ಕೊಡಗು: ಶಾಲೆ ಆವರಣದಲ್ಲಿ ತ್ರಿಶೂಲ ದೀಕ್ಷೆ- ಶಸ್ತ್ರಾಸ್ತ್ರ ತರಬೇತಿ

  • ಶಾಲಾ ಆವರಣದಲ್ಲಿ ಬಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ
  • ನಿರ್ಜನ ಪ್ರದೇಶವೊಂದರಲ್ಲಿ ಬಂದೂಕು ವಿತರಿಸುತ್ತಿರುವ ಪೋಟೋಗಳು ಇಲ್ಲೆಡೆ ವೈರಲ್‌ ಆಗಿವೆ 

ಮಡಿಕೇರಿ: ಹಿಜಬ್, ಆಜಾನ್ ಹಾಗೂ ದೇವಸ್ಥಾನ ವಿಚಾರವಾಗಿ ಒಂದಲ್ಲ ಒಂದು ವಿವಾದಗಳು ಸೃಷ್ಠಿಯಾಗುತ್ತಿದೆ. ಒಂದಲ್ಲ ಒಂದು ವಿವಾದಗಳನ್ನು ಹುಟ್ಟುಹಾಕಿ ಹಿಂದೂ-ಮುಸ್ಲಿಮರ ನಡುವೆ ವೈಷಮ್ಯ ಸೃಷ್ಟಿಸಲು ಕಾರಣಗಳನ್ನು ಹುಡುಕಲಾಗುತ್ತಿದೆ. ಸರ್ಕಾರ ಮಾತ್ರ ಕೋಮುಗಲಭೆಗೆ ಅವಕಾಶ ನೀಡುವುದಿಲ್ಲ ಎಂದು ಸಬೂಬು ಹೇಳುತ್ತಿದ್ದರೂ ಸಹ ಇದೀಗ ಮತ್ತೊಂದು ವಿವಾದಕ್ಕೆ ದಾರಿಮಾಡಿಕೊಟ್ಟಂತಿದೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಸಾಯಿ ಶಂಕರ ಶಾಲೆಯಲ್ಲಿ ಬಜರಂಗದಳ ದಳದ ವತಿಯಿಂದ ನೂರಾರು ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ಹಾಗೂ ತ್ರಿಶೂಲ ದೀಕ್ಷೆ ನೀಡುರುವ ಘಟನೆ ಬೆಳಕಿಗೆ ಬಂದಿದೆ.

ಶಾಲೆಯ ಆವರಣದಲ್ಲಿ ಹಿಜಬ್‌ಗೆ ಅವಕಾಶ ಇಲ್ಲವೆಂದಿದ್ದ ಸರ್ಕಾರ, ಸಂಘ ಪರಿವಾರದವರಿಗೆ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ನೀಡಿದ್ದು ಹೇಗೆ? ಎಂಬ ಅನುಮಾನ ಶುರುವಾಗಿದೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿವೆ.

ಕೊಡಗಿನ ಪೊನ್ನಂಪೇಟೆ ಸಾಯಿ ಶಂಕರ ಶಾಲೆಯಲ್ಲಿ ಕಳೆದ ವಾರ ಮುಕ್ತಾಯವಾದ ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ. ಶಾಲಾ ಆವರಣದಲ್ಲೇ ಸುಮಾರು 8 ದಿನಗಳ ಕಾಲ ಶೌರ್ಯ ಪ್ರಶಿಕ್ಷಣ ವರ್ಗದ ತರಬೇತಿ ನಡೆದಿದೆ. ಈ ತರಬೇತಿ ಶಿಬಿರ ನಡೆದ 8 ದಿನಗಳ ಅವಧಿಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಜಿಲ್ಲೆಯ ಕೆಲ ಮುಖಂಡರೂ ಪಾಲ್ಗೊಂಡಿದ್ದರು ಎಂದು ಮೂಲಗಳು ಖಚಿತಪಡಿಸಿವೆ.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ತರಬೇತಿ ಪಡೆದಿದ್ದಾರೆ ಎನ್ನಲಾಗಿದೆ. ಶಾಲಾ ಆವರಣದಲ್ಲಿ ಬಂದೂಕು ಹಿಡಿದು ತರಬೇತಿ ಪಡೆಯುತ್ತಿರುವುದು ಹಾಗೂ ಸಂಸ್ಥೆಯ ಸಭಾಂಗಣದಲ್ಲಿ ತ್ರಿಶೂಲ ಹಿಡಿದು ದೀಕ್ಷೆ ಪಡೆಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿವೆ.

ಈ ಕುರಿತು ಟ್ವಿಟ್ಟರ್‌ನಲ್ಲಿ ಹಲವು ಮಂದಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಪ್ರಮುಖರಿಗೆ ರಾಜ್ಯದಲ್ಲಿ ಏನು ನಡೆಯುತ್ತಿದೆ? ಶಾಲೆಗಳಿಗೆ ಯಾಕೆ ಧರ್ಮದ ಲೇಪನ ಬಳಿಯುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *