ಹಿಮಾಚಲ ಪ್ರದೇಶ ವಿಧಾನಸಭೆ ಮುಖ್ಯ ದ್ವಾರದಲ್ಲಿ ಖಾಲಿಸ್ತಾನ ಧ್ವಜ: ತನಿಖೆಗೆ ಆದೇಶಿದ ಮುಖ್ಯಮಂತ್ರಿ

ಚಂಡೀಗಢ: ಹಿಮಾಚಲ ಪ್ರದೇಶದ ವಿಧಾನಸಭೆಯ ಮುಖ್ಯ ದ್ವಾರದಲ್ಲಿ ಇಂದು(ಮೇ 08) ಬೆಳಗ್ಗೆ ಖಲಿಸ್ತಾನದ ಧ್ವಜ ಹಾರಿಸಲಾಗಿದೆ. ಅಪರಿಚಿತ ವ್ಯಕ್ತಿಗಳು ವಿಧಾನಸಭೆಯ ಮುಖ್ಯ ದ್ವಾರದ ಮೇಲೆ ಮಾತ್ರವಲ್ಲದೆ ಗೋಡೆಯ ಮೇಲೂ ಖಲಿಸ್ತಾನ್ ಧ್ವಜವನ್ನು ಅಂಟಿಸಿದ್ದಾರೆ. ಆದರೆ ಯಾರು ಈ ಕೃತ್ಯ ಎಸಗಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ತಡರಾತ್ರಿ ಅಥವಾ ಮುಂಜಾನೆ ಈ ಕೃತ್ಯ ನಡೆದಿರುವ ಸಾಧ್ಯತೆಗಳಿವೆ. ಖಾಲಿಸ್ತಾನ ಧ್ವಜಗಳನ್ನು ತೆಗೆದಿದ್ದೇವೆ. ಪಂಜಾಬ್‌ನಿಂದ ಬಂದಿರಬಹುದಾದ ಪ್ರವಾಸಿಗರು ಈ ಕೆಲಸ ಮಾಡಿರಬಹುದು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಖುಶಾಲ್ ಶರ್ಮಾ ಹೇಳಿದ್ದಾರೆ.

ವಿಧಾನಸಭೆಯ ಮುಖ್ಯ ದ್ವಾರದಲ್ಲಿ ಖಲಿಸ್ತಾನ್ ಧ್ವಜ ಅಳವಡಿಸಿರುವ ಬಗ್ಗೆ ಮಾಹಿತಿ ಪಡೆದ ಕಂಗ್ರಾ ಪೊಲೀಸರು ಅದನ್ನು ತೆಗೆದಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ಡಾ.ನಿಪುನ್ ಜಿಂದಾಲ್ ಹೇಳಿದ್ದಾರೆ. ಸುತ್ತಮುತ್ತ ಅಳವಡಿಸಿರುವ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದ್ದು, ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ವಿಧಾನಸಭೆಯ ಗೇಟ್‌ನಲ್ಲಿ 5-6 ಖಲಿಸ್ತಾನಿ ಧ್ವಜಗಳನ್ನು ಹಾರಿಸಿದ್ದಾರೆ ಮತ್ತು ಗೋಡೆಯ ಮೇಲೆ ‘ಖಾಲಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಬರೆದಿದ್ದಾರೆ. ಧ್ವಜಗಳನ್ನು ತೆಗೆದು ಗೋಡೆಯ ಮೇಲೆ ಬರೆದಿದ್ದ ಘೋಷಣೆಗಳನ್ನು ಸ್ವಚ್ಛಗೊಳಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಳೆದ ತಿಂಗಳು ಏಪ್ರಿಲ್ 26 ರಂದು ಇಂತಹ ಘಟನೆಗಳು ಸಂಭವಿಸಬಹುದು ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು.

ಘಟನೆಯನ್ನು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಖಂಡಿಸಿ ಟ್ವಿಟ್‌ ಮಾಡಿದ್ದು, ‘ಧರ್ಮಶಾಲಾ ವಿಧಾನಸಭಾ ಕಟ್ಟದ ದ್ವಾರದಲ್ಲಿ ರಾತ್ರಿಯ ಕತ್ತಲೆಯಲ್ಲಿ ಖಾಲಿಸ್ತಾನ ಧ್ವಜವನ್ನು ಹಾರಿಸಿದ ಹೇಡಿತನದ ಘಟನೆಯನ್ನು ನಾನು ಖಂಡಿಸುತ್ತೇನೆ. ಈ ವಿಧಾನಸಭೆಯಲ್ಲಿ ಚಳಿಗಾಲದ ಅಧಿವೇಶನವಷ್ಟೇ ಇರುವುದರಿಂದ ಆ ಸಮಯದಲ್ಲಿ ಇಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳ ಅಗತ್ಯವಿದೆ. ಇದರ ಲಾಭ ಪಡೆದ ಕಿಡಿಗೇಡಿಗಳ ಹೇಡಿತನದ ಘಟನೆಯಾಗಿದೆ.  ಘಟನೆ ಕುರಿತು ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ನಿಮಗೆ ಧೈರ್ಯವಿದ್ದರೆ ರಾತ್ರಿಯ ಕತ್ತಲಲ್ಲಿ ಅಲ್ಲ, ಹಗಲಿನ ಬೆಳಕಿನಲ್ಲಿ ಹೊರಗೆ ಬನ್ನಿ ಎಂದು ನಾನು ಆ ಜನರಿಗೆ ಹೇಳಲು ಬಯಸುತ್ತೇನೆ’ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *