, ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಅಧ್ಯಯನದ ವೇಳೆ ಸೂಕ್ತ ಮಾನದಂಡ ಅನುಸರಿಸಿಲ್ಲ. ಐದು ಅಂಶಗಳ ಆಧಾರದ ಮೇಲೆ ಅಧ್ಯಯನ ನಡೆಸಲು ಸರಕಾರ ಆದೇಶಿತ್ತು. ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಅಧ್ಯಯನ ನಡೆಸಲಾಗಿದೆ. ಅಧ್ಯಯನ ವೇಳೆ ಸಿದ್ಧಪಡಿಸಿದ ಪ್ರಶ್ನಾವಳಿ ಕೂಡ ಸಮಂಜಸವಾಗಿರಲಿಲ್ಲ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಮಾನದಂಡದ ಮೇಲೆ ಅಧ್ಯಯನ ನಡೆಸಲಾಗಿದೆ. ಆದರೆ, ಜನಾಂಗೀಯ ಅಧ್ಯಯನ ನಡೆಸಬೇಕಿತ್ತು. ಹೀಗಾಗಿ, ಸಲ್ಲಿಕೆಯಾಗಿರುವ ವರದಿ ಪರಿಗಣಿಸದಂತೆ ಸರಕಾರಕ್ಕೆ ಸೂಚಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು.
ನ್ಯಾಯಪೀಠವು ಅಧ್ಯಯನ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಹಂತದಲ್ಲಿ ಅರ್ಜಿದಾರರ ಮನವಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಸರಕಾರವು ವರದಿ ಪರಿಶೀಲನೆ ವೇಳೆ ಅರ್ಜಿದಾರರ ಆಕ್ಷೇಪಣೆಗಳನ್ನು ಪರಿಗಣಿಸುವಂತೆ ಸೂಚನೆ ನೀಡಿದೆ.