ಖಾಲಿ ಹುದ್ದೆಗಳ ನೇಮಕಾತಿ ನಿರ್ಲಕ್ಷ್ಯ ಕಮರುತ್ತಿರುವ ಯುವಜನರ ಭವಿಷ್ಯ

ಕರ್ನಾಟಕ ಚುನಾವಣೆಯ ಸಿದ್ಧತೆಯಲ್ಲಿರುವಾಗ ಇಲ್ಲಿಯ ಲಕ್ಷಾಂತರ ಯುವಜನತೆ ತಮ್ಮ ಭವಿಷ್ಯ ಕಮರಿ ಹೋಗುವ ಆತಂಕದಲ್ಲಿದ್ದಾರೆ. ಸರಕಾರದ ಸುಮಾರು 43 ಇಲಾಖೆಗಳಲ್ಲಿ ಖಾಲಿ ಇರುವ 2,58,709 ಹುದ್ದೆಗಳಿಗೆ ನೇಮಕಾತಿಯ ಪ್ರಕ್ರಿಯೆಯೇ ಆರಂಭ ಆಗದಿರುವುದರಿಂದ ಚುನಾವಣೆಗಳು ಘೋಷಣೆಯಾದರೆ ಅದು ಮತ್ತಷ್ಟೂ ಮುಂದೆ ಹೋಗಬಹುದಾಗಿದೆ. ಮುಂದೊಮ್ಮೆ ಕರೆದರೂ ನೇಮಕಾತಿಯ ವಯೋಮಿತಿಯು ಮೀರಿ ಹೋಗುವ ತೀವ್ರ ಆತಂಕ ಅವರನ್ನು ಕಾಡುತ್ತಿದೆ.

ಕೇಂದ್ರ ಸರಕಾರ ಬಜೆಟ್ ಮಂಡಿಸುವಾಗ ಅಭಿವೃದ್ದಿ, ಅಮೃತ ಬಜೆಟ್, ಉದ್ಯೋಗಗಳ ಅಪಾರ ಅವಕಾಶಗಳ ಬಗೆಗೆ ಅಲಂಕಾರಿಕ ಮಾತನಾಡಿದರೂ ನೆನೆಗುದಿಗೆ ಬೀಳಿಸಿರುವ ಉದ್ಯೋಗ ನೇಮಕಾತಿಗಳ ಬಗೆಗಾಗಲೀ, ಹೊಸ ಉದ್ಯೋಗ ಸೃಷ್ಟಿಯ ಖಾತ್ರಿಯಾಗಲೀ ನೀಡಿಲ್ಲ. ಬದಲಾಗಿ, ವಾಸ್ತವದಲ್ಲಿ ದೇಶ ಎದುರಿಸುತ್ತಿರುವ ತೀವ್ರತರ ಆರ್ಥಿಕ ಬಿಕ್ಕಟ್ಟಿನ ಸುಳಿಯ ಸೆಳೆತದ ಛಾಯೆಯೇ ಕಂಡು ಬರುತ್ತಿದೆ. ಹಾಗಾಗಿ ಎಂದಿನಂತೆ ಜನಮರುಳು ಯೋಜನೆಗಳ ಬದಲು ಸೀಮಿತ ರಾಜಕೀಯ ದೃಷ್ಟಿ ಇರಿಸಿ ಮತ ಸೆಳೆಯಲು ಬೇರೊಂದು ಮಾರ್ಗಗಳನ್ನು ಕಂಡುಕೊಂಡಂತಿದೆ. ಅಥವಾ ರಾಜ್ಯಕ್ಕೆ ಅದರ ಭಾರ ಹೊರಿಸಲಾಗಿದೆ.

ಇದನ್ನು ಓದಿ: ಭಾರತದಲ್ಲಿ ನಿರುದ್ಯೋಗ: ಸಂಖ್ಯೆ 5.1 ಕೋಟಿ, ದರ 8.9%

ಕರ್ನಾಟಕ ಸರಕಾರ ಸಂರಚನಾ ಹೊಂದಾಣಿಕೆ, ಆರ್ಥಿಕ ನಿರ್ಭಂದದ ಕಾಯ್ದೆಯನ್ನು ಅಂಗೀಕರಿಸಿ ಜಾರಿಗೊಳಿಸುತ್ತಿದೆ. ಇದು ಸಾಲ ನೀಡುವ ಮೊದಲು ಐ.ಎಂ.ಎಫ್. ಮತ್ತು ವಿಶ್ವ ಬ್ಯಾಂಕ್ ಮುಂತಾದ ಜಾಗತಿಕ ಹಣಕಾಸು ಸಂಸ್ಥೆಗಳು ವಿಧಿಸಿದ ಶರತ್ತಿನ ಜಾರಿಯ ಫಲ. ಇದರಂತೆ ಸರಕಾರದ ಆಡಳಿತ ವೆಚ್ಚದ ಕಡಿತ, ಪರಿಣಾಮ ನೇಮಕಾತಿಗಳಿಗೆ ನಿರ್ಭಂದ, ಹುದ್ದೆಗಳ ರದ್ಧತಿ ಮುಂದುವರಿದು ಇಲಾಖೆಗಳ ರದ್ಧತಿ ಯಂತಹ ಉದ್ಯೋಗ ನಾಶದ ಕ್ರಮಗಳನ್ನು ಸರಕಾರ ಆರ್ಥಿಕ ಶಿಸ್ತು ಮತ್ತು ನಿರ್ವಹಣೆಯ ಹೆಸರಿನಲ್ಲಿ ಕೈಗೊಳ್ಳುತ್ತಿದೆ. ತೀರಾ ‘ದುರ್ಬಲ ಪ್ರತಿರೋಧ’ದ ಕ್ಷೇತ್ರಗಳೆಂದು ಗುರುತಿಸಿದ ಶಿಕ್ಷಣ, ಸಮಾಜ ಕಲ್ಯಾಣ, ಮಹಿಳಾ ಮಕ್ಕಳ ಅಭಿವೃದ್ದಿ ಯಂತಹ ಇಲಾಖೆಗಳನ್ನು ಗುರಿಯಾಗಿಸಿದೆ. ಪ್ರಸಕ್ತ ಜಾಗತಿಕ ಬಿಕ್ಕಟ್ಟು ಸೃಷ್ಟಿಸಿರುವ ಲಕ್ಷಾಂತರ ಉದ್ಯೋಗ ನಷ್ಟದ ಪರಿಸ್ಥಿತಿ ಯುವಜನರನ್ನು ಮತ್ತಷ್ಟೂ ಭೀತರನ್ನಾಗಿಸಿದೆ.

ಸರಕಾರವೇ ಈಗಾಗಲೇ ಅನುಮೋದಿಸಿದಂತೆ ನೇಮಕಾತಿ ಮಾಡಲು 2.6 ಲಕ್ಷ ಹುದ್ದೆಗಳನ್ನು ವಿವಿಧ ಇಲಾಖೆಗಳಲ್ಲಿ ಗುರುತಿಸಿದೆ. ಇದರಲ್ಲಿ ಅತೀ ಹೆಚ್ಚು ಹುದ್ದೆಗಳು ಮಾಧ್ಯಮಿಕ ಶಿಕ್ಷಣ ಇಲಾಖೆ (66,059), ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ (34,644) ಒಳಾಡಳಿತ (23,577), ಉನ್ನತ ಶಿಕ್ಷಣ (12,674), ಕಂದಾಯ (10,621), ಗ್ರಾಮೀಣ ಅಭಿವೃದ್ದಿ (9972), ಪ.ಜಾತಿ ಕಲ್ಯಾಣ (9592), ಆರ್ಥಿಕ ಇಲಾಖೆ (8779). ಈ ಹಿಂದೆ ಕಲ್ಯಾಣ ಕರ್ನಾಟಕ ವೃಂದ ಭೋದಕೇತರ ಹುದ್ದೆಗಳ ನೇಮಕಾತಿಗೆ 2022 ರ ನವೆಂಬರ್ ನಲ್ಲಿ ತಡೆಯ ಆದೇಶ ಹೊರಡಿಸಿ ನಿರೀಕ್ಷೆಗಳಿಗೆ ಕುದಿ ನೀರು ಎರಚಿದೆ. ಅದನ್ನಿನ್ನೂ ತೆರವು ಮಾಡಿಲ್ಲ ಆದರೆ ಕಲ್ಯಾಣ ಕರ್ನಾಟಕದ ಅಭಿವೃದ್ದಿ ಮಾತುಗಳಿಗೆ ಬರವಿಲ್ಲ. ನಿವೃತ್ತರಾದ ಬಳಿಕ ಖಾಲಿಯಾದ ಜಾಗಗಳಿಗೆ ತುಂಬಿಸುವುದೂ ಇಲ್ಲ. ಭಾರತ ಸರಕಾರದ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿಯ ಸುಳಿವೇ ಇಲ್ಲ. ಕರ್ನಾಟಕದಲ್ಲಿ ಎಸ್.ಸಿ. ಮತ್ತು ಎಸ್.ಟಿ. ಒಳಗೊಂಡ ಬ್ಯಾಕ್ ಲಾಗ್ ಹುದ್ದೆಗಳು ಹಾಗೇ ಖಾಲಿ ಬಿದ್ದಿವೆ. ಹೀಗಿರುವಾಗ ಮೀಸಲಾತಿಯ ಬೇಡಿಕೆ, ಆಸೆ ಅತಿರೇಕದ ಆಸೆಯನ್ನಾಗಿಸಿ, ಇಲ್ಲದ ಹುದ್ದೆಗಳಿಗೆ ಸಲ್ಲದ ಸ್ಪರ್ದೆ ಏರ್ಪಡಿಸಲಾಗಿದೆ. ಕೇಂದ್ರ ಸರಕಾರದ 78 ಇಲಾಖೆಗಳಲ್ಲಿ 9.79 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ.

ಇದನ್ನು ಓದಿ: 2021ರಲ್ಲಿ ಆತ್ಮಹತ್ಯೆಗೀಡಾದವರ ಒಟ್ಟು ಸಂಖ್ಯೆ 164033-ಕಾರ್ಮಿಕರು, ನಿರುದ್ಯೋಗಿಗಳು, ರೈತರೇ ಹೆಚ್ಚು

2022 ಅಕ್ಟೋಬರ್ ನಲ್ಲಿಯ ಸಮೀಕ್ಷೆಯ (ಸಿ.ಎಂ.ಐ.ಇ) ವರದಿಯಂತೆ ಗ್ರಾಮೀಣ ನಿರುದ್ಯೋಗ ಶೇ.8.01, ನಗರ ನಿರುದ್ಯೋಗ ಶೇ. 7.53 ಇದೆ. ಈಗಿರುವ ಕೃಷಿ ಹಾಗೂ ಗ್ರಾಮೀಣ ಬಿಕ್ಕಟ್ಟು ಅಪಾರ ಪ್ರಮಾಣದ ನಿರುದ್ಯೋಗ ಹೆಚ್ಚಿಸಿ ವಲಸೆಯನ್ನು ಸೃಷ್ಟಿಸಿದೆ. ಗ್ರಾಮೀಣ ಉದ್ಯೋಗ ಸೃಷ್ಟಿಯನ್ನು ಸರಕಾರ ಕಡೆಗಣಿಸಿರುವುದರಿಂದಲೇ ಈ ಸಾಲಿನ ಆಯ ವ್ಯಯದಲ್ಲಿ ಕಳೆದ ವರ್ಷಕ್ಕಿಂತಲೂ ಶೇ.33 ರಷ್ಟು ಹಣ ಕಡಿತ ಮಾಡಿ ಅನ್ಯಾಯ ಎಸಗಿದೆ. ಜಾಗತಿಕ ಆರ್ಥಿಕ ಹಿಂಜರಿತ, ರಶಿಯಾ ಉಕ್ರೇನ್ ಯುದ್ಧ ಇತ್ಯಾದಿಗಳ ಪರಿಣಾಮಗಳನ್ನೂ ಸರಿಯಾಗಿ ಅಂದಾಜಿಸಿಲ್ಲ. ದಿವಾಳಿಖೋರ, ಕಾರ್ಪೋರೇಟ್ ಲೂಟಿ ಪರ ಆರ್ಥಿಕ ನೀತಿಗಳಿಂದಾಗಿ ಆಂತರಿಕ ಉತ್ಪಾದನೆ ಹೆಚ್ಚಿಸಿ ಮಾರುಕಟ್ಟೆ ವಿಸ್ತರಿಸುವ ಯೋಜನೆಗಳೇ ಇಲ್ಲ.

ಇದನ್ನು ಓದಿ: ನವ ಉದಾರೀಕರಣದಿಂದ ನಿರುದ್ಯೋಗ – ಖಾಲಿ ಹುದ್ದೆ – ಆಡಳಿತ ಯಂತ್ರದ ಕುಸಿತ

ಒಟ್ಟಾರೆ ರಾಜ್ಯದಲ್ಲಿನ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿದೆ. ಹೊರ ಸಾಲಗಳ ಭಾರದಿಂದ ತತ್ತರಿಸುತ್ತಿದೆ. ಜಾತಿಗಳ ಓಲೈಕೆಗೆ ನಿಗಮಗಳು, ವಿಗ್ರಹಗಳು, ಧ್ವಜ ಸ್ಥಂಬ ನಿರ್ಮಾಣದಂತಹ ಕೆಲಸಕ್ಕೆ, ರಾಜಕೀಯ ಸಮಾವೇಶ, ಉತ್ಸವಗಳಿಗೆ ನೂರಾರು ಕೋಟಿಗಳನ್ನು ಸುರಿಯುವ ಸರಕಾರ ಯುವಜನರ ಆ ಮೂಲಕ ಸಮಾಜಕ್ಕೆ, ಆರ್ಥಿಕ ಪ್ರಗತಿಗೆ ಕಾರಣವಾಗುವ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.

ಸರಕಾರ ಯುವಜನರನ್ನು, ಸಾಮಾನ್ಯ ಜನತೆಯನ್ನು ವಂಚಿಸುವುದನ್ನು ನಿಲ್ಲಿಸಲಿ. ಕೂಡಲೆ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಮುಂದಾಗಿ ಯುವಜನರ ಭವಿಷ್ಯ ಉಳಿಸಲಿ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

One thought on “ಖಾಲಿ ಹುದ್ದೆಗಳ ನೇಮಕಾತಿ ನಿರ್ಲಕ್ಷ್ಯ ಕಮರುತ್ತಿರುವ ಯುವಜನರ ಭವಿಷ್ಯ

Leave a Reply

Your email address will not be published. Required fields are marked *