ಆನ್-ಲೈನ್ ಶಿಕ್ಷಣ ಎಂದರೆ ಗಾಳಿಯಲ್ಲಿ ಗೋಪುರಗಳನ್ನು ಕಟ್ಟುವುದೇ ?

ಸ್ವಾತಿ ಮೊಯಿತ್ರಾ*

(ಮೂಲ : www.studentstruggle.in; ಅನು: ಶೃತಿ ದಮ್ಮೂರು)

“ಈ ದಿನಗಳಲ್ಲಿ, ಪ್ರತಿಯೊಬ್ಬರೂ ಸ್ಮಾರ್ಟ್ ಫೋನ್ ಮತ್ತು ಜಿಯೋ ಸಿಮ್ ಅನ್ನು ಹೊಂದಿದ್ದಾರೆ.” ನೀವು ಈ ಸಾಲನ್ನು ಅಥವಾ ಇದರ ಯಾವುದಾದರೂ ಆವೃತ್ತಿಯನ್ನು ಕೇಳಿರಬೇಕು. ನೀವೇ ಇದನ್ನು ಹೇಳಿರಬಹುದು ಸಹ.  ಅಲ್ಲವೇ?

ಭಾರತದ ‘ ಸ್ಮಾರ್ಟ್ ಫೋನ್ ಕ್ರಾಂತಿ’ ಮತ್ತು ಮೊಬೈಲ್ ಇಂಟರ್ನೆಟ್  ಅಗ್ಗದಲ್ಲಿ ಬಹುಜನರಿಗೆ ನಿಲುಕುವ ಬಗ್ಗೆ ಭಾರೀ ಉತ್ಸಾಹವು (ಭಾರತದಲ್ಲಿ ಡೇಟಾ ಬೆಲೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಿದೆ ಮತ್ತು ಇದು ಮುಂದುವರೆದಿದೆ), ಈ ವಿಷಯದ ಬಗ್ಗೆ ಸಾಕಷ್ಟು ಜನಪ್ರಿಯ ಬರವಣಿಗೆಯ ಸಾಮಾನ್ಯ ಅಂಶವಾಗಿದೆ. ಇದರಿಂದಾಗಿ ಈಗ ಜನಸಂಖ್ಯೆಯ ಹೆಚ್ಚಿನ ಭಾಗದ ಜನ  ‘ಡಿಜಿಟಲ್ ವಿಭಜನೆ’ಯ ಕಂದಕವನ್ನು ದಾಟಿ ಜಿಗಿದಿದ್ದಾರೆ ಎಂದು ತಿಳಿಯುವುದು ‘ಸಾಮಾನ್ಯ ಜ್ಞಾನ’ ವಾಗಿ ಹೊರಹೊಮ್ಮಿದೆ.  ವರದಿಗಳ ಪ್ರಕಾರ, ಭಾರತವು ಸುಮಾರು 50 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೊಂದಿದೆ.  ಬಳಕೆದಾರರ ದೊಡ್ಡ ವಿಭಾಗವು ಪ್ರಾಥಮಿಕ ಹಂತ (2ಜಿ/3ಜಿ)ದಲ್ಲಿದ್ದರೂ, 4ಜಿ/ಎಲ್‌.ಟಿ.ಇ ನೆಟ್‌ವರ್ಕ್‌ಗಳಲ್ಲಿ ಸಾಕಷ್ಟು ವಿಸ್ತರಣೆಯನ್ನು ಕಂಡಿದೆ. ಈ ಉತ್ಸಾಹವು ಸಂಪೂರ್ಣವಾಗಿ ನಿರಾಧಾರವಲ್ಲದ್ದಿದ್ದರೂ, ಸ್ಮಾರ್ಟ್ ಫೋನ್ ಕ್ರಾಂತಿ ಎಂಬುದು ಭಾರತದ ಉನ್ನತ ಶಿಕ್ಷಣದ ಭವಿಷ್ಯಕ್ಕಾಗಿ ಹೊಂದಿರುವ ಸಾಧ್ಯತೆಗಳ ಕುರಿತು ತಪ್ಪಾದ ತೀರ್ಮಾನಗಳಿಗೆ ಅನುವು ಮಾಡಿಕೊಟ್ಟಿದೆ. ಕೋವಿದ್-19 ಸಾಂಕ್ರಾಮಿಕವು ಈಗ ಕಟು ವಾಸ್ತವವನ್ನು ಎದುರಿಸಲು ಒತ್ತಾಯಿಸುತ್ತಿದೆ.

ಈ ದತ್ತಾಂಶವನ್ನು ಪರಿಗಣಿಸಿ: ಭಾರತದಲ್ಲಿ ಶಿಕ್ಷಣದ ಕುರಿತಾದ ಸಾಮಾಜಿಕ  ಬಳಕೆಯ 75 ನೇ (ಜುಲೈ 2017-ಜೂನ್ 2018) ಎನ್‌.ಎಸ್.‌ಎಸ್ ಸಮೀಕ್ಷೆಯ ಪ್ರಕಾರ, ಪ್ರಮುಖ ಅಂಶಗಳು ಹೀಗಿವೆ : ಭಾರತದಲ್ಲಿ ಮನೆಯಲ್ಲಿ ಕಂಪ್ಯೂಟರ್ ಬಳಕೆಯು ರಾಷ್ಟ್ರೀಯ ಸರಾಸರಿ ಪ್ರಮಾಣವು 10.7% ರಷ್ಟಿದೆ, ಆದರೆ ಮನೆಗಳಲ್ಲಿ ಇಂಟರ್ನೆಟ್ ಬಳಕೆಯ(ಮೊಬೈಲ್ ಸಂಪರ್ಕಗಳು ಅಥವಾ ಸ್ಥಿರ ಲೈನುಗಳ ಮೂಲಕ) ರಾಷ್ಟ್ರೀಯ ಸರಾಸರಿ 23.8% ರಷ್ಟಿದೆ. ಇದರಲ್ಲಿ ನಗರದಲ್ಲಿನ ಜನಸಂಖ್ಯೆಯು ಸಿಂಹದ ಪಾಲನ್ನು ಹೊಂದಿದೆ, ಅವರ ಕಂಪ್ಯೂಟರ್ ಬಳಕೆಯು 23.4% ರಷ್ಟಿದೆ (ಗ್ರಾಮೀಣ ಭಾರತದಲ್ಲಿ ಕೇವಲ 4.4% ರಷ್ಟಿದೆ) ಮತ್ತು ನಗರಗಳಲ್ಲಿ ಇಂಟರ್ನೆಟ್ ಬಳಕೆಯು 42% ರಷ್ಟಿದೆ (ಇದಕ್ಕೆ  ವಿರುದ್ಧವಾಗಿ ಗ್ರಾಮೀಣ ಭಾರತದಲ್ಲಿ ಕೇವಲ 14.9% ) ದೆಹಲಿಯಲ್ಲಿ ಅತಿ ಹೆಚ್ಚು ಬಳಕೆ ಇದೆ. (ಅಲ್ಲಿ  ‘ಗ್ರಾಮೀಣ’ ಪ್ರದೇಶಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದಿಲ್ಲ, ಏಕೆಂದರೆ ಅವು ಒಂದೇ ನಗರ ಭೂದೃಶ್ಯವನ್ನು ಹೊಂದಿವೆ) ಕಂಪ್ಯೂಟರ್ ಬಳಕೆ 34.9% ಮತ್ತು ನೆಟ್ ಬಳಕೆ 55.9% ಇದೆ. ಪೂರ್ಣ ಪ್ರಮಾಣದ ರಾಜ್ಯಗಳಲ್ಲಿ, ಕಂಪ್ಯೂಟರ್ ಬಳಕೆ 23.5% ಮತ್ತು 51.3% ನೆಟ್ ಬಳಕೆ ಗಳೊಂದಿಗೆ ಕೇರಳವು ಮುಂದಿದೆ.

ಇಂಟರ್ನೆಟ್  ಡೇಟಾ ವೇಗವಾಗಿ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಎನ್.ಎಸ್.ಎಸ್ ನಡೆಸಿದ  76 ನೇ ಸುತ್ತಿನ ಎನ್‌.ಎಸ್.‌ಎಸ್ ಸಮೀಕ್ಷೆಯಲ್ಲಿ ಭಾರತದ ವಿವಿಧ ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕದ ಮತ್ತು ರಾಷ್ಟ್ರೀಯ ಸರಾಸರಿಗಳ ಗಮನಾರ್ಹ ಏರಿಕೆ ಕಾಣುತ್ತದೆ ಎಂದು ಭಾವಿಸಬಹುದು.  ಆದರೆ, ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಅದರಲ್ಲೂ ವಿಶೇಷವಾಗಿ COVID-19 ಬಿಕ್ಕಟ್ಟಿನ ನಂತರ ಆನ್‌-ಲೈನ್ ಶಿಕ್ಷಣದ ಮೇಲೆ ಒತ್ತು ಹೆಚ್ಚಿದ ಹಿನ್ನೆಲೆಯಲ್ಲಿ ಇದು ಸಾಕೇ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.

COVID-19 ಬಿಕ್ಕಟ್ಟಿನಿಂದಾಗಿ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಭೌತಿಕವಾಗಿ ಭಾಗವಹಿಸುವ ತರಗತಿಗಳನ್ನು ಮುಚ್ಚುವಂತೆ ಒತ್ತಾಯಿಸಿದಾಗಿನಿಂದ, ಆನ್‌ಲೈನ್ ಶಿಕ್ಷಣವನ್ನು ತಾತ್ಕಾಲಿಕ ಪರಿಹಾರವಾಗಿ ಕಾಣಲಾಗಿತ್ತು. ಬೇರೆ ಬೇರೆ ವಿಶ್ವವಿದ್ಯಾನಿಲಯಗಳು ಪರಿಸ್ಥಿತಿಯನ್ನು ವಿಭಿನ್ನವಾಗಿ ನಿಭಾಯಿಸಿರಬಹುದು. ಯುಜಿಸಿ ಮತ್ತು ಶಿಕ್ಷಣ ಇಲಾಖೆ (ಎಮ್.‌ಎಚ್.‌ಆರ್‌.ಡಿ) ಆನ್‌-ಲೈನ್ ವಿಧಾನಗಳ ಮೂಲಕ ಪಠ್ಯಕ್ರಮವನ್ನು ಮುಂದುವರೆಸಲು ಪ್ರೋತ್ಸಾಹಿಸಿದೆ.  ಒಬ್ಬ ಶಿಕ್ಷಣ ಕಾರ್