ಆನೇಕಲ್: ಈಗಾಗಲೇ ದೇಶಾದ್ಯಂತ ಕೊರೊನಾ ತುರ್ತು ಪರಿಸ್ಥಿತಿಯಿಂದ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಪಾಸಿಟಿವ್ ಬಂದಿರುವಂತಹ ಸೋಂಕಿತರ ವಿಚಾರದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರ ಬಳಿ ಹಣವನ್ನು ಕಿತ್ತುಕೊಳ್ಳುತ್ತಿದ್ದಾರೆ. ಅದೇ ರೀತಿ ನಿನ್ನೆ (ಜೂನ್ 2) ಕೂಡಾ ಸೋಂಕಿತರೊಬ್ಬರ ಮೃತದೇಹ ನೀಡಲು ಬೆಂಗಳೂರು ಹೊರವಲಯದ ಅತ್ತಿಬೆಲೆ ಸಮೀಪದ ಶ್ರೀ ಸಾಯಿ ಆಸ್ಪತ್ರೆ ಸುಮಾರು 15 ಲಕ್ಷ ಬಿಲ್ ಮಾಡಿದೆ.
ಕಳೆದ 16 ದಿನಗಳ ಹಿಂದೆ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಶ್ರೀ ಸಾಯಿ ಆಸ್ಪತ್ರೆಗೆ ಹಾರೊಹಳ್ಳಿ ಗ್ರಾಮದ ಗಣೇಶ್ ಎಂಬ ಸೋಂಕಿತ ದಾಖಲಾಗಿದ್ದರು. ಮೂರು ದಿನದ ಹಿಂದೆ ಎಂದಿನಂತೆ ಸಂಬಂಧಿಕರ ಜೊತೆ ಮಾತನಾಡಿದ್ದ ಗಣೇಶ್ ಅದಾದ ನಂತರ ಆತ ಮನೆಯವರ ಜೊತೆ ಮಾತನಾಡಲು ಆಸ್ಪತ್ರೆ ಸಿಬ್ಬಂದಿ ಬಿಟ್ಟಿರಲಿಲ್ಲ.
ಅಷ್ಟರಲ್ಲಾಗಲೇ 6 ಲಕ್ಷ ಹಣ ಕಟ್ಟಿಸಿ ಕೊಂಡಿದ್ದ ಆಸ್ಪತ್ರೆ ಆಡಳಿತ ನಿನ್ನೆ ಬೆಳಗ್ಗೆ ಸಂಬಂಧಿಕರಿಗೆ ಕರೆ ಮಾಡಿ ಗಣೇಶ್ ತೀರಿಕೊಂಡಿದ್ದಾರೆ. 15 ಲಕ್ಷ ಬಿಲ್ ಆಗಿದೆ. ಉಳಿದ 9 ಲಕ್ಷ ಹಣ ನೀಡಿ ಮೃತದೇಹ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಕೂಡಲೆ ಸ್ಥಳಕ್ಕೆ ಬಂದ ಸಂಬಂಧಿಕರು ಆಸ್ಪತ್ರೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸರಕಾರದ ಆದೇಶವನ್ನು ಸಹ ಲೆಕ್ಕಿಸದ ಆಡಳಿತ ಮಂಡಳಿ 15 ಲಕ್ಷ ಹಣ ಪೀಕಲು ಮುಂದಾಗಿದ್ದು, ಬಡ ಜನತೆಗೆ ಇದರಿಂದಾಗಿ ಸಾಕಷ್ಟು ತೊಂದರೆಯಾಗುತ್ತಿದೆ. ಸರಕಾರ ಈ ಕೂಡಲೆ ಆ ಆಸ್ಪತ್ರೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಎಂದು ಸಂಬಂಧಿಕರು ಒತ್ತಾಯಿಸಿದ್ದಾರೆ.
ಸರಕಾರದ ಆದೇಶದಂತೆ ಓರ್ವ ಸೋಂಕಿತನಿಗೆ ಒಂದು ದಿನಕ್ಕೆ ಹದಿನೈದು ಸಾವಿರಕ್ಕೂ ಮೀರದಂತೆ ಖಾಸಗಿ ಆಸ್ಪತ್ರೆಗಳು ಬಿಲ್ ಮಾಡಬೇಕು. ಆದರೆ ಈ ಆಸ್ಪತ್ರೆಯಲ್ಲಿ ಮಾತ್ರ ಕೇವಲ 16 ದಿನಗಳಲ್ಲಿ ಸುಮಾರು 15 ಲಕ್ಷ ಬಿಲ್ ಮಾಡಿದೆ. ಸರಕಾರ ಹಾಗೂ ಜನಪ್ರತಿನಿಧಿಗಳು ಇದುವರೆಗೂ ಇಂತಹ ವಿಷಯದಲ್ಲಿ ಚಕಾರ ತೆಗೆದಿಲ್ಲ. ಹೀಗಾದರೆ ಜನಸಾಮಾನ್ಯರ ಪಾಡು ಏನು ಎಂಬುದು ಮೃತರ ಸಂಬಂಧಿಕರು ಪ್ರಶ್ನಿಸಿದ್ದಾರೆ.