ಕೊರೊನ ಪಿಡುಗಳನ್ನು ಎದುರಿಸುವಲ್ಲಿ ರಾಜ್ಯಗಳಿಗೆ ಸ್ವಯಂ ನಿರ್ಧಾರ ಕೈಗೊಳ್ಳುವ ಅಧಿಕಾರ, ಒಕ್ಕೂಟ ತತ್ವದ ಸ್ಫೂರ್ತಿ ಅಗತ್ಯ: ಪಿಣರಾಯಿ ವಿಜಯನ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಕೇರಳ ಎಡರಂಗ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಸಹ ಈ ಕಾನ್ಫರೆನ್ಸ್‍ನಲ್ಲಿ ಪಾಲ್ಗೊಂಡಿದ್ದು ಹಲವು ಅಮೂಲ್ಯ ಸಲಹೆಗಳನ್ನು ನೀಡಿದರು. ಕೋರೋನಾ ಪಿಡುಗನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ವಿಕೇಂದ್ರೀಕರಣ ತತ್ವವನ್ನು ಯಶಸ್ವಿಯಾಗಿ ಅನ್ವಯಿಸುವ ಕುರಿತೂ ಪ್ರಸ್ತಾಪಿಸಿದರು. ಈ ಕಾನ್ಫರೆನ್ಸ್‍ನಲ್ಲಿನ ಅವರ ಸಂಭಾಷಣೆಯ ಪ್ರಮುಖ ಅಂಶಗಳು ಹೀಗಿವೆ. 

ಈ ಸದ್ಯ ನಾವು ಲಾಕ್‍ಡೌನ್‍ನ ಮೂರನೆ ಹಂತದ ವಿಸ್ತರಣೆಯಲ್ಲಿ ಇದ್ದೇವೆ. ಕೆಲವು ಕ್ಷೇತ್ರಗಳಲ್ಲಿ ಸ್ವಲ್ಪ ಮಟ್ಟಿಗೆ ರಿಯಾಯಿತಿ ನೀಡಿದ್ದರೂ, ಲಾಕ್‍ಡೌನ್ ನಿಯಂತ್ರಣ ಕ್ರಮಗಳನ್ನು  ಗಮನಾರ್ಹ ಪ್ರಮಾಣದಲ್ಲಿ  ಮುಂದುವರೆಸಲಾಗಿದೆ. 

1. ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯ ಸರ್ಕಾರಗಳು ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುವ ಅಗತ್ಯವಿದೆ. ದೇಶದ ವಿವಿಧ ರಾಜ್ಯಗಳು ಕೋವಿಡ್-19 ಪಿಡುಗಿನ ವಿವಿಧ ಹಂತದ ತೀವ್ರತೆಯ ಸವಾಲುಗಳನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯಗಳು ಅವರ ವ್ಯಾಪ್ತಿಗೆ ಅನುಗುಣವಾಗಿ ಅಲ್ಲಿನ ಪರಿಸ್ಥಿತಿಗಳಿಗೆ ತಕ್ಕಂತೆ ಲಾಕ್‍ಡೌನ್ ನಿಯಮಗಳನ್ನು ಅನ್ವಯಿಸಿಕೊಳ್ಳುವ ಅಧಿಕಾರವನ್ನು ನೀಡಬೇಕು.

ಕೇರಳದಲ್ಲಿನ ಪರಿಸ್ಥಿತಿಯನ್ನು ಕೂಲಂಕಷವಾಗಿ ವಿಶ್ಲೇಷಣೆ ನಡೆಸಿದ ನಂತರ ಇಂತಹ ನಿರ್ಧಾರಕ್ಕೆ ಬರಲಾಗಿದೆ. ಅದರಂತೆ ಆಯಾ ರಾಜ್ಯ ಸರ್ಕಾರಗಳು ಭೌತಿಕ ಅಂತರದ ನಿಯಮಗಳನ್ನು ಕಾಯ್ದುಕೊಳ್ಳುವ ಜೊತೆಗೆ ರಾಜ್ಯಗಳೊಳಗೆ ಸಾರಿಗೆ ಆರಂಭಿಸಲು ಅವಕಾಶ ಕಲ್ಪಿಸುವ ಅಗತ್ಯವಿದೆ. 

ಕೆಂಪು ವಲಯದಲ್ಲಿರುವ ನಗರಗಳನ್ನು ಹೊರತುಪಡಿಸಿ ಇತರೆ ನಗರಗಳಲ್ಲಿ ಕೆಲವು ನಿಯಮಗಳಿಗೆ ಒಳಪಟ್ಟು ಮೆಟ್ರೋ ಸೇವೆಯನ್ನು ಆರಂಭಿಸಲು ಅವಕಾಶ ನೀಡಬಹುದು. 

ಆಯಾ ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನು ರಾಜ್ಯ ಸರ್ಕಾರಗಳು ಅವಲೋಕನ ನಡೆಸಿದ ನಂತರ ಸಾಗಾಣಿಕೆ ಸಾಮಥ್ರ್ಯದ ನಿಯಮಗಳಿಗೆ ಒಳಪಡುವಂತೆ ತ್ರಿಚಕ್ರ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಬಹುದು.  

ಅದೇ ರೀತಿಯಲ್ಲಿ ಸ್ಥಳೀಯ ಪರಿಸ್ಥಿತಿಯನ್ನು ಮನಗಂಡು ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಚಟುವಟಿಕೆಗಳನ್ನು ಆರಂಭಿಸಲು ರಾಜ್ಯ ಸರ್ಕಾರಗಳು ರಿಯಾಯಿತಿಗಳನ್ನು ಕೊಡಬಹುದು. 

ಆದರೆ ಈ ವಿನಾಯಿತಿಗಳನ್ನು ನೀಡುವ ಮುನ್ನ ಭೌತಿಕ ಅಂತರ ಕಾಯ್ದುಕೊಳ್ಳುವುದು ಮತ್ತಿತರ ನಿರ್ಬಂಧಗಳನ್ನು ಕಠಿಣವಾಗಿ ಕಾಯ್ದುಕೊಳ್ಳಬೇಕು. ಈ ವಿನಾಯಿತಿಗಳನ್ನು ಕಂಟೈನ್‍ಮೆಂಟ್ ವಲಯಗಳಿಗೆ ಅನ್ವಯಿಸಬಾರದು. 

2. ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರನ್ನು ಅವರು ಮನೆಗಳಿಗೆ ಸೇರುವ ಮುನ್ನ ಪರೀಕ್ಷೆಗೆ ಒಳಪಡಿಸಬೇಕು. ವಿದೇಶಗಳಲ್ಲಿ ನೆಲೆಸಿರುವ ಗಣನೀಯ ಪ್ರಮಾಣದ ಜನಸಂಖ್ಯೆಯನ್ನು ಕೇರಳ ರಾಜ್ಯ ಹೊಂದಿದೆ. ಅವರಲ್ಲಿ ಕೆಲವರು ಈಗಾಗಲೆ ವಿಶೇಷ ವಿಮಾನಗಳಲ್ಲಿ ರಾಜ್ಯಕ್ಕೆ ಹಿಂದಿರುಗಿದ್ದು ಇನ್ನಷ್ಟು ಮಂದಿ ಬರುವ ಸಾಧ್ಯತೆಗಳಿವೆ. ವಿದೇಶಗಳಿಂದ ವಿಶೇಷ ವಿಮಾನಗಳಲ್ಲಿ ಆಗಮಿಸುವವರನ್ನು ಬೋರ್ಡಿಂಗ್ ಆಗುವುದಕ್ಕೆ ಮುನ್ನ ಆಂಟಿ-ಬಾಡಿ ಪರೀಕ್ಷೆಗೆ ಒಳಪಡಿಸಬೇಕು. ಇಂತಹ ಪರೀಕ್ಷೆ ಇಲ್ಲದಿದ್ದಲ್ಲಿ ಇತರೆ ಹಲವಾರು ಪ್ರಯಾಣಿಕರು ಸೋಂಕಿಗೆ ಗುರಿಯಾಗುವ ಎಲ್ಲ ಸಾಧ್ಯತೆಗಳೂ ಇವೆ. 

