ಬೆಂಗಳೂರು: ಕೋಲಾರದ ಹಿರಿಯ ಕಾಂಗ್ರೆಸ್ ನಾಯಕ ಕೆ ಎಚ್ ಮುನಿಯಪ್ಪ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇಂದು ಸಚಿವ ಡಾ. ಸುಧಾಕರ್ ಅವರ ನಿವಾಸದಲ್ಲಿ ಇಬ್ಬರ ಭೇಟಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲೊಬ್ಬರಾದ ಕೆ ಎಚ್ ಮುನಿಯಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ಜೊತೆಗೆ ಮಾಜಿ ಸಚಿವ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಬಣ ಮತ್ತು ಮುನಿಯಪ್ಪ ಬಣ ಆಗಾಗ ಕಿತ್ತಾಡುತ್ತಲೇ ಇರುತ್ತವೆ. ಈಗ ಇಬ್ಬರ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು ಪಕ್ಷದಲ್ಲಿ ಮುನಿಯಪ್ಪರನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಜತೆಗೆ ಮುನಿಯಪ್ಪ ಕಾಂಗ್ರೆಸ್ ನಾಯಕರ ಮೇಲೆ ಸಿಟ್ಟಾಗಿದ್ದು ಬಿಜೆಪಿ ಸೇರುವ ಸಾಧ್ಯತೆಯಿದೆ ಎಂಬ ಮಾತುಗಳೂ ಕೇಳಿ ಬರುತ್ತಿತ್ತು. ಇದೀಗ ಸಚಿವ ಡಾ. ಕೆ. ಸುಧಾಕರ್ ಅವರ ಜೊತೆಗಿನ ಭೇಟಿ ಸಾಕಷ್ಟು ಹೊಸ ಚರ್ಚೆಗಳಿಗೆ ನಾಂದಿ ಹಾಡಿದೆ. ಮುನಿಯಪ್ಪ ಇಂದು ಸುಧಾಕರ್ ಅವರ ಸದಾಶಿವನಗರ ನಿವಾಸದಲ್ಲಿ ಭೇಟಿಯಾಗಿ ಮಾತನಾಡಿದರು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಭೇಟಿಯಾದರು. ಈ ಹಿನ್ನೆಲೆಯಲ್ಲಿ ಮುನಿಯಪ್ಪ ಬಿಜೆಪಿ ಸೇರುತ್ತಾರಾ ಎಂಬ ಅನುಮಾನ ಶುರುವಾಗಿದೆ.
ಇದನ್ನೂ ಓದಿ : ಕಾಂಗ್ರೆಸ್ ಗೆ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಗುಡ್ ಬೈ
ಕಾಂಗ್ರೆಸ್ ಬಿಡಲ್ಲ : ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಚ್. ಮುನಿಯಪ್ಪ, ಸುಧಾಕರ್ ತಂದೆಗೂ ನನಗೂ 40 ವರ್ಷದ ಒಡನಾಟವಿದೆ. ಸಚಿವ ಡಾ. ಸುಧಾಕರ್ ಜತೆಗೂ ನನ್ನ ಒಡನಾಟ ಇದೆ. ರಾಜಕೀಯವಾಗಿ ನಾವೇನೂ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಕೆಲವೊಮ್ಮೆ ಅಸಮಾಧಾನ ಇದ್ರೂ ಹೊಂದಿಕೊಂಡು ಹೋಗಬೇಕು. ಹೈಕಮಾಂಡ್ ಎಲ್ಲವನ್ನೂ ಸರಿ ಮಾಡುವ ವಿಶ್ವಾಸವಿದೆ. ನಾನಿನ್ನೂ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿದ್ದೇನೆ. ನನ್ನ ಜತೆ ಡಿ.ಕೆ.ಶಿವಕುಮಾರ್ ಚರ್ಚೆ ಮಾಡಿದ್ದಾರೆ. ಬಿ.ಕೆ.ಹರಿಪ್ರಸಾದ್, ರಾಜ್ಯಸಭೆ ಸದಸ್ಯ ಚಂದ್ರಶೇಖರ್ ಚರ್ಚಿಸಿದ್ದಾರೆ. ಒಟ್ಟಿಗೆ ಬಂದು ಒಂದು ಗಂಟೆ ಕಾಲ ಚರ್ಚೆ ಮಾಡಿದ್ದಾರೆ. ಪಕ್ಷದ ಸಕ್ರಿಯ ಕಾರ್ಯಕ್ರಮಗಳಲ್ಲಿ ಹಿಂದಕ್ಕೆ ಸರಿಯುವ ಪ್ರಶ್ನೆ ಇಲ್ಲ ಎಂದಿದ್ದಾರೆ. ಪಕ್ಷದ ಹಿತದೃಷ್ಠಿಯಿಂದ ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತದೆ ಎಂದರು.
ಇದೇ ವೇಳೆ ಗುಲಾಂ ನಬಿ ಆಜಾದ್ ರಾಜೀನಾಮೆಗೆ ಪ್ರತಕ್ರಿಯಿಸಿ, ಗುಲಾಂ ನಬಿ ಆಜಾದ್ 50 ವರ್ಷಗಳಿಂದ ಪಕ್ಷದಲ್ಲಿ ಇದ್ದವರು. ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಅವರಿಗೆ ಹೀಗೆ ಆಗಬಾರದಿತ್ತು. ಬಹಳಷ್ಟು ವಿಚಾರಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ.ಈಗ ಪಕ್ಷದಲ್ಲಿ ಇದ್ದೇನೆ, ಇಲ್ಲಿಯೇ ಮುಂದುವರಿಯುತ್ತೇನೆ ಎಂದು ಮುನಿಯಪ್ಪ ತಿಳಿಸಿದರು.