ಬೆಂಗಳೂರು: ರೈತ ನಾಯಕ, ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯಿತ್ ಮೇಲೆ ಮಸಿ ಬಳಿದ ಪ್ರಕರಣದ ತನಿಖೆ ಮುಕ್ತಾಯದ ಹಂತದಲ್ಲಿದ್ದು, ಮೂವರು ಆರೋಪಿಗಳ ವಿರುದ್ಧ ಹೈಗ್ರೌಂಡ್ಸ್ ಠಾಣೆ ಪೊಲೀಸರು 8ನೇ ಎಸಿಎಂಎಂ ನ್ಯಾಯಾಲಯಕ್ಕೆ 450 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ರಾಕೇಶ್ ಟಿಕಾಯಿತ್ ಮೇಲೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿಂದೂ ಪರ ಸಂಘಟನೆಯೊಂದರ ಕಾರ್ಯಕರ್ತ ಭರತ್ ಶೆಟ್ಟಿ ಹಾಗೂ ಆತನ ಸಹಚರ ರಾದ ಶಿವಕುಮಾರ್, ಪ್ರದೀಪ್ ಕುಮಾರ್, ಉಮಾ ದೇವಿ ಆರೋಪಿಗಳಾಗಿದ್ದಾರೆ.
ರಾಕೇಶ್ ಟಿಕಾಯಿತ್ ರಾಜ್ಯಕ್ಕೆ ಬರುವುದಕ್ಕೂ ಒಂದು ವಾರ ಮೊದಲೇ ದಾಳಿ ನಡೆಸುವ ಬಗ್ಗೆ ಯೋಜನೆಯನ್ನು ರೂಪಿಸಲಾಗಿದ್ದ ಆರೋಪಿಗಳು, ಮೊದಲು ಟೊಮೆಟೋ ಹಾಗೂ ಕೊಳೆತ ಮೊಟ್ಟೆಯನ್ನು ಟಿಕಾಯತ್ ಮೇಲೆ ಎಸೆಯಲು ನಿರ್ಧರಿಸಿದ್ದರು. ಅದು ಸಾಧ್ಯವಾಗದಿದ್ದರೆ ಮಸಿ ಬಳಿಯಲು ಸಂಚು ರೂಪಿಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಆಡಿಯೊ ಸಾಕ್ಷ್ಯ, 20 ಮಂದಿ ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ 89 ಜನರ ಹೇಳಿಕೆಗಳನ್ನು ಒಳಗೊಂಡಿರುವ 450 ಪುಟಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದಾರೆ. ಹೆಸರು ಮಾಡಬೇಕು, ಎಲ್ಲರೂ ಗುರುತಿಸುವಂತಾಗಬೇಕು ಎಂಬ ಉದ್ದೇಶದಿಂದ ರೈತ ನಾಯಕನಿಗೆ ಮಸಿ ಬಳಿದಿರುವುದಾಗಿ ಆರೋಪಿಗಳು ತಿಳಿಸಿದ್ದಾರೆಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಮೇ 30ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿದ್ದ ರಾಕೇಶ್ ಟಿಕಾಯತ್ ಮೇಲೆ ಮಸಿ ಬಳಿದ ಘಟನೆ ನಡೆದಿತ್ತು.