ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರದ ಬಂಡಾಯ ಈವರೆಗೂ ಶಮನವಾಗಿಲ್ಲ, ಸಚಿವ ಕೆ.ಎಚ್.ಮುನಿಯಪ್ಪ ಈವರೆಗೂ ಕ್ಷೇತ್ರದ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸದೆ ದೂರ ಉಳಿದಿರುವುದು ಕಾಂಗ್ರೆಸ್ಸಿಗರಿಗೆ ತಲೆನೋವಾಗಿ ಪರಿಣಮಿಸಿದೆ. ಕೋಲಾರ
ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಕೆ.ಎಚ್.ಮುನಿಯಪ್ಪ, ಕೋಲಾರ ಲೋಕಸಭಾ ಕ್ಷೇತ್ರದ ಪ್ರಚಾರ ಕಾರ್ಯಕ್ರಮಕ್ಕೆ ತಮಗೆ ಆಹ್ವಾನ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ತಮಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಜವಾಬ್ದಾರಿ ವಹಿಸಿದ್ದು, ತಾವು ಅಲ್ಲಿ ಕೆಲಸ ಮಾಡುವುದಾಗಿ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ಕೆಎಚ್ ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕಪೆದ್ದಣ್ಣರಿಗೆ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಅದು ಕೈತಪ್ಪಿದ್ದರಿಂದ ಅವರು ಮುನಿಸಿಕೊಂಡಿದ್ದಾರೆ. ಅವರ ಮುನಿಸು ಶಮನಕ್ಕೆ ಎಷ್ಟೇ ಪ್ರಯತ್ನಗಳು ನಡೆದರು ಫಲ ನೀಡಿಲ್ಲ. ಮಾತ್ರವಲ್ಲದೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ರಮೇಶ್ ಕುಮಾರ್ ಬಣ ಮೇಲುಗೈ ಸಾಧಿಸಿದೆ ಎಂಬ ಕೋಪವೂ ಕೆಎಚ್ ಮುನಿಯಪ್ಪ ಅವರಿಗಿದೆ. ಹೀಗಾಗಿ ಒತ್ತಾಯಕ್ಕೆ ಮಣಿದು ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರೂ ಪ್ರಚಾರದ ವೇಳೆ ಮಾತ್ರ ಗೈರಾಗಿದ್ದಾರೆ.
ಅದಾಗ್ಯೂ ರಮೇಶ್ ಕುಮಾರ್ ಬಣಕ್ಕೆ ಟಿಕೆಟ್ ಸಿಕ್ಕಿದ್ದರಿಂದ ಕೆಎಚ್ ಮುನಿಯಪ್ಪ ಪ್ರಚಾರಕ್ಕೆ ಆಗಮಿಸಿದರೆ ಬಂಡಾಯ, ಗುಂಪುಗಾರಿಕೆ ಪ್ರದರ್ಶನ ಆಗುತ್ತದೆ. ಹೀಗಾಗಿ ಸಿಎಂ ಡಿಸಿಎಂ ಪ್ರಚಾರ ಕಾರ್ಯಕ್ರಮಕ್ಕೆ ಕೆಎಚ್ ಮುನಿಯಪ್ಪ ಅವರನ್ನು ಆಹ್ವಾನ ಮಾಡಿಲ್ಲ ಎನ್ನಲಾಗುತ್ತಿದೆ. ಅವಶ್ಯಕತೆ ಇದ್ದಾಗ ಅವರನ್ನು ಕರೆಸಿಕೊಳ್ಳುವ ಸಾಧ್ಯತೆ ಇದೆ.
ಕೋಲಾರದಲ್ಲಿ ಕೆಎಚ್ ಮುನಿಯಪ್ಪ ಅಳಿಯನಿಗೆ ಟಿಕೆಟ್ ಬಯಸಿದ್ದು ಮಾತ್ರವಲ್ಲದೆ ರಮೇಶ್ ಕುಮಾರ್ ಬಣಕ್ಕೆ ಟಿಕೆಟ್ ನೀಡುವುದನ್ನು ಬಯಸಿರಲಿಲ್ಲ. ಆದರೆ ಕಾಂಗ್ರೆಸ್ ಹೈಕಮಾಂಡ್ ರಮೇಶ್ ಕುಮಾರ್ ಬಣದ ಕೆ.ವಿ.ಗೌತಮ್ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಕೋಪಗೊಂಡ ಮುನಿಯಪ್ಪ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಶನಿವಾರ ಪ್ರಚಾರದ ವೇಳೆ ರಮೆಶ್ ಕುಮಾರ್ ಇರುತ್ತಾರೆ ಎನ್ನುವ ಕಾರಣಕ್ಕಾಗಿ ಅವರು ಪ್ರಚಾರಕ್ಕೆ ಬಂದಿಲ್ಲ ಎನ್ನಲಾಗುತ್ತಿದೆ. ಇದರಿಂದ ಮುನಿಯಪ್ಪ ಮುನಿಸು ತಣ್ಣಗಾಗದೇ ಇರುವುದು ಸ್ಪಷ್ಟವಾಗಿದೆ.