ಬಜೆಟಿನ `ಅಮೃತ’ ಪಾತ್ರೆ ಮತ್ತು ಸಂಪತ್ತಿನ `ಸೃಷ್ಟಿ’ಯ ಬಲೂನ್…..

ವೇದರಾಜ ಎನ್ ಕೆ

ಬಿಬಿಸಿ ಸಾಕ್ಷ್ಯಚಿತ್ರ ಮತ್ತು ಹಿಂಡೆನ್‍ಬರ್ಗ್ ವರದಿಯ ಹಿನ್ನೆಲೆಯಲ್ಲಿ 74ನೇ ಗಣತಂತ್ರ ದಿನಾಚರಣೆ ಮುಗಿಯುತ್ತಿದ್ದಂತೆ ಸಂಸತ್ತಿನ ಬಜೆಟ್‍ ಅಧಿವೇಶನ ಆರಂಭವಾಗಿದೆ; ಪ್ರಸಕ್ತ ಕೇಂದ್ರ ಸರಕಾರದ ಕೊನೆಯ ಪೂರ್ಣ ಬಜೆಟ್‍ ಕೂಡ ಮಂಡನೆಯಾಗಿದೆ. ಅದು ಮಂಡನೆಯಾಗುತ್ತಿದ್ದಂತೆ  ದೇಶದ ಶೇರುಮಾರುಕಟ್ಟೆಗಳನ್ನು ನಡುಗಿಸಿದ ಬೆಳವಣಿಗೆಯೂ ಸಂಭವಿಸಿದೆ. ಈ ಎರಡು ವಾರಗಳಲ್ಲಿ ಅನಾವರಣಗೊಂಡಿರುವ ದೇಶದ ರಾಜಕೀಯದ ಮತ್ತು ಅರ್ಥವ್ಯವಸ್ಥೆಯ ಸ್ವರೂಪಗಳ ಬಗ್ಗೆ ವ್ಯಂಗ್ಯಚಿತ್ರಕಾರರ ಸ್ಪಂದನೆಯ ಒಂದು ನೋಟ:

ಜನವರಿ 17 ಮತ್ತು 25ರಂದು ಬ್ರಿಟನ್ನಿನ ಬಿಬಿಸಿ ಎರಡು ಭಾಗಗಳಲ್ಲಿ ಬಿತ್ತರಿಸಿದ “ಇಂಡಿಯ: ದಿ ಮೋದಿ ಕ್ವೆಶ್ಚನ್” ಸಾಕ್ಷ್ಯಚಿತ್ರ ಭಾರತ ಸರಕಾರಕ್ಕೆ ಇರುಸುಮುರುಸು ಉಂಟು ಮಾಡಿದರೆ, ಜನವರಿ 25ರಂದು ಅಮೆರಿಕಾದ ‘ಹಿಂಡನ್‍ ಬರ್ಗ್ ರಿಸರ್ಚ್’ ಎಂಬ ಸಂಸ್ಥೆ ಪ್ರಕಟಿಸಿದ ವರದಿ ಭಾರತದ ಅಗ್ರ ಶ್ರೀಮಂತ ಮತ್ತು ಉದ್ಯಮಿ ಅದಾಣಿಯವರ ಬೃಹತ್‍ ಉದ್ಯಮ ಸಮೂಹಕ್ಕೆ ಮುಜುಗರ ಉಂಟುಮಾಡಿರುವಂತೆ ಕಾಣುತ್ತದೆ.  ಭಾರತ ಸರಕಾರ “ವಸಾಹತುಶಾಹಿ ಮನೋಭಾವದ ಪ್ರಚಾರ ಚಿತ್ರ”  ದೇಶದ ಬಗ್ಗೆ ತಪ್ಪು ಚಿತ್ರ ನೀಡುತ್ತದೆ ಎಂದು ದೇಶದಲ್ಲಿ ಅದರ ಪ್ರಸಾರಕ್ಕೆ ತಡೆ ಹಾಕಿದರೆ, ಅದಾಣಿ ಸಮೂಹದ ಮುಖ್ಯ ಹಣಕಾಸು ಅಧಿಕಾರಿ ರಾಷ್ಟ್ರಧ್ವಜವನ್ನು ಪಕ್ಕದಲ್ಲಿಟ್ಟುಕೊಂಡು ಹಿಂಡನ್‍ಬರ್ಗ್ ವರದಿಯಲ್ಲಿ ಪ್ರಕಟಿಸಿರುವ ವಿಷಯಗಳನ್ನು ನಿರಾಕರಿಸಿದರು.

(ಪಂಜು ಗಂಗೊಳ್ಳಿ, ಕನ್ನಡ ಒನ್‍ ನ್ಯೂಸ್)

ಹೌದು, ಇವು ಇಬ್ಬರು ವ್ಯಕ್ತಿಗಳ ಮೇಲಿನ ಟಿಪ್ಪಣಿಗಳ ಬದಲು ಇಡಿ ದೇಶದ ಮೇಲಿನ ದಾಳಿ ಎಂಬಂತೆ ಬಿಂಬಿಸುವ ಪ್ರಯತ್ನ ನಡೆದಿದೆ. ಆದರೆ ನಂತರದ ಬಳವಣಿಗೆಗಳು ಈ ಎರಡು ವರದಿಗಳನ್ನು ಜನಗಳು ಬೇರೆಯೇ ಕೋನದಲ್ಲಿ ನೋಡುವಂತೆ ಮಾಡಿವೆ.

***

ಸಂಸತ್ತಿನ ಬಜೆಟ್‍ ಅಧಿವೇಶನದ ಆರಂಭದ ತಮ್ಮ ಭಾಷಣದಲ್ಲಿ ರಾಷ್ಟ್ರಾಧ್ಯಕ್ಷರು ಸಂವಿಧಾನವು ಐಕ್ಯತೆಯ ಮೂಲ, ಅದು ಸಮಯದ ಪರೀಕ್ಷೆಯನ್ನು ಎದುರಿಸಿ ನಿಂತಿದೆ ಎಂದರಂತೆ. ಖಂಡಿತಾ ನಿಜ. ಆದರೆ ಕಳೆದ ಕೆಲವು ವಾರಗಳಿಂದ ನ್ಯಾಯಾಧೀಶರ ನೇಮಕದ ಮೇಲೆ  ಕಾನೂನು ಮಂತ್ರಿಗಳು ಮತ್ತು ದೇಶದ ಸರ್ವೋಚ್ಚ ನ್ಯಾಯಾಲಯದ ನಡುವಿನ ವಾಗ್ವಾದಗಳು, ಅದರಲ್ಲಿ  ಹೊಸದಾಗಿ ಚುನಾಯಿತರಾದ ಉಪರಾಷ್ಟ್ರಪತಿಗಳು/ರಾಜ್ಯಸಭಾಧ್ಯಕ್ಷರು ಮಧ್ಯಪ್ರವೇಶಿಸಿ ಅದನ್ನು ಸಂವಿಧಾನದ ಮೂಲರಚನೆಯನ್ನು ಪ್ರಶ್ನಿಸುವ ಮಟ್ಟಕ್ಕೆ ‘ಇಳಿಸಿದ್ದರ’ ಹಿನ್ನೆಲೆಯಲ್ಲಿ ಸಹಜವಾಗಿ ಎದ್ದಿರುವ ಪ್ರಶ್ನೆ ಈ ಕರ್ತವ್ಯ ಯಾರದ್ದು ಮತ್ತು ಅದನ್ನು ನಿಭಾಯಿಸಿದವರು ಯಾರು ಎಂಬುದು.

ಅಭಿರಕ್ಷಕರು ಯಾರು ಎಂದು ಕೇಳಿ!

(ಆರ್.ಪ್ರಸಾದ್, ಇಕನಾಮಿಕ್‍ ಟೈಮ್ಸ್)

***

ರಾಷ್ಟಾಧ್ಯಕ್ಷರು ಎಂದಿನಂತೆ ಸರಕಾರದ ‘ಸಾಧನೆ’ಗಳ ಬಗ್ಗೆ ಹೇಳಿಕೊಂಡರು…..

ಗರೀಬಿ ಹಟಾವೋ! ಉದ್ಯೋಗಾವಕಾಶಗಳನ್ನು ನಿರ್ಮಿಸಲಾಗಿದೆ!
ಭ್ರಷ್ಟಾಚಾರ ನಿವಾರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿದೆ!
ಸರಕಾರ ನಿರ್ಭೀತಿಯಿಂದ ಕೆಲಸ ಮಾಡಿದೆ!

“ಇದು ಇಂಡಿಯಾವಾದರೆ, ನಾವೇಕೆ ಭಾರತದಲ್ಲಿ ವಾಸಿಸುತ್ತಿದ್ದೇವೆ”

(ಸತೀಶ ಆಚಾರ್ಯ, ಫೇಸ್‍ಬುಕ್)

ಮರುದಿನ ಮಂಡಿಸಿದ 2023-24ರ ಬಜೆಟ್ ರಾಷ್ಟಾಧ್ಯಕ್ಷರ ದಾವೆಗಳ ಮುಂದೆ ಪ್ರಶ್ನೆ ಚಿಹ್ನೆಗಳನ್ನು ಹಾಕಿರುವುದಲ್ಲದೆ, ಇಂಡಿಯಾವಲ್ಲದ  “ಭಾರತ’ದಲ್ಲಿ ಬದುಕು ಸಾಗಿಸುತ್ತಿರುವವರ ಪ್ರಶ್ನೆಗೂ ಉತ್ತರ ನೀಡುವಂತಿದೆ.

***

ಈ ‘ ಅಮೃತಕಾಲದ  ಮೊದಲ ಬಜೆಟ್‍ʼ ನಲ್ಲಿ ಆ ಅಮೃತ ಎಲ್ಲರಿಗೂ ಸಿಗುವಂತದ್ದಲ್ಲ, ದೇಶವನ್ನು ‘ಅಮೃತ’ ಸಿಗುವವರು ಮತ್ತು ಸಿಗದವರ ನಡುವೆ  ವಿಭಜಿಸಲಾಗಿದೆ ಎಂದು ಬಜೆಟಿನ ಅಂಕಿ-ಅಂಶಗಳು ತೋರಿಸುತ್ತಿವೆ ಎನ್ನುತ್ತಿದ್ದಾರೆ ವಿಶ್ಲೇಷಕರು.

(ಪಿ.ಮಹಮ್ಮದ್, ಫೇಸ್‍ಬುಕ್)

ಪ್ರಧಾನ ಮಂತ್ರಿಗಳು ಇದನ್ನು ‘ಚಾರಿತ್ರಿಕ ಬಜೆಟ್’ ಎಂದಿದ್ದಾರೆ.

“ಏಕೆಂದರೆ, ಅಚ್ಛೇ ದಿನ್‍ ಈಗ ಚರಿತ್ರೆ!”
(ಸತೀಶ ಆಚಾರ್ಯ, ಮೊಲಿಟಿಕ್ಸ್.ಇನ್)

ಆದರೆ ಈಗ ’ಅಚ್ಛೇ ದಿನ್’ ಇತಿಹಾಸವೋ ಅಥವ ಭವಿಷ್ಯವೋ ಎಂಬ ಜಿಜ್ಞಾಸೆಯೂ ಉಂಟಾಗಿದೆ!

“ನಾವು ‘ಅಮೃತ ಕಾಲ’ಕ್ಕೆ ತಲುಪಿದ್ದೇವೆ!”

“ನಾವು ಅಚ್ಛೇ ದಿನ್‍ ದಾಟಿ ಬಂದಿದ್ದೇವೆಯೇ, ಅಥವಾ ಅದು ಇನ್ನು ಬರಬೇಕೇ…?”

(ಅಲೋಕ್ ನಿರಂತರ್, ಸಕಾಳ್)

ಈ ನಡುವೆ  ಸಬ್‍ ಕಾ ‘ವಿಕಾಸ್’’ ನ ಗತಿ-ಸ್ಥಿತಿ? ಇಲ್ಲಿ ಇತಿಹಾಸ-ಭವಿಷ್ಯದ ಜಿಜ್ಞಾಸೆಯೊಂದಿಗೆ ನಾಮಪರಿವರ್ತನೆಯ ಜಿಜ್ಞಾಸೆಯೂ ತಳುಕು ಹಾಕಿಕೊಂಡಿದೆ!

“ಯಾರ ಕರೆ?”                     “ ಅಮೃತ್ ಕರೆ”

“ಓ ವಿಕಾಸ್‍! ಎಲ್ಲಿಗೆ ಹೋಗಿದ್ದೀಯಾ?”      “ನನ್ನ ಹೆಸರೀಗ ‘ಅಮೃತ್’’

(ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

ವಿಕಾಸ್‍ನ ಹೆಸರು ಮಾತ್ರವೇ ಅಲ್ಲ, ದಿಲ್ಲಿಯ ಐತಿಹಾಸಿಕ ಮೊಘಲ್‍ ಗಾರ್ಡನ್ಸ್’  ಈ ಗಣತಂತ್ರ ದಿನದಂದು ‘ಅಮೃತ ಉದ್ಯಾನ್’ ಆಗಿದೆ! ಪ್ರಧಾನಿ ಕಾರ್ಯಾಲಯವೇ ಈ  ನಾಮಪರಿವರ್ತನೆಯ ಹೆಚ್ಚಿನ ಕಾರ್ಯಬಾರವನ್ನು ವಹಿಸಿಕೊಂಡಿದೆಯೇ!

(ಪಂಜು ಗಂಗೊಳ್ಳಿ, ಕನ್ನಡ ಒನ್ ನ್ಯೂಸ್‍)

ಆದರೂ, ಈ ಹಿಂದೆ ವಾಜಪೇಯಿ ಸರಕಾರದಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳ ಶೇರು ಮಾರಾಟಕ್ಕೆಂದೇ ಒಬ್ಬ ಮಂತ್ರಿಯನ್ನು ನೇಮಿಸಿದ್ದಂತೆ ಇದುವರೆಗೂ ಈ ಸರಕಾರ ನಾಮಪರಿವರ್ತನೆಗೆ ಪ್ರತ್ಯೇಕ ಮಂತ್ರಿಯನ್ನು ಇನ್ನೂ ನೇಮಿಸಿದಂತಿಲ್ಲ!

***

ಈ ‘ಅಮೃತ ಕಾಲ’ದ ಬಜೆಟ್ ಮನರೇಗ,ಆಹಾರ ಸಬ್ಸಿಡಿ ಸೇರಿದಂತೆ ಒಂದೆಡೆ ಬಹಳಷ್ಟು  ಸಾಮಾಜಿಕ ಖರ್ಚುಗಳ ಬಾಬ್ತುಗಳಲ್ಲಿ ಒಟ್ಟು 1,59,000 ಕೋಟಿ ರೂ.ಗಳಷ್ಟು ಕಡಿತ ಮಾಡಿದರೆ, ಇನ್ನೊಂದೆಡೆಯಲ್ಲಿ ಆದಾಯ ತೆರಿಗೆ ಮತ್ತು ಅದರ ಮೇಲಿನ ಸೆಸ್‍ನಲ್ಲಿ ಗಮನಾರ್ಹ ಇಳಿಕೆ ಮಾಡಿದೆ.  ಇದು ಮಧ್ಯಮ ವರ್ಗದವರಿಗೆ ‘ನೀಡಿದ ಚುನಾವಣಾ ಬಕ್ಷೀಸು ಎನ್ನಲಾಗುತ್ತಿದೆ.

