ನವದೆಹಲಿ : ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರತಿಭಟನೆಕಾರರನ್ನು ಸುರಕ್ಷಿತವಾಗಿ ಕೊಂಡೊಯ್ಯಲು ‘ಕಿಸಾನ್ ಮೆಟ್ರೋ’ ಸೇವೆಯನ್ನು ಆರಂಭಿಸಿದ್ದಾರೆ.
ಕೇಂದ್ರ ಸರಕಾರದ ಮೂರು ಕೃಷಿಕಾಯ್ದೆಗಳ ರದ್ದತಿಗಾಗಿ
ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ 7 ತಿಂಗಳನ್ನು ಪೂರ್ಣಗೊಳಿಸಿದೆ. ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರಕಾರ ಅನೇಕ ತಂತ್ರಗಳನ್ನು ಹೆಣೆಯುತ್ತಾ ಬಂದಿದೆ. ಕಡ್ಡಿ ತುಂಡರಿಸಿದಂತೆ ರೈತರು ಆ ಎಲ್ಲಾ ತಂತ್ರಗಳನ್ನು ಭೇದಿಸಿ ಹೋರಾಟವನ್ನು ತೀವೃಗೊಳಿಸುತ್ತಿದ್ದಾರೆ. ಪ್ರತಿಭಟನಾ ನಿರತ ರೈತರ ಗಡಿ ಪ್ರದೇಶಕ್ಕೆ ಯಾರ ಸಂಪರ್ಕವೂ ಸಿಗಬಾರದು. ಆಹಾರ, ನೀರು ಸರಬರಾಜು ಸ್ಥಗಿತಗೊಳಿಸಬೇಕು ಎಂದು ಕೇಂದ್ರ ಸರಕಾರ ಅಘೋಷಿತ ತುರ್ತುಪರಿಸ್ಥಿತಿ ಹೇರುತ್ತಲೆ ಇದೆ. ಇದಕ್ಕೆ ಜಗ್ಗದ ರೈತರು ಈಗ ಪ್ರತಿಭಟನೆಕಾರರನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕೊಂಡೊಯ್ಯಲು ‘ ಕಿಸಾನ್ ಮೆಟ್ರೋ’ ಸೇವೆಯನ್ನು ಆರಂಭಿಸಿದೆ.
ಏನಿದು ಕಿಸಾನ್ ಮೆಟ್ರೋ : ರೈತರ ಹೋರಾಟದ ಕೇಂದ್ರ ಬಿಂದು ಟ್ರ್ಯಾಕ್ಟರ್, ಆ ಟ್ರ್ಯಾಕ್ಟರ್ ಗಳೆ ಈಗ ಕಿಸಾನ್ ಮೆಟ್ರೋಗಳಾಗಿ ಪರಿವರ್ತನೆಯಾಗಿವೆ. ಪ್ರತಿಭಟನೆಗೆ ರೈತರಷ್ಟೆ ಭಾಗವಹಿಸದೆ ಅವರು ಉಳಿಮೆಗೆ ಬಳಸುತ್ತಿದ್ದ ಟ್ರ್ಯಾಕ್ಟರ್ ಗಳನ್ನು ಹೋರಾಟಕ್ಕೆ ತಂದಿದ್ದರು. ಲಕ್ಷಾಂತರ ಟ್ರ್ಯಾಕ್ಟರ್ ಮೂಲಕ ‘ಟ್ರ್ಯಾಕ್ಟರ್ ಪರೇಡ್’ ನಡೆಸಿದ್ದರು. ಅದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು.
ಹಾಗಾಗಿ ಇದೇ ಟ್ರ್ಯಾಕ್ಟರ್ ಗಳನ್ನು ಬಳಸಿ ಕಿಸಾನ್ ಮೊಟ್ರೊ ಎಂದು ಹೆಸರನ್ನಿಟ್ಟು ರೈತರ ಸೇವೆಯನ್ನು ಮಾಡಲಾಗುತ್ತಿದೆ. ರೈತರ ಈ ಪ್ರಯತ್ನ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ.
ಹೇಗಿದೆ ಕಿಸಾನ್ ಮೆಟ್ರೋ : ಟ್ರ್ಯಾಕ್ಟರ್ ಗೆ ಸಿತ್ತಲು ಕಬ್ಬಿಣದ ರಾಡ್ ಗಳನ್ನು ಹಾಕಲಾಗಿದೆ. ಮಳೆಗಾಲ ಆರಂಭವಾಗುವ ಕಾರಣ ಮಳೆ ಬಂದಾಗ ತೊಂದರೆ ಆಗದಂತೆ ಅದಕ್ಕೆ ತಾಡಪತ್ರೆಗಳನ್ನು ಹಾಕುವ ಸಾಧ್ಯತೆ ಇದೆ. ಹತ್ತುವುದಕ್ಕೆ, ಇಳಿಯುವುದಕ್ಕೆ ಸಹಾಯವಾಗಲು ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ. ಒಳಗಡೆ ಕುಳಿತುಕೊಳ್ಳಲು ಬೆಂಚ್ ಮಾದರಿಯಲ್ಲಿ ಸೀಟುಗಳನ್ನು ನಿರ್ಮಿಸಲಾಗಿದೆ. ಮಧ್ಯದಲ್ಲಿ ನಿಲ್ಲಲು ಜಾಗದ ವ್ಯವಸ್ಥೆ ಮಾಡಿದ್ದು. ಆಸರೆಗಾಗಿ ಕೈ ಹಿಡಕಿಗಳನ್ನು ಮಾಡಲಾಗಿದೆ. 50 ರಿಂದ 70 ಜನ ಕುಳಿತು ಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಈ ಸೇವೆಯನ್ನು ಸ್ವಚ್ ಕಿಸಾನ್ ಮೋರ್ಚಾ ಮತ್ತು ಲೈಫ್ ಕೇರ್ ಫೌಂಡೇಶನ್ ಪ್ರಾರಂಭಿಸಿದೆ. “ಕಿಸಾನ್ ಮೆಟ್ರೋ ರೈತರನ್ನು ಸಿಂಗ್ ಗಡಿಯಿಂದ ಟಿಕ್ರಿ ಗಡಿಗೆ ಕರೆದೊಯ್ಯುತ್ತದೆ ಮತ್ತು ಪ್ರತಿ ವಾರಾಂತ್ಯದಲ್ಲಿ ಹಿಂತಿರುಗುತ್ತದೆ. ಸದ್ಯಕ್ಕೆ, ಇದು ಸಿಂಗು ಮತ್ತು ಟಿಕ್ರಿ ಗಡಿಯಲ್ಲಿ ಮಾತ್ರ ಆರಂಭಿಸಲಾಗಿದೆ. ಗಾಜಿಪುರ ಸೇರಿದಂತೆ ಇತರ ಗಡಿಗಳಿಗೂ ಸಧ್ಯದಲ್ಲೆ ಆರಂಭಿಸುತ್ತೇವೆ ”ಎಂದು ಲೈಫ್ ಕೇರ್ ಫೌಂಡೇಶನ್ ಅಡಿಯಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ನಡೆಸುತ್ತಿರುವ ಅವತಾರ್ ಸಿಂಗ್ ಹೇಳಿದರು.