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಎಂದರೆ ಕಳೆದ ವಾರ ವಿಶೇಷ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಕೇರಳಕ್ಕೆ ಆಗಮಿಸಿದ್ದವರಲ್ಲಿ ಐದು ಮಂದಿಯಲ್ಲಿ ಕೊರೋನಾ ಸೋಂಕಿಗೆ ಗುರಿಯಾಗಿದ್ದರು. 

3. ದೇಶೀಯ ಮಾರ್ಗಗಳಲ್ಲಿ ಸಂಚರಿಸುವವರಿಗೆ ನಿರ್ದಿಷ್ಟ ಶಿಷ್ಟಾಚಾರ (ಪ್ರೊಟೊಕೋಲ್) ಅಗತ್ಯ :ವಿನಾಯಿತಿಗಳನ್ನು ನೀಡಿವುದರಿಂದ ಹೆಚ್ಚಿನ ಪ್ರಯಾಣಿಕರು ಸಂಚರಿಸಿದ್ದಾರೆ. ಇಂತಹ ವ್ಯಕ್ತಿಗಳ ಪ್ರಯಾಣಕ್ಕೆ ಸ್ಪಷ್ಟ ಮತ್ತು ನಿರ್ದಿಷ್ಟ ಶಿಷ್ಟಾಚಾರವನ್ನು ರೂಪಿಸಲು ಶಿಫಾರಸು ಮಾಡಬೇಕು. ಅಂತರ-ರಾಜ್ಯ ಸಂಚಾರಗಳು ಸಹ ಕೆಲವು ನಿರ್ದಿಷ್ಟ ನಿಯಂತ್ರಣಗಳಿಗೆ ಒಳಪಡಬೇಕು ಮತ್ತು ಹಂತ ಹಂತವಾಗಿ ಸಡಿಲಗೊಳಿಸಬೇಕು.

ವಿಮಾನ ಹೊರಡುವ ಸ್ಥಳ ಮತ್ತು ತಲುಪುವ ಸ್ಥಳಗಳಿಗೆ ಸಂಬಂಧಿಸಿದಂತೆ ಕೆಲವು ಶಿಷ್ಟಾಚಾರಗಳನ್ನು ರೂಪಿಸಿ ದೇಶೀಯ ವಿಮಾನಗಳ ಹಾರಾಟಕ್ಕೂ ಅವಕಾಶ ನೀಡಬಹುದು. ಕಂಟೈನ್‍ಮೆಂಟ್ ವಲಯಗಳಿಂದ ಮತ್ತು ಕಂಟೈನ್‍ಮೆಂಟ್ ವಲಯಗಳಿಗೆ ಪ್ರಯಾಣಿಸುವುದಕ್ಕೆ ಕೆಲವು ಅನಿವಾರ್ಯ ನಿರ್ಬಂಧಗಳನ್ನು ಹೇರಬಹುದು. 

ಕೋವಿಡ್-19 ಸೋಂಕಿನ ಸೂಚನೆಗಳು ಇದ್ದ ವ್ಯಕ್ತಿಗಳು ಪ್ರಯಾಣಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವುದು. ಇದಕ್ಕಾಗಿ ವಿಮಾನ ನಿಲ್ದಾಣಗಳಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದು. 

ದೇಶದೊಳಗೆ ರಸ್ತೆ ಸಾರಿಗೆಗೆ ಸಂಬಂಧಿಸಿದಂತೆ ವಾಹನಗಳು ಅಂತಿಮವಾಗಿ ತಲುಪಬೇಕಾದ ಜಿಲ್ಲೆಗಳಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತಿರಬೇಕು. ಇದರ ಆಧಾರದಲ್ಲಿಯೇ ಯಾವ ಜಿಲ್ಲೆಗಳಲ್ಲಿ ವ್ಯಕ್ತಿಗಳು ಪ್ರಸ್ತುತ ಸಿಲುಕಿಕೊಂಡಿದ್ದಾರೋ ಆ ಜಿಲ್ಲೆಗಳಿಂದ ಹೊರ ಹೋಗಲು ಅನುಮತಿಯನ್ನು ನೀಡಬೇಕು. 

ಯಾವುದೇ ರಾಜ್ಯಗಳು ವಾಹನ ಸಂಚಾರದಲ್ಲಿ ಇದ್ದಾಗ ಅನುಮತಿ ಅಥವಾ ಪ್ರಮಾಣ ಪತ್ರವನ್ನು ಕೇಳುವಂತಿರಬಾರದು. ಏಕೆಂದರೆ ಇದರಿಂದ ಪ್ರಯಾಣದಲ್ಲಿ ಅಡ್ಡಿಯಾಗಲಿದ್ದು ಅಲ್ಲೆ ಉಳಿಯುವಂತಾಗಲಿದೆ. 

ಕೇರಳ ಸರ್ಕಾರ ಈಗಾಗಲೆ ದೇಶದ ಬೇರೆ ರಾಜ್ಯಗಳಿಂದ ಬರುವ ವ್ಯಕ್ತಿಗಳಿಗೆ ಆನ್‍ಲೈನ್ ಮೂಲಕ ನೋಂದಾಯಿಸಿಕೊಳ್ಳುವ ಅಂತಹ ವ್ಯವಸ್ಥೆಯನ್ನು ರೂಪಿಸಿದೆ. ಕೇರಳಕ್ಕೆ ಬರುವ ವ್ಯಕ್ತಿಗಳು ಉಳಿದುಕೊಳ್ಳಬಹುದಾದ ಅವಧಿಯ ಆಧಾರದಲ್ಲಿ ಅಂತಹ ಪರವಾನಗಿಗಳನ್ನು ವಿತರಿಸಲಾಗುತ್ತಿದೆ. 

ಇಂತಹ ವ್ಯವಸ್ಥೆ ಇಲ್ಲದಿದ್ದಲ್ಲಿ ತಾವು ಹೊರಡಬೇಕಾದ ರಾಜ್ಯಗಳ ಪ್ರವೇಶ ದ್ವಾರಗಳಲ್ಲಿ ಇನ್ನಿಲ್ಲದಂತೆ ಜನದಟ್ಟಣೆ ಹೆಚ್ಚಾಗಲಿದೆ. ಇಂತಹ ಸನ್ನಿವೇಶದಲ್ಲಿ ಭೌತಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾಧ್ಯವಾಗುವುದಿಲ್ಲ. 

ಪ್ರವೇಶ ದ್ವಾರಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ  ಚಲನೆ ಹೊಂದಿರಬೇಕು. ಟ್ಯಾಕ್ಸಿಗಳು ಮತ್ತು ಬಸ್‍ಗಳನ್ನು ಯಾವುದೇ ಅಂತಾರಾಜ್ಯ ಪರವಾನಗಿಯನ್ನು ತಪಾಸಣೆ ನಡೆಸದೆ ಮುಂದೆ ಸಾಗಲು ಬಿಡಬೇಕು. ಹಾಗಿದ್ದರೂ ವಾಹನಗಳನ್ನು ಸೋಂಕುಮುಕ್ತಗೊಳಿಸುವ ಕ್ರಮ-ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. 

4. ವಿಶೇಷ ರೈಲುಗಳನ್ನು  ಹೆಚ್ಚಿಸಬೇಕು. ರಾಜ್ಯ ಸರ್ಕಾರಗಳ ಮೂಲಕ ನೋಂದಣಿ ಇಲ್ಲದೆ ರೈಲ್ವೆ ಇಲಾಖೆಗೆ ಏಕೆ ಆನ್‍ಲೈನ್ ಮೂಲಕ ನೋಂದಾಯಿಸುವ ಅನುಮತಿ ನೀಡಲಾಯಿತು?

ವಲಸೆ ಕಾರ್ಮಿಕರನ್ನು ಸಾಗಣೆ ಮಾಡಲು ವಿಶೇಷ ರೈಲುಗಳನ್ನು ಬಳಕೆ ಮಾಡಿದಂತೆ ಇತರೆ ವರ್ಗದ ಪ್ರಯಾಣಿಕರಿಗೂ ವಿಶೇಷ ರೈಲುಗಳನ್ನು ಚಲಾಯಿಸುವ ಅಗತ್ಯವಿದೆ. ಕೇರಳ ಸರ್ಕಾರ ಈಗಾಗಲೆ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುವ ಸಲುವಾಗಿ ದೆಹಲಿಗೆ ವಿಶೇಷ ರೈಲನ್ನು ವ್ಯವಸ್ಥೆ ಮಾಡಲು ಕೋರಿದೆ. ರಾಜ್ಯ ಸರ್ಕಾರಗಳಲ್ಲಿ ನೋಂದಣಿ ವಿವರಗಳನ್ನು ಪರಿಶೀಲಿಸಿ ಇಂತಹ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಟಿಕೆಟ್‍ಗಳನ್ನು ವಿತರಿಸಬೇಕು. ಆದರೆ ರೈಲ್ವೆ ಇಲಾಖೆ ಇಂತಹ ಯಾವುದೇ ನೋಂದಣಿ ವಿವರಗಳನ್ನು ಪರಿಶೀಲಿಸದೆ ಆನ್‍ಲೈನ್ ಬುಕಿಂಗ್ ಮಾಡುತ್ತಿದೆ. ಹೀಗೆ ಮಾಡುವುದರಿಂದ ಸೋಂಕು ಹರಡುವುದನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾಧ್ಯವಾಗುವುದಿಲ್ಲ. ಸಾಮೂಹಿಕವಾಗಿ ಸೋಂಕು ಹರಡುವುದನ್ನು ತಪ್ಪಿಸಲು ರಾಜ್ಯಗಳು ಕೈಗೊಳ್ಳುವ ಪರಿಣಾಮಕಾರಿ ಕ್ರಮಗಳು ಇದರಿಂದ ವ್ಯರ್ಥವಾಗಲಿವೆ. ಈ ವಿಷಯದ ಕುರಿತಂತೆ ನಾನು ಈಗಾಗಲೆ ಕೇಂದ್ರದ ರೈಲ್ವೆ ಸಚಿವರೊಂದಿಗೆ ಮಾತುಕತೆ ನಡೆಸಿ ಅವರ ಗಮನಕ್ಕೆ ತಂದಿದ್ದೇನೆ. 

5. ಸಮರ್ಪಕ ಪರೀಕ್ಷೆ ಇಲ್ಲದಿದ್ದರೆ ಎದುರಾಗುವ ಸಮಸ್ಯೆಗಳು:

ಕಳೆದ ಒಂದು ವಾರದಲ್ಲಿ ಕೇವಲ 5 ಮಾತ್ರ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಆದರೆ ಇಂದು 27 ಪ್ರಕರಣಗಳು ಕಂಡುಬಂದಿವೆ. ಈ ಪೈಕಿ 18 ಪ್ರಕರಣಗಳು ಹೊರ ರಾಜ್ಯಗಳಿಂದ ಬಂದ ವ್ಯಕ್ತಿಗಳು ಸೋಂಕಿತರಾಗಿರುವುದು. 7 ಮಂದಿ ಕೊಲ್ಲಿ ರಾಜ್ಯಗಳಿಂದ ಬಂದವರು ಮತ್ತು 11 ಮಂದಿ ಇತರೆ ರಾಜ್ಯಗಳವರು. 

ನೆರೆಯ ರಾಜ್ಯಕ್ಕೆ ಹೊಂದಿಕೊಂಡಿರುವ ರಾಜ್ಯದ ಜಿಲ್ಲೆಯೊಂದರಲ್ಲಿ ಕುಟುಂಬವೊಂದರ ಎಲ್ಲ ಸದಸ್ಯರೂ ಸೋಂಕಿತರಾಗಿದ್ದಾರೆ. ಆ ಮನೆಯ ವ್ಯಕ್ತಿಯೊಬ್ಬ ಅಂತಾರಾಜ್ಯ ಲಾರಿ ಚಾಲಕನಾಗಿರುವುದರಿಂದ ಹೀಗಾಗಿದೆ. ನಮ್ಮ ಅನುಭವ ಏನೆಂದರೆ ಅಂತಾರಾಜ್ಯ ವಾಹನಗಳ ಸಂಚಾರದಲ್ಲಿ ವಿನಾಯಿತಿ ನೀಡಿದಲ್ಲಿ ಮತ್ತು ಯಾವುದೇ ರೀತಿಯ ಎಚ್ಚರಿಕೆ ಕೈಗೊಳ್ಳದಿದ್ದಲ್ಲಿ ಸಾಮುದಾಯಿಕ ಸೋಂಕು ಹರಡುವಿಕೆ ತೀವ್ರವಾಗಲಿದೆ. ಹೀಗಾಗಿ ವಿಮಾನಯಾನ, ರೈಲು ಮತ್ತು ರಸ್ತೆ ಸಾರಿಗೆ ಸಂದರ್ಭದಲ್ಲಿ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. 

ನಮ್ಮ ಸಹೋದರಿ ಮತ್ತು ಸಹೋದರರನ್ನು ನಮ್ಮ ಮನೆಗೆ ಕರೆದುಕೊಳ್ಳುವಾಗ ಮನೆಯಲ್ಲಿನ ಪ್ರತಿಯೊಬ್ಬರ ಆರೋಗ್ಯ ದೃಷ್ಟಿಯಿಂದ ಕೋವಿಡ್-19 ಸೋಂಕು ಹರಡದಂತೆ ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. 

ಈ ವಿಚಾರದಲ್ಲಿ ಪ್ರಧಾನ ಮಂತ್ರಿಗಳು ಕೂಡಲೆ ಮಧ್ಯಪ್ರವೇಶಿಸಬೇಕೆಂದು ಕೋರುತ್ತೇವೆ. ಇದರೆ ಜೊತೆಗೆ ನಮ್ಮ ಮನವಿ ಏನೆಂದರೆ ಮುಂಬೈ, ಅಹಮದಾಬಾದ್, ಕೋಲ್ಕತ್ತ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರುಗಳಿಂದ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಬೇಕು. ಪ್ರಯಾಣಿಕರು ಅವರು ತಲುಪಬೇಕಾದ ರಾಜ್ಯಗಳಿಂದ ಅನುಮತಿ ಪತ್ರಗಳನ್ನು ಹೊಂದಿರುವವರಿಗೆ ಮಾತ್ರ ಪ್ರಯಾಣದ ಟಿಕೆಟ್‍ಗಳನ್ನು ನೀಡಬೇಕು. 

6. ಎಲ್ಲ ರೈಲುಗಳನ್ನು ತಡೆ ರಹಿತ ಅಥವಾ ನಿಯಮಿತ ನಿಲುಗಡೆ ಮಾತ್ರ ನೀಡಬೇಕು. ಇದಕ್ಕೆ ಸಂಬಂಧಿಸಿದಂತಹ ಮತ್ತೊಂದು ಪ್ರಮುಖ ಅಂಶವೆಂದರೆ ತಲುಪಬೇಕಾದ ರಾಜ್ಯದಲ್ಲಿನ ನಿಲ್ದಾಣಗಳನ್ನು ಹೊರತುಪಡಿಸಿ ಬೇರೆಲ್ಲೂ ನಿಲುಗಡೆ ಹೊಂದಿರಬಾರದು. ಈ ರೈಲುಗಳಲ್ಲಿನ ಪ್ರಯಾಣಿಕರು ಎಲ್ಲ ನಿಲ್ದಾಣಗಳಲ್ಲಿ ಇಳಿದು ಹತ್ತುವುದರಿಂದ ಇತರರೊಂದಿಗೆ ಸಂಪರ್ಕ ಬೆಳೆದು ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ಸಾಂಕ್ರಾಮಿಕ ರೋಗ ಭೀತಿ ಹೆಚ್ಚಾಗಿರುವುದರಿಂದ ಇನ್ನಷ್ಟು ಹರಡದಂತೆ ರೋಗ ತಪಾಸಣೆಯನ್ನು ಹೆಚ್ಚಿಸುವ ಅಗತ್ಯವಿದೆ. 

7. ಕೇಂದ್ರ ಸರ್ಕಾರ ಪರೀಕ್ಷಾ ಕಿಟ್‍ಗಳನ್ನು ಒದಗಿಸಬೇಕು. 

ರಾಜ್ಯಗಳ ಅಗತ್ಯಗಳನ್ನು ಕೇಂದ್ರ ಸರ್ಕಾರ ಅಂದಾಜಿಸಬೇಕು. ಅವರ ಬೇಡಿಕೆಗಳನ್ನು ಪೂರೈಸಬೇಕೆಂದು ನಾವು ಮತ್ತೊಮ್ಮೆ ಒತ್ತಾಯಿಸುತ್ತಿದ್ದೇವೆ. ಪಿಸಿಆರ್ ಮತ್ತು ಆಂಟಿ-ಬಾಡಿ ಟೆಸ್ಟ್‍ಗಳಿಗೆ ರಾಜ್ಯಗಳಿಗೆ ಅಗತ್ಯವಾದಷ್ಟು ಪರೀಕ್ಷಾ ಕಿಟ್‍ಗಳನ್ನು ಒದಗಿಸಬೇಕು. 

ದೇಶದೊಳಗಿನ ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಕೈಗೊಳ್ಳುವ ಪರೀಕ್ಷೆಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡುವ ಪ್ರಕ್ರಿಯೆಗಳನ್ನು ಕೇಂದ್ರ ಸರ್ಕಾರ ತ್ವರಿತಗೊಳಿಸಬೇಕು. 

ವಿವಿಧೆಡೆ ಪ್ರವಾಸ ಮಾಡಿರುವ ವ್ಯಕ್ತಿಗಳನ್ನು ಪ್ರತ್ಯೇಕ ಗೃಹ ವಾಸ ವ್ಯವಸ್ಥೆಯನ್ನು ಕೇರಳ ಸರ್ಕಾರ ಈಗಾಗಲೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿದೆ. ಇದಕ್ಕೆ ರಾಜ್ಯದ ವಿವಿಧ ಇಲಾಖೆಗಳು ಮತ್ತು ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು ಅಗತ್ಯ ನೆರವು ನೀಡುತ್ತಿದ್ದು ಮೇಲ್ವಿಚಾರಣೆ ನೋಡಿಕೊಳ್ಳಲಾಗುತ್ತಿದೆ. 

ಮನೆಗಳಲ್ಲೇ ಪ್ರತ್ಯೇಕ ವಾಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರಿಂದ ಸರ್ಕಾರಿ ಇಲಾಖೆಗಳೇ ಪ್ರತ್ಯೇಕವಾಗಿ ವಾಸ ವ್ಯವಸ್ಥೆ ಮಾಡುವ ಭಾರಿ ಒತ್ತಡವನ್ನು ನಿರಾಳವಾಗಿಸಿದೆ. ವಿದೇಶಗಳಿಂದ ಈಗಲೂ ಯಾರಾದರೂ ಆಗಮಿಸಿದಲ್ಲಿ ಇದೇ ವ್ಯವಸ್ಥೆಯನ್ನು ಮುಂದುವರಿಸಲು ಕೇರಳ ಸರ್ಕಾರಕ್ಕೆ ಅನುಮತಿ ನೀಡಿರುವುದನ್ನು ಮುಂದುವರಿಸಬೇಕೆಂಬುದು ನಮ್ಮ ಮನವಿಯಾಗಿದೆ. 

8. ಜನರಿಗೆ ಆದಾಯ  ಬೆಂಬಲವನ್ನು ತುರ್ತಾಗಿ ಒದಗಿಸಬೇಕು.

. ರಾಜ್ಯಗಳಿಗೆ ನೆರವು ಕೊಡಬೇಕು. 

ಲಾಕ್‍ಡೌನ್‍ನಿಂದ ರಾಜ್ಯಗಳ ಬೊಕ್ಕಸಕ್ಕೆ ಮತ್ತು ಜನರಿಗೆ ಆದಾಯ ಇಲ್ಲದೆ ಸಂಕಷ್ಟದಲ್ಲಿದ್ದು ಆದಾಯ ಗಳಿಕೆ ನೆರವು ನೀಡಬೇಕೆಂದು ಈ ಹಿಂದಿನ ಎಲ್ಲ ವಿಡಿಯೋ ಕಾನ್ಫರೆನ್ಸ್‍ಗಳಲ್ಲಿ ಕೇರಳ ಮನವಿ ಮಾಡಿತ್ತು. ಪ್ರಸಕ್ತ ಸನ್ನಿವೇಶದಲ್ಲಿ ಇದರ ಅಗತ್ಯತೆ ಇನ್ನಷ್ಟು ಹೆಚ್ಚಾಗಿದೆ. ಆದಾಯದಲ್ಲಿ ಕುಸಿತ ಮತ್ತು ಅತಿಹೆಚ್ಚಿನ ವೆಚ್ಚದಿಂದಾಗಿ ರಾಜ್ಯಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸಾಲವನ್ನು ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಬೇಕು. ಕೇಂದ್ರ ಸರ್ಕಾರ 2020-21ನೇ ಸಾಲಿನಲ್ಲಿ ಬಜೆಟ್‍ನಲ್ಲಿ ನಿಗದಿಪಡಿಸಿದ್ದ ಸಾಲ ಪಡೆಯುವ ಮಿತಿ 7.8 ಲಕ್ಷ ಕೋಟಿ ರೂಗಳಿಗೆ ಬದಲಾಗಿ ರೂ.12 ಲಕ್ಷ ಕೋಟಿಗೆ ಹೆಚ್ಚಿಸಿದೆ. ಇದು ದೇಶದ ಒಟ್ಟಾರೆ ಜಿಡಿಪಿಯ ಶೇ.5.5ರಷ್ಟಾಗಲಿದೆ. ಇದು ಸಂಕಷ್ಟದ ವಿಶೇಷ ಸಮಯವಾಗಿದ್ದು ಕೇಂದ್ರದ ಸಾಲ ಪಡೆಯುವ ಮಿತಿಯನ್ನು ಹೆಚ್ಚಿಸಿರುವಾಗ ರಾಜ್ಯಗಳಿಗೂ ಇಂತಹ ಅವಕಾಶವನ್ನು ಕಲ್ಪಿಸಬೇಕು. 

9. ಎಂಎಸ್‍ಎಂಇಗಳಿಗೆ ನೆರವು ಕೊಡಿ

10. ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವು ಕೊಡಿ

11. ಉದ್ಯೋಗಗಳು ನಷ್ಟವಾಗದಂತೆ ತಡೆಯಲು ಕೈಗಾರಿಕೆಗಳಿಗೆ ಅಗತ್ಯ ಬೆಂಬಲವನ್ನು ಕೊಡಬೇಕು. 

12. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸಬೇಕು. 

ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಕೂಡಲೆ ನೆರವನ್ನು ಘೋಷಿಸಬೇಕು. ಇದೇ ಸಂದರ್ಭದಲ್ಲಿ ಕೈಗಾರಿಕೆಗಳು ಉದ್ಯೋಗಗಳನ್ನು ಉಳಿಸಿಕೊಳ್ಳಲು ಅಗತ್ಯ ಬೆಂಬಲ ಕೊಡಬೇಕು. 

ಬರಡು ಭೂಮಿಯನ್ನು ಉಳುಮೆ ಮಾಡುವುದು ಸೇರಿದಂತೆ ಕೈಷಿಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಿಗೂ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ವಿಸ್ತರಿಸಬೇಕು. ಆಹಾರ ಧಾನ್ಯಗಳನ್ನು ಉತ್ಪಾದಿಸುವುದಕ್ಕೆ ಸಂಬಂಧಿಸಿದಂತೆ ಕೇರಳ ಈಗಾಗಲೆ ಸಮಗ್ರ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯನ್ನು ಸಂಪನ್ಮೂಲ ಸೃಷ್ಟಿ ಯೋಜನೆಯನ್ನಾಗಿ ಪರಿಗಣಿಸಿ ನೋಡುವ ಅಗತ್ಯವಿದೆ. 

ದೇಶದ ಆರ್ಥಿಕ ಪ್ರಗತಿಯನ್ನು ಹೆಚ್ಚಿಸಲು ಬೇಡಿಕೆ ಮತ್ತು ಸಪ್ಲೆ ಎರಡೂ ಕಡೆಗಳಿಂದಲೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. 

13. ದೇಶದ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯನ್ನು ಎತ್ತಿಹಿಡಿಯಬೇಕು

ಇದೀಗ ಜೀವನೋಪಾಯದ ಪ್ರಶ್ನೆಗಳನ್ನು ಸಮಗ್ರವಾಗಿ ಎದುರಿಸಬೇಕಾದ ಸಮಯ.

Donate Janashakthi Media

Leave a Reply

Your email address will not be published. Required fields are marked *