“ಬಡವರು ಮತ್ತು ಮದ‍್ಯಮ ವರ್ಗದ ನಡುವೆ ಕಂದರ ಹೆಚ್ಚಲಿದೆ…”

(ನಲ ಪೊನ್ನಪ್ಪ, ಫೇಸ್‍ಬುಕ್)

ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗದ ನಡುವೆಯೂ ಕಂದರವೇನೂ ಕಡಿಮೆಯಾಗಿಲ್ಲ, ಬಹುಶಃ ಹೆಚ್ಚಿದೆ. ಏಕೆಂದರೆ ಅವರಿಗೆ ಮಧ್ಯಮ ವರ್ಗದವರಿಗೆ ಕೊಟ್ಟ ತೆರಿಗೆ ರಿಯಾಯ್ತಿಗಳಲ್ಲದೆ, ಅಧಿಭಾರ (ಸೆಸ್‍ದಲ್ಲಿಯೂ ಭಾರೀ ರಿಯಾಯ್ತಿ ಸಿಕ್ಕಿದೆ. ಗರಿಷ್ಟ ಸೆಸ್‍ 37% ಇದ್ದದ್ದು 25%ಕ್ಕೆ ಇಳಿದಿದೆ!

ಆದರೆ …..

ʻʻಆದಾಯ ತೆರಿಗೆಯಲ್ಲಿ ರಿಯಾಯ್ತಿ ಕೊಟ್ಟಾಯಿತು.
ನಿಮಗೆ ಇನ್ನೇನು ಬೇಕು ಹೇಳಿʼʼ

ʻʻಆದಾಯʼʼ

(ಕೀರ್ತಿಶ್‍, ಬಿಬಿಸಿ ನ್ಯೂಸ್‍, ಹಿಂದಿ)

***

ಕೆಲವೇ ದಿನಗಳ ಹಿಂದೆ, ಆಕ್ಸ್ ಫಾಮ್  ವರದಿ ನಮ್ಮ ದೇಶದಲ್ಲಿ ಅಸಮಾನತೆ ಹೆಚ್ಚುತ್ತಿದೆ, ಹೆಚ್ಚು ಆದಾಯದವರ ಮೇಲೆ, ಸಂಪತ್ತು ಹೆಚ್ಚಿರುವವರ ಮೇಲೆ ಅಧಿಕ ತೆರಿಗೆ ಹಾಕಬೇಕು ಎಂದು ಶಿಫಾರಸು ಮಾಡಿರುವ ಹಿನ್ನೆಲೆಯಲ್ಲೂ,  ಮುಂದಿನ ಸಾರ್ವತ್ರಿಕ ಚುನಾವಣೆಯ ಮೊದಲಿನ ಈ ಬಜೆಟ್ ಈ ರೀತಿ  ಒಂದೆಡೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರೋಕ್ಷ ತೆರಿಗೆಗಳನ್ನು ತೆರುತ್ತಿರುವ ಕಡಿಮೆ ಆದಾಯದವರಿಗೆ,  ಸಬ್ಸಿಡಿಗಳಲ್ಲಿ ಭಾರೀ ಕಡಿತ ಮಾಡುತ್ತಲೇ, ಹೆಚ್ಚು ಆದಾಯವಿರುವವರಿಗೆ  ಮತ್ತಷ್ಟು ರಿಯಾಯ್ತಿಗಳನ್ನು ಪ್ರಕಟಿಸುತ್ತಿದ್ದಾಗ ………

“ಬಜೆಟ್ ಸಿಹಿಯಲ್ಲಿ ….ಅದಾಣಿ ವಿವಾದದ ನೊಣ”

(ಅಲೋಕ್‍ ನಿರಂತರ್, ಸಕಾಳ್)

ಇದು ದೇಶದ ಅಗ್ರ ಶ್ರೀಮಂತನ ಉದ್ಯಮ ಸಮೂಹದ ಮೇಲೆ ಶೇರು ಮಾರುಕಟ್ಟೆಯಲ್ಲಿ ಅಕ್ರಮ, ಅವ್ಯವಹಾರಗಳ ಆರೋಪದಿಂದಾಗಿ ಎಂಬ ಬಗ್ಗೆ ಈಗ ಯಾರಿಗೂ ಸಂದೇಹ ಉಳಿದಂತಿಲ್ಲ.

ಈ ಆರೋಪಗಳು ‘ಭಾರತದ ಮೇಲೆ ದಾಳಿ’ ಎಂದು  ಆ ಸಮೂಹದ ಹಣಕಾಸು ವ್ಯವಹಾರಗಳ ಮುಖ್ಯಸ್ಥನ ಸಮಾಜಾಯಿಷಿಯನ್ನು ಶೇರು ಮಾರುಕಟ್ಟೆಯಂತೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

ಭಾರತ್‍ ಮಾತಾಕೀ…                                                            ಜೈ!

(ಸತೀಶ ಆಚಾರ್ಯ, ಮೊಲಿಟಿಕ್ಸ್.ಇನ್)

ಒಂದೇ ವಾರದಲ್ಲಿ ಈ ಸಮೂಹದ ಶೇರುಮಾರುಕಟ್ಟೆಯ ಮೌಲ್ಯ ಸುಮಾರು ಅರ್ಧಕ್ಕಿಳಿದು ಅದು ಸುಮಾರು 10 ಲಕ್ಷ ಕೋಟಿ ರೂ.ಗಳ  ಮೌಲ್ಯನಷ್ಟವನ್ನು ಅನುಭವಿಸಿದೆ ಎನ್ನಲಾಗಿದೆ.. 20,000 ಕೋಟಿ ರೂ.ಗಳ  ಮುಂದುವರೆದ ಸಾರ್ವಜನಿಕ ಶೇರು ನೀಡಿಕೆ(ಎಫ್‍ಪಿಒ)ವನ್ನು ಆ ಸಮೂಹವೇ ‘ನೈತಿಕ ಆಧಾರ’ದಲ್ಲಿ  ಹಿಂತೆಗೆದುಕೊಂಡಿದೆ!

ಜಗತ್ತಿನ ಶೇರು ಮಾರುಕಟ್ಟೆ ವೀಕ್ಷಣಾ ಸಂಸ್ಥೆಗಳು ಆ ಸಮೂಹದ ವಿರುದ್ಧ ಕ್ರಮ ಕೈಗೊಂಡರೂ ಭಾರತದ ಅಂತಹ  ಸಂಸ್ಥೆಗಳು (ಸೆಬಿ, ಆರ್ ಬಿ ಐ ಇತ್ಯಾದಿ) ದಿವ್ಯಮೌನ ತಳೆದಿದ್ದವು.

“ಅವರ ಮೌನವೇ, ಅದನ್ನು ದಾಖಲು ಮಾಡಲು ನಿಮಗೆ ಸಾಧ್ಯವಾದರೆ, ಬಹಳಷ್ಟು ಹೇಳುತ್ತಿದೆ,”

(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

ಆ ಸಂಸ್ಥೆಗಳ ಮತ್ತು ಸರಕಾರದ ವಕ್ತಾರರುಗಳು  ಕೊನೆಗೂ ಬಾಯಿತೆರೆದು ತನಿಖೆ ನಡೆಸಲಾಗುತ್ತಿದೆ ಎಂದೋ, ಎಲ್ಲವೂ ಚೆನ್ನಾಗಿದೆ ಎಂದೋ ಹೇಳುತ್ತಿದ್ದರೆ, ಇನ್ನೊಂದೆಡೆಯಲ್ಲಿ ಆ ಸಮೂಹದ  “ಭಾರತ್‍ ಮಾತಾಕೀ….” ಘೋಷವಾಕ್ಯಕ್ಕೆ ದನಿಗೂಡಿಸಲು ಪ್ರಯತ್ನಿಸುತ್ತಿರುವವರು ಇದು ಕೆಲವು ದೇಶಿ-ವಿದೇಶಿ ಎಡಪಂಥೀಯರ ಸಂಚು ಎಂದು ಹೇಳುತ್ತಿದ್ದಾರೆ.

“ಒಂದು ಸಾರ್ವಜನಿಕ ನೀಡಿಕೆಯನ್ನು ಹಿಂತೆಗೆದುಕೊಳ್ಳುವುದು ಎಂದರೆ ಸಮಾಜಕ್ಕೆ ಯಾವುದೇ ವಿಳಂಬ ಮಾಡದೆ ಹಿಂದಿರುಗಿಸುವುದು ಎಂದರ್ಥ. ಇದೊಂದು ಒಳ್ಳೆಯ ಸಂಗತಿಯಲ್ಲವೇ?”

(ಆರ್‍.ಪ್ರಸಾದ್, ಇಕನಾಮಿಕ್‍ ಟೈಮ್ಸ್)

ಈ ಎಫ್‍ಪಿಒ ಗೆ ಸಾರ್ವಜನಿಕರಿಂದ ಸ್ಪಂದನೆ ದೊರೆಯದಿದ್ದರೂ, “ಹೆಚ್‍ಎನ್‍ಐ”(ಉನ್ನತ ನಿವ್ವಳ ಆದಾಯದ) ವ್ಯಕ್ತಿಗಳ ಸಂಸ್ಥೆಗಳು  ಇತ್ಯಾದಿಗಳಿಂದಾಗಿ ಅದು ನೆರವೇರಿತು, ಈ ರೀತಿ ಹೂಡಿಕೆ ಮಾಡಿದವರಲ್ಲಿ ಎರಡು ಸಂಸ್ಥೆಗಳು ಹಿಂಡನ್‍ಬರ್ಗ್ ವರದಿಯಲ್ಲಿ ಉಲ್ಲೇಖಿಸಿದವುಗಳು ಎಂದು ಬಯಲಾದ್ದರಿಂದ ಅದನ್ನು ಹಿಂತೆಗೆದುಕೊಳ್ಳಲಾಯಿತು ಎಂದು ಕೆಲವು ವರದಿಗಳು ಹೇಳುತ್ತವೆ. ಆದೇನಿದ್ದರೂ,  ಬಲೂನಿಗೆ ತುಂಬಿಸಿದ ಗಾಳಿ ಹೋಗುತ್ತಿದೆ, ಅದರಿಂದ ಹಲವರಿಗೆ ಆತಂಕವುಂಟಾಗಿದೆ ಎನ್ನುತ್ತಾರೆ ಈ ವ್ಯಂಗ್ಯಚಿತ್ರಕಾರರು

(ಮಂಜುಲ್, ನ್ಯೂಸ್‍ಲಾಂಡ್ರಿ)

***

ಈ ನಡುವೆ  ಅಚ್ಛೇ ದಿನ್‍ಗಳ ಕಾಲದಲ್ಲಿ  `ದೇಶದ ಸಂಪತ್ತಿನ ಸೃಷ್ಟಿಕರ್ತರು’ ಎನಿಸಿಕೊಂಡವರ  ಈ ಸ್ಥಿತಿಯ ಬಗ್ಗೆ ಸರಕಾರ ಉತ್ತರ ಕೊಡಬೇಕು ಎಂಬ ಒತ್ತಡ ಹೆಚ್ಚುತ್ತಿದೆ….

“ನೀವು ದೇಶದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಿದ್ದೀರಿ-`ಒಲಿಂಪಿಕ್ಸ್ ಪೇ ಚರ್ಚಾ’ ನಡೆಸುತ್ತೀರಿ,
`ಪರೀಕ್ಷಾ ಪೇ ಚರ್ಚಾ’ ನಡೆಸುತ್ತಿರಿ-ನನಗೆ ನಿಮ್ಮ ಬಗ್ಗೆ ನಿಜಕ್ಕೂ ಹೆಮ್ಮೆಯಿದೆ”

“’ಅದಾಣಿ ಪೆ ಚರ್ಚಾ’ ಯಾವಾಗ ನಡೆಸುತ್ತೀರಿ?

(ರೆಮಿಕ್ಸ್ ಕಾಮಿಕ್ಸ್, ಫೇಸ್‍ಬುಕ್)

Donate Janashakthi Media

Leave a Reply

Your email address will not be published. Required fields are marked *