ಬಾಲಕಾರ್ಮಿಕ ಪದ್ಧತಿ ತಡೆಯಲು ಕೇರಳ ಎಡರಂಗ ಸರ್ಕಾರದ ನೂತನ ಯೋಜನೆ

ತಿರುವನಂತಪುರಂ: ಬಾಲಕಾರ್ಮಿಕರ ಕುರಿತು ಮಾಹಿತಿ ಹಂಚಿಕೊಳ್ಳುವವರಿಗೆ ಕೇರಳದಲ್ಲಿ 2,500 ರೂ.ಗಳ ಪ್ರೋತ್ಸಾಹ ಧನ ನೀಡಲು ಕೇರಳ ಎಡರಂಗ ಸರ್ಕಾರ ಹೊಸ ಯೋಜನೆ ಪ್ರಾರಂಭ ಮಾಡಿದೆ.

ರಾಜ್ಯದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವ ಪ್ರಯತ್ನದ ಭಾಗವಾಗಿ ಇಲಾಖೆಯು ಪ್ರೋತ್ಸಾಹ ನೀಡುವ ಬಗ್ಗೆ ಮಂಜೂರಾತಿ ನೀಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ರಾಜ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ದೇಶದಲ್ಲಿ ಬಾಲಕಾರ್ಮಿಕ ಪದ್ದತಿ ನಿಷೇಧಿಸಲಾಗಿದೆ ಮತ್ತು ಕ್ರಿಮಿನಲ್ ಅಪರಾಧವಾಗಿದೆ. ದಕ್ಷಿಣ ರಾಜ್ಯದಲ್ಲಿ ಬಾಲಕಾರ್ಮಿಕರ ಪ್ರಕರಣಗಳು ಕಡಿಮೆಯಾಗಿದ್ದರೂ, ವಲಸೆ ಕಾರ್ಮಿಕರು ಮತ್ತು ಅವರ ಕಾರ್ಮಿಕ ಗುತ್ತಿಗೆದಾರರ ಮೂಲಕ ಮಕ್ಕಳನ್ನು ಉದ್ಯೋಗಕ್ಕಾಗಿ ಕೇರಳಕ್ಕೆ ಕರೆತರಲಾಗುತ್ತದೆ. ಇಂತಹ ಸಂದರ್ಭದಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವುದ ಮಹತ್ವದ ಗುರಿಯಾಗಿದೆ ಎಂದು ವೀಣಾ ಚಾರ್ಜ್ ಹೇಳಿದರು.

ಜನರ ಬೆಂಬಲದಿಂದಲೇ ಇದನ್ನು ತಡೆಯಲು ಸಾಧ್ಯ. ಬಾಲ ಮತ್ತು ಹದಿಹರೆಯದ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಪ್ರಕಾರ 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಯಲ್ಲಿ ತೊಡಗಿಸಬಾರದು ಎಂಬ ನಿಯಮವಿದೆ.

ಅಲ್ಲದೆ, 14 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 18 ವರ್ಷದೊಳಗಿನ ಮಕ್ಕಳು ಯಾವುದೇ ಅಪಾಯಕಾರಿ ಕೆಲಸದಲ್ಲಿ ತೊಡಗಬಾರದು ಎಂದು ಕಾನೂನು ಷರತ್ತು ವಿಧಿಸಿದೆ. ಮಕ್ಕಳು ಅನೇಕ ಕಾರಣಗಳಿಗಾಗಿ ಕೆಲಸ ಮಾಡಬೇಕಾದಾಗ, ಅದು ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಕೋವಿಡ್ -19 ಬಿಕ್ಕಟ್ಟಿನಿಂದಾಗಿ ಏಕಾಏಕಿ ಅನೇಕ ಸ್ಥಳಗಳಲ್ಲಿ ಬಾಲಕಾರ್ಮಿಕರು ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಖಚಿತಪಡಿಸಿಕೊಳ್ಳಲು ಪ್ರೋತ್ಸಾಹಕ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಸಚಿವೆ ವೀಣಾ ಜಾರ್ಜ್‌ ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗೆ ಗೌಪ್ಯ ಮಾಹಿತಿಯನ್ನು ತಿಳಿಸಬಹುದಾಗಿದೆ. ವ್ಯಕ್ತಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸ್, ಕಾರ್ಮಿಕ ಮತ್ತು ಇತರ ಸಂಬಂಧಿತ ಇಲಾಖೆಗಳ ಬೆಂಬಲದೊಂದಿಗೆ ಬಾಲಕಾರ್ಮಿಕರನ್ನು ನಿಗ್ರಹಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವೆ ವೀಣಾ ಚಾರ್ಜ್‌ ವಿವರಣೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *