ಶುಲ್ಕ ಕಟ್ಟುವಂತೆ ಒತ್ತಡ, ಖಾಸಗಿ ಶಾಲೆಗಳ ವಿರುದ್ಧ ಪೋಷಕರ ಪ್ರತಿಭಟನೆ

ಬೆಂಗಳೂರು ಜ,10 : ಶುಲ್ಕ ಪಾವತಿಸುವಂತೆ ಒತ್ತಡ ಹೇರುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ನಗರದ ವಿವಿಧ ಶಾಲಾ ಪೋಷಕರ ಸಂಘಟನೆಗಳು ಇಂದು ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕೊರೋನಾ ಸಂಕಷ್ಟದ ಸಂದರ್ಭದಲ್ಲಿಯೂ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಈಗಾಗಲೇ ಎರಡು ಭಾರಿ ಪೋಷಕರು ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆದಿದ್ದರು. ಆಗ ಮಧ್ಯಪ್ರವೇಶಿಸಿದ್ದ ಸರ್ಕಾರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿತ್ತು. ಆದರೆ, ಈವರೆಗೆ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಾರಣದಿಂದಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಪುನಃ ಶುಲ್ಕ ಪಾವತಿಸುವಂತೆ ಪೋಷಕರ ಮೇಲೆ ಒತ್ತಡ ಹೇರುತ್ತಿದೆ. ಇಷ್ಟಾದರೂ ಸರ್ಕಾರ ಮೌನ ಮುರಿದಿಲ್ಲ. ಸರ್ಕಾರದ ಈ ನಡೆ ವಿರುದ್ಧ ಖಾಸಗಿ ಶಾಲಾ ಪೋಷಕರು ಮತ್ತು ಸಂಘಟನೆಗಳು ಆಕ್ರೋಶವನ್ನು ವ್ಯಕ್ತಪಡಿಸಿದವು.

ಶುಲ್ಕ ಕಟ್ಟದೆ ಹೋದಲ್ಲಿ ಆನ್ಲೈನ್ ತರಗತಿ ರದ್ದು ಮಾಡುತ್ತೇವೆ. ನಿಮಗೆ ಆನ್ಲೈನ್ ಲಿಂಕ್ ಕಟ್ ಮಾಡುತ್ತೇವೆ ಎಂದು ಹೆದರಿಸುತ್ತಿವೆ, ನಮ್ಮ ಅಸಹಾಯಕತೆಯನ್ನು ದುರುಪಯೋಗ ಪಡಸಿಕೊಂಡು ನಮಗೆ ಒತ್ತಡ ಹೇರುತ್ತಿವೆ ಎಂದು ಪೋಷಕ ರವಿಕುಮಾರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವವನ್ನು ಕರ್ನಾಟಕ ಖಾಸಗಿ ಶಾಲಾ ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ವಹಿಸಿತ್ತು, ಪ್ರತಿಭಟನೆಯಲ್ಲಿ ಆರ್’ಟಿಇ ಸ್ಟೂಡೆಂಟ್ಸ್ ಆ್ಯಂಡ್ ಪೇರೆಂಟ್ಸ್ ಅಸೋಸಿಯೇಷನ್, ಕರ್ನಾಟಕ ಪೋಷಕರು ವೇದಿಕೆ, ವಾಯ್ಸ್ ಆಫ್ ಪೇರೆಂಟ್ಸ್, ಪೋಷಕರ ವೇದಿಕೆ ಸೇರಿದಂತೆ ವಿವಿಧ ಒಂಬತ್ತು ಸಂಘಟನೆಗಳ ಸದಸ್ಯರು, ಖಾಸಗಿ ಶಾಲೆಗಳ ನೂರಾರು ಪೋಷಕರು ಪಾಲ್ಗೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *