ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಜಡಿಮಳೆಗೆ ರೆಡ್ ಅಲರ್ಟ್ ಘೋಷಿಸಲಾಗಿತ್ತು. ನಿರಂತರವಾಗಿ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಕೊಡಗು ತತ್ತರಗೊಂಡಿದೆ. ನದಿ, ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬರೆಗಳು ಜರಿಯುತ್ತಿವೆ, ರಸ್ತೆಗಳು ಜಲಾವೃತಗೊಳ್ಳುತ್ತಿದ್ದು, ಅನೇಕ ಮನೆಗಳು ಕುಸಿದು ಬಿದ್ದಿದೆ. ಅಪಾಯದಂಚಿನ ಹಲವು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
4 ದಿನಗಳಿಂದ ಶಾಲಾ ಕಾಲೇಜುಗಳಿಗೆ ಸತತ ರಜೆಯನ್ನು ನೀಡಲಾಗಿದ್ದು, ಶುಕ್ರವಾರವೂ ರೆಡ್ ಅಲರ್ಟ್ ಘೋಷಣೆಯಾಗಿದ್ದರಿಂದ ಮುಂಜಾಗೃತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಈ ಮಧ್ಯೆ ಜಿಲ್ಲೆಯ 30ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 100ಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಸೆಸ್ಕ್ ಸಿಬ್ಬಂದಿ ಗ್ರಾಮಗಳಿಗೆ ವಿದ್ಯುತ್ ಕಲ್ಪಿಸಲು ರಾತ್ರಿ ಹಗಲೆನ್ನದೆ ಹರಸಾಹಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಳೆ ರಜೆ : ನಕಲಿ ಆದೇಶ ವೈರಲ್ – ಎಫ್‌ಐಆರ್‌ಗೆ ಜಿಲ್ಲಾಧಿಕಾರಿ ಆದೇಶ
ಮುರಿದು ಬೀಳುತ್ತಿರುವ ಕಂಬಗಳು:
ಜಿಲ್ಲೆಯ 5 ತಾಲೂಕಿನಲ್ಲೂ ನೂರಾರು ವಿದ್ಯುತ್ ಕಂಬಗಳು ಗಾಳಿ ಮಳೆ ಹೆಚ್ಚಿರುವುದರಿಂದ ನೆಲಕ್ಕುರುಳಿವೆ. ಮಡಿಕೇರಿ ತಾಲೂಕಿನಲ್ಲಿ465 ಕಂಬಗಳು , ಪೊನ್ನಂಪೇಟೆ ತಾಲೂಕಿನಲ್ಲಿ485 ವಿದ್ಯುತ್ ಕಂಬಗಳು, ವಿರಾಜಪೇಟೆ ತಾಲೂಕಿನಲ್ಲಿ 277 ಕಂಬಗಳು, ಸೋಮವಾರಪೇಟೆ ತಾಲೂಕಿನಲ್ಲಿ221 ಕಂಬಗಳು, ತಾಲೂಕಿನಲ್ಲಿ261 ವಿದ್ಯುತ್ ಕಂಬಗಳು ತುಂಡಾಗಿದ್ದು ಬಹುತೇಕ ಕಡೆ ಬದಲಿ ವಿದ್ಯುತ್ ಕಂಬಗಳನ್ನು ಈಗಾಗಲೇ ಅಳವಡಿಸಲಾಗಿದೆ.
ಕತ್ತಲಲ್ಲಿ ಗ್ರಾಮಗಳು:
ಸತತ ಗಾಳಿಮಳೆಗೆ ಹಲವು ಕಡೆಗಳಲ್ಲಿ ರಸ್ತೆಗಳಿಗೆ ನೀರು ತುಂಬಿ ಸಂಪರ್ಕ ಕಡಿತಗೊಂಡರೆ 30 ಗ್ರಾಮ ಪಂಚಾಯಿತಿ ವ್ಯಾಪ್ತಿಯ 100ಕ್ಕೂ ಹೆಚ್ಚು ಗ್ರಾಮಗಳು ಕಳೆದ 3 ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಮುಳುಗಿದೆ. ಮಡಿಕೇರಿ ತಾಲೂಕಿನ ಕೊಡಂಗೇರಿ, ಮರಗೋಡು, ಅರೆಕಾಡು, ನಾಪೋಕ್ಲು, ಅಯ್ಯೇಂಗೇರಿ, ಭಾಗಮಂಡಲ, ಸೂರ್ಲಬ್ಬಿ, ಕಾಲೂರು, ಗಾಳಿಬೀಡು, ಕತ್ತಲೆಕಾಡು, ಹಾಕತ್ತೂರು, ತೊಂಬತ್ತುಮನೆ, ಬಕ್ಕ, ಐಕೊಳ, ಸಂಪಾಜೆ, ಜೋಡುಪಾಲ, ಕೊಯನಾಡು, ಚೆಂಬು ಸೇರಿದಂತೆ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕದ ಕೊರತೆಯುಂಟಾಗಿದೆ.
ಅಲ್ಲದೆ ವಿರಾಜಪೇಟೆ ತಾಲೂಕಿನ ಹಲವು ಗ್ರಾಮಗಳಿಗೂ ವಿದ್ಯುತ್ ಅಡಚಣೆಯಾಗಿದೆ. ಪೇರಂಬಾಡಿ, ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ, ಬಜೆಗೊಲ್ಲಿ, ಇಂಜಿಲಗೆರೆ, ಗುಯ್ಯ, ಪಚ್ಚಿನಾಡು ಸೇರಿ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಸೋಮವಾರಪೇಟೆ ತಾಲೂಕಿನಲ್ಲೂ ವಿದ್ಯುತ್ ಇಲ್ಲ:
ಮಳೆಯಿಂದ ಕೊಡಗಿನ ಸೋಮವಾರಪೇಟೆ ತಾಲೂಕಿಗೆ ಹೆಚ್ಚು ಹಾನಿಯಾಗಿದ್ದು ಗ್ರಾಮೀಣ ಭಾಗದ ಎಲ್ಲಾ ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಟ್ಟಿಹೊಳೆ, ಮಾದಾಪುರ, ಅಂತೋನಿ ಗೆಚ್, ಹೊಸತೋಟ ಕುಂಬೂರು, ಶಾಂತಳ್ಳಿ, ಕೊಡ್ಲಿಪೇಟೆ, ಬೋಯಿಕೇರಿ, ಹೊಸತೋಟ ಕಡೆಗಳಲ್ಲೂವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು ವಿದ್ಯುತ್ ಸಂಪರ್ಕ ಕಲ್ಪಿಸಲು ಇಲಾಖೆ ಶ್ರಮವಹಿಸುತ್ತಿದೆ.
ಗಾಳಿ ಮಳೆ ಲೆಕ್ಕಿಸದೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ:
ಕಳೆದ 7 ದಿನಗಳಿಂದಲೂ ನಿರಂತರ ಗಾಳಿ ಮಳೆಯಿಂದ ಹಾನಿಯಾಗಿರುವ ವಿದ್ಯುತ್ ಕಂಬಗಳನ್ನು ಮತ್ತು ಅದರ ಮೇಲೆ ಬಿದ್ದಿರುವ ನೂರಾರು ಮರಗಳನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕ ನೀಡಲು ಸೆಸ್ಕ್ ಸಿಬ್ಬಂದಿ ಅಕ್ಷರಶಃ ಹರಸಾಹಸ ಪಡುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 235 ನಿರ್ವಹಣಾ ಸಿಬ್ಬಂದಿಗಳಿದ್ದು ಹೆಚ್ಚುವರಿಯಾಗಿ ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರದಿಂದ 62 ಸಿಬ್ಬಂದಿ ನಿಯೋಜಿಸಿಕೊಳ್ಳಲಾಗಿದೆ. ಅಲ್ಲದೆ 62 ಗ್ಯಾಂಗ್ ಮೆನ್‌ಗಳು ಕೂಡ ಇದ್ದು ಜಿಲ್ಲೆಯ 5 ತಾಲೂಕಿನಲ್ಲಿಮುರಿದು ಬಿದ್ದಿರುವ ವಿದ್ಯುತ್ ಕಂಬಗಳ ತೆರವು ಕಾರ್ಯದಲ್ಲಿತೊಡಗಿದ್ದಾರೆ.
ನಮ್ಮ ಸಿಬ್ಬಂದಿ ಹಗಲಿರುಳೆನ್ನದೆ ಮಳೆಯನ್ನೂ ಲೆಕ್ಕಿಸದೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕೆಲಸ ನಿರ್ವಹಿಸುತ್ತಿದ್ದಾರೆ. ಇಲಾಖೆ ಕಡೆಯಿಂದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದ್ದು ಬಹುತೇಕ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಅಲ್ಲದೆ ಮುರಿದು ಬಿದ್ದಿರುವ ಕಂಬಗಳ ಪೈಕಿ 1489 ಕಂಬಗಳನ್ನು ಮರುಸ್ಥಾಪಿಸಲಾಗಿದೆ.
ಪ್ರವಾಹ ಭೀತಿಯಲ್ಲಿ ಜನ
ವಿರಾಜಪೇಟೆ ತಾಲೂಕು ಅಮ್ಮತ್ತಿ ಹೋಬಳಿ ಕರಡಿಗೋಡು ಗ್ರಾಮದ ಹೊಳೆಕೆರೆಯಲ್ಲಿ ಭಾರಿ ಮಳೆಯಿಂದ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಈ ಹಿನ್ನೆಲೆ ಕರಡಿಗೋಡು ಹೊಳೆಕೆರೆ ಬದಿಯಲ್ಲಿ ವಾಸವಿರುವ 9 ಕುಟುಂಬದವರಿಗೆ ಪ್ರವಾಹ ಭೀತಿ ಇರುವುದರಿಂದ ಸ್ಥಳಾಂತರಿಸಲಾಗಿದೆ.
ಈ ಸಂಬಂಧ ತಹಶೀಲ್ದಾರರಾದ ರಾಮಚಂದ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇತರರು ಭೇಟಿ ನೀಡಿ ವೀಕ್ಷಿಸಿದರು. ಕುಂಜಿಲ ಗ್ರಾಮದ ಖದಿಸಮ್ಮ ಎಂಬುವವರ ವಾಸದ ಮನೆ ಹಾನಿಯಾಗಿದ್ದು, ಮನೆಯು ಬೀಳುವ ಸ್ಥಿತಿಯಲ್ಲಿದೆ. ಈ ಹಿನ್ನೆಲೆ ಕುಟುಂಬದವರನ್ನು ಸ್ಥಳಾಂತರಿಸಲಾಗಿದೆ.
ಮಡಿಕೇರಿ ಮೂರ್ನಾಡು ಮುಖ್ಯ ರಸ್ತೆಯ ಕಗ್ಗೊಡ್ಲು ಗ್ರಾಮದ ಮುತ್ತಪ್ಪ ಎಂಬುವರ ಅಂಗಡಿ ಮತ್ತು ಮನೆಗೆ ಹೆಚ್ಚಿನ ಮಳೆಯಿಂದಾಗಿ ಹೊಳೆ ತುಂಬಿ ನೀರು ಹರಿದು ಜಲಾವೃತವಾಗಿದೆ. ಈ ಕುಟುಂಬದವರನ್ನು ಸ್ಥಳಾಂತರಿಸಲು ಕ್ರಮವಹಿಸಲಾಗಿದೆ.
ಕುಶಾಲನಗರ ಹೋಬಳಿ ನೆಲ್ಯ ಹುದಿಕೇರಿ ಗ್ರಾಮದ ಕಾವೇರಿ ನದಿ ಪಾತ್ರದ ಬಳಿ ವಾಸವಾಗಿದ್ದ ರಾಜು ಎಂಬರ ಮನೆಗೆ ನೀರು ನುಗ್ಗಿದ್ದು. ಈ ಕುಟುಂಬಕ್ಕೆ ಕುಶಾಲನಗರ ತಹಸೀಲ್ದಾರ್ ಅವರು ಆಹಾರ ಕಿಟ್ ನೀಡಿ, ಕುಟುಂಬವನ್ನು ಸ್ಥಳಾಂತರಿಸಲಾಯಿತು.
ಕುಶಾಲನಗರ ಹೋಬಳಿ ನೆಲ್ಯಹುದಿಕೇರಿ ಗ್ರಾಮದ ಕಾವೇರಿ ನದಿ ಪಾತ್ರದಲ್ಲಿ ವಾಸವಾಗಿದ್ದ ಅಕ್ಕಣ್ಣಿ ಕರ್ಪ ಅವರ ಮನೆಗೆ ಕಾವೇರಿ ನದಿ ನೀರು ನುಗ್ಗಿದ್ದು, ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ಅವರು ಆಹಾರ ಕಿಟ್ ವಿತರಿಸಿದರು. ಈ ಕುಟುಂಬದವರನ್ನು ಸ್ಥಳಾಂತರಿಸಲಾಗಿದೆ.
ವಿರಾಜಪೇಟೆ ಹೋಬಳಿ ಅಂಬಟ್ಟಿ ಗ್ರಾಮದ ನಿವಾಸಿ ಕೆ ಅಲೀಮಾ ರವರ ವಾಸದ ಮನೆಯ ಹಿಂಭಾಗದಲ್ಲಿ ಬರೆ ಕುಸಿಯುತ್ತಿದ್ದು, ಈ ಸಂಬಂಧ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕುಟುಂಬದವರನ್ನು ಸ್ಥಳಾಂತರಿಸಿದ್ದಾರೆ. ಚೇಲವಾರ ಗ್ರಾಮದ ಚೆಟ್ಟಿಯಪ್ಪ ಎಂಬುವವರ ವಾಸದ ಮನೆಯ ಹಿಂಭಾಗದಲ್ಲಿ ಗೋಡೆ ಕುಸಿದಿದೆ. ಮನೆಯು ಸಂಪೂರ್ಣವಾಗಿ ಕುಸಿದು ಬೀಳುವ ಸಾಧ್ಯತೆಯಿದ್ದು, ಕುಟುಂಬದವರ ಸ್ಥಳಾಂತರಕ್ಕೆ ತಾಲ್ಲೂಕು ಆಡಳಿತ ಕ್ರಮವಹಿಸಿದೆ.
ಇದನ್ನೂ ನೋಡಿ: ಅನ್ನದಾತನಿಗೆ ಅವಮಾನ | ಸದನದಲ್ಲಿ ಕಾವೇರಿದ ಚರ್ಚೆ – 7 ದಿನ ಜಿಟಿ ಮಾಲ್ ಬಂದ್!Janashakthi Media