ಬೆಂಗಳೂರು: ಪ್ರಕರಣವೊಂದರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಪೀಠ, 2007ರಲ್ಲಿ ಕೆಐಎಡಿಬಿ ಭೂಸ್ವಾಧೀನ ಪಡಿಸಿಕೊಂಡ ಜಾಗಕ್ಕೆ ಸೂಕ್ತ ಪರಿಹಾರ ಮೊತ್ತ ನೀಡದಿರುವುದಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯ ಸರ್ಕಾರಕ್ಕೆ ಛೀಮಾರಿ ಹಾಕಿದೆ.
ಎಂ ವಿ ಗುರುಪ್ರಸಾದ್ ಮತ್ತು ನಂದಿನಿ ಗುರುಪ್ರಸಾದ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದಿ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನ್ಯಾಯಪೀಠ, ಕೆಐಎಡಿಬಿ ಮತ್ತು ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ.
ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯ ರೀತಿ ಮತ್ತು ಖಾಸಗಿಯವರಿಂದ ವಶಕ್ಕೆ ಪಡೆದುಕೊಂಡ ಸ್ವತ್ತಿಗೆ ಸರಿಯಾದ ಪರಿಹಾರ ಕೊಡದೇ ಇರುವ ಕೆಐಎಡಿಬಿಯ ಕ್ರಮವನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಈ ವಿಚಾರದಲ್ಲಿ ಸರ್ಕಾರಕ್ಕೂ ಛೀಮಾರಿ ಹಾಕಿದೆ. ಸರ್ಕಾರ ಸುಲಿಗೆಕೋರರಂತೆ ವರ್ತಿಸಬಾರದು ಎಂದು ಹೈಕೋರ್ಟ್ ಹೇಳಿದೆ.
ಇದನ್ನು ಓದಿ: ಶಿವರಾಮ ಕಾರಂತ ಬಡಾವಣೆ ಹೆಸರಿನಲ್ಲಿ ಭೂಸ್ವಾಧೀನ – ಸ್ಥಳೀಯರ ಆಕ್ರೋಶ
2007ರಲ್ಲಿ ಗುರುಪ್ರಸಾದ್ ದಂಪತಿಗೆ ಸೇರಿರುವ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿತ್ತು. ಆ ವೇಳೆ ಪರಿಹಾರ ಒದಗಿಸುವ ಅಧಿಸೂಚನೆ ಪಟ್ಟಿಯಲ್ಲಿ ಗುರುಪ್ರಸಾದ್ ಮತ್ತು ನಂದಿನಿ ಗುರುಪ್ರಸಾದ್ ಹೆಸರು ಉಲ್ಲೇಖಿಸಲಿಲ್ಲ. ನಂತರ ಏಳು ವರ್ಷಗಳ ಪ್ರಯತ್ನದ ಬಳಿಕ 2014ರಲ್ಲಿ ಸರ್ಕಾರ ತಿದ್ದುಪಡಿ ಮಾಡಿ ಮತ್ತೆ ಇವರ ಹೆಸರುಗಳನ್ನು ಪಟ್ಟಿಗೆ ಸೇರಿಸಿತು. ಅದಾದ ನಂತರವೂ ಇವರಿಗೆ ಪರಿಹಾರ ಸಿಕ್ಕಿಲ್ಲ. ಕೆಐಎಡಿಬಿಯಿಂದ ನಡೆದ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಗುರುಪ್ರಸಾದ್ ಮತ್ತು ನಂದಿನಿ ಗುರುಪ್ರಸಾದ್ ಅವರು ಹೈಕೋರ್ಟ್ನಲ್ಲಿ ದೂರು ಅರ್ಜಿ ಸಲ್ಲಿಸಿದ್ದರು.
ಭೂಸ್ವಾಧೀನ ಕ್ರಮವನ್ನು ಹಿಂಪಡೆಯಬೇಕೆಂದು ಎಂದು ಅರ್ಜಿದಾರರು ಮಾಡಿದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಆದರೆ. ಸೂಕ್ತ ಪರಿಹಾರ ಒದಗಿಸಬೇಕೆಂದು ಆದೇಶಿಸಿದೆ.
2013ರ ಭೂಸ್ವಾಧೀನ, ಪುನರ್ವಸತಿಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಕಾಯ್ದೆ ಅಡಿಯಲ್ಲಿ ಎಣಿಸಲಾದ ಮೊತ್ತದ ಶೇ 50ರ ದರದಲ್ಲಿ ಪರಿಹಾರ ನೀಡಬೇಕು. ಅರ್ಜಿದಾರರಿಗೆ ಒಂದು ಎಕರೆಗೆ 25 ಸಾವಿರ ರೂಪಾಯಿ ಲೆಕ್ಕದಲ್ಲಿ ಪರಿಹಾರ ನೀಡಿ ಎಂದು ಕೆಐಎಡಿಬಿಗೆ ನ್ಯಾಯಾಧೀಶರು ನಿರ್ದೇಶಿಸಿದ್ದಾರೆ.
ಸರ್ಕಾರದ ಧೋರಣೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಐದನೇ ಶತಮಾನದಲ್ಲಿ ಸೇಂಟ್ ಆಗಸ್ಟೀನ್ ಬರೆದ ದಿ ಸಿಟಿ ಆಫ್ ಗಾಡ್ ಪುಸ್ತಕದ ಒಂದು ಹೇಳಿಕೆ ಉಲ್ಲೇಖಿಸಿದ ನ್ಯಾಯಪೀಠ “ನ್ಯಾಯ ಇಲ್ಲದೇ ಸರ್ಕಾರ ಕಳ್ಳರ ಪಡೆ ಅಲ್ಲವೇ?” ಎಂದು ತಿಳಿಸಿದೆ. ಅಲ್ಲದೆ, “ಸರ್ಕಾರ ಭೂಗಳ್ಳರಂತೆ ವರ್ತಿಸಬಾರದು. ಸೂಕ್ತ ಪರಿಹಾರ ಕೊಡದೇ ಸಾರ್ವಜನಿಕ ಉದ್ದೇಶದಿಂದ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಲುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು” ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