ಗಂಗಾವತಿ: ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಪಾಲಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿವೆ. ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಸಂಘಟನೆಯಿಂದ ಪ್ರತಿಭಟನೆ ನಡೆಸಿದರು.
ಇದನ್ನು ಓದಿ: ಜುಲೈ 19 ಹಾಗೂ 22ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಸಚಿವ ಎಸ್ ಸುರೇಶ್ ಕುಮಾರ್
ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಗ್ಯಾನೇಶ್ ಕಡಗದ್ ಮಾತನಾಡಿ ʻಕಾರಟಗಿ ಹಾಗೂ ಕನಕಗಿರಿಯಲ್ಲೂ ಖಾಸಗಿ ಶಾಲೆಗಳು ಅಧಿಕ ಶುಲ್ಕ ವಸೂಲಿ ಮಾಡುತ್ತಿವೆ. ಕೋವಿಡ್ ಕಾರಣ ಸರ್ಕಾರ 2019-20 ನೇ ಸಾಲಿನ ಶೇ 70 ರಷ್ಟು ಶುಲ್ಕ ತೆಗೆದುಕೊಳ್ಳಲು ಆದೇಶ ಹೊರಡಿಸಿದೆ. ಆದರೆ, ಗಂಗಾವತಿಯಲ್ಲಿ ಅನೇಕ ಅನುದಾನ ರಹಿತ ಶಾಲೆಗಳು ತಮಗೆ ಮನ ಬಂದಂತೆ, ಇತಿ-ಮಿತಿಯಿಲ್ಲದೇ ಪೂರ್ಣ ಶುಲ್ಕ ಕಟ್ಟಿ, ಇಲ್ಲ. ನಿಮ್ಮ ಮಕ್ಕಳ ಟಿ.ಸಿ ತೆಗೆದುಕೊಂಡು ಹೋಗಿ ಎಂದು ಪಾಲಕರಿಗೆ ಬೆದರಿಕೆ ಒಡ್ಡುತ್ತಿವೆ’ ಎಂದು ಹೇಳಿದರು.
ಪ್ರಾಥಮಿಕ ಶಾಲೆಗಳಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ವರ್ಷದ ಆನ್‌ಲೈನ್ ತರಗತಿಗಳನ್ನು ನಡೆಸುತ್ತೇವೆ. ನೀವೂ ಅರ್ಧ ಶುಲ್ಕ ಕಟ್ಟಬೇಕು ಎಂದು ಪಾಲಕರಿಗೆ ಈಗಾಗಲೇ ಮೊಬೈಲ್ ಮೂಲಕ ಸಂದೇಶ ಕಳುಹಿಸಿದ್ದಾರೆ ಎಂದರು.
ಒಂದು ವೇಳೆ ಶುಲ್ಕ ಕಟ್ಟಲಿಲ್ಲ ಎಂದರೇ ನಿಮ್ಮ ಮಗುವಿಗೆ ಆನ್‌ಲೈನ್ ತರಗತಿ ಲಿಂಕ್ ಲಭ್ಯವಾಗುವುದಿಲ್ಲ ಎಂದು ಹೆದರಿಸುತ್ತಿದ್ದಾರೆ. ಇಂಥ ಶಾಲೆಗಳ ಮಾನ್ಯತೆ ರದ್ದುಗೊಳಿಸಬೇಕು ಎಂದು ಎಸ್‌ಎಫ್‌ಐ ಸಂಘಟನೆಯು ಆಗ್ರಹಿಸಿದೆ.
ಪ್ರತಿಭಟನೆಯ ನಂತರ ಈ ಬಗ್ಗೆ ಸೂಕ್ತವಾದ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಎಸ್‌ಎಫ್‌ಐ ಸಂಘಟನೆಯ ಪ್ರಮುಖರಾದ ಹನುಮಂತ ಮುಕ್ಕುಂಪಿ, ಶಿವುಕುಮಾರ, ಸೋಮನಾಥ, ಪಾಲಕರಾದ ದಾವಲಸಾಬ, ವಲಿಸಾಬ, ಬಾಷಾ ಹಾಗೂ ದುರುಗಮ್ಮ ಸೇರಿದಂತೆ ಹಲವರು ಇದ್ದರು.