ಕೆಎಂಎಫ್ ಡೈರಿಯಲ್ಲಿ ಉದ್ಯೋಗ ನೀಡುವುದಾಗಿ 138ಕ್ಕೂ ಹೆಚ್ಚು ಮಂದಿಗೆ ವಂಚನೆ: ಮೂವರ ಬಂಧನ

ಮಂಗಳೂರು: ಮಂಗಳೂರು ನಗರದಲ್ಲಿರುವ ಸರಕಾರಿ ಸ್ವಾಮ್ಯದ ಕೆಎಂಎಫ್ ಡೈರಿ ಶಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿ ಸುಮಾರು 138ಕ್ಕೂ ಹೆಚ್ಚು ಮಂದಿಯಿಂದ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮೂರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಪ್ರಕರಣದ ಪ್ರಮುಖ ಆರೋಪಿ ರಾಮಪ್ರಸಾದ್​ರಾವ್ ಆಲಿಯಾಸ್​ ಹರೀಶ್ ಆಲಿಯಾಸ್​ ಕೇಶವ ಎಂಬುವರನ್ನು ಮೊದಲಿಗೆ ಬಂಧಿಸಲಾಗಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ರಮೇಶ್ ಪೂಜಾರಿ(41), ಮಂಗಳೂರಿನ ಪಡೀಲ್ ಅಳಪೆಯ ಚಂದ್ರಾವತಿ (36), ಬೆಂಗಳೂರು ದೊಡ್ಡ ತೋಗೂರಿನ ಸುರೇಂದ್ರ ರೆಡ್ಡಿ(35) ಬಂಧಿತರು. ಉದ್ಯೋಗ ಆಕಾಂಕ್ಷೆಯಲ್ಲಿರುವ 138ಕ್ಕೂ ಅಧಿಕ ಮಂದಿಯಿಂದ ರೂ. 1.84 ಕೋಟಿಗೂ ಅಧಿಕ ಹಣ ಪಡೆದು ವಂಚಿಸಲಾಗಿದೆ.

ಬಂಟ್ವಾಳ ತಾಲೂಕಿನ ಸಾಲೆತ್ತೂರು ನಿವಾಸಿ ರಾಮಪ್ರಸಾದ್ ರಾವ್ ಪಿ ಕೆಎಂಎಫ್​ನಲ್ಲಿ ನೇರ ನೇಮಕಾತಿ ಮೂಲಕ‌ ಉದ್ಯೋಗ ದೊರಕಿಸಿಕೊಡುತ್ತೇನೆ. ಅದಕ್ಕಾಗಿ ಹಣ ನೀಡಬೇಕು ಎಂದು ಉದ್ಯೋಗಾಕಾಂಕ್ಷಿಗಳನ್ನು ಯಾಮಾರಿಸಿ ಹಣ ಪಡೆದುಕೊಂಡಿದ್ದಾನೆ. ಹಣ ಪಡೆದು ಕೆಎಂಎಫ್ ಸಂಸ್ಥೆಗೆ ಸಂಬಂಧಿಸಿದ ನಕಲಿ ಉದ್ಯೋಗ ನೇಮಕಾತಿ ಪತ್ರ, ಐಡಿ ಕಾರ್ಡ್ ನೀಡಿ ಅವರಿಗೆ ಉದ್ಯೋಗ ಸಿಕ್ಕಿರುವಂತೆ ಭರವಸೆ ಮೂಡಿಸುತ್ತಿದ್ದರು. ನೇಮಕಾತಿಯ ನೆಪದಲ್ಲಿ ಹಲವು ಮಂದಿಗೆ ತರಬೇತಿಯನ್ನೂ ಸಹ ನೀಡಲಾಗಿದೆ.

ಬಂಧಿತ ಪ್ರಮುಖ ಆರೋಪಿ ರಾಮಪ್ರಸಾದ್ ರಾವ್ ಎಂಬಾತ ಹರೀಶ್, ಕೇಶವ ಮತ್ತು ಶಶಿಧರ ಎಂಬ ಹೆಸರಿನಲ್ಲಿಯೂ ಗುರುತಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 1.84 ಕೋಟಿ ಹಣ ವಸೂಲಿಯ ನಂತರವೂ ನಾಲ್ವರ ಬಳಿ ಉದ್ಯೋಗ ನೀಡುವ ಭರವಸೆ ನೀಡಿ ಹಣ ಪಡೆದಿದ್ದರು. ಆದರೆ ಉದ್ಯೋಗ ನೀಡಿರಲಿಲ್ಲ. ಕೊನೆಗೆ ವಂಚನೆಗೊಳಗಾದವರು ಪೊಲೀಸ್ ದೂರು ನೀಡಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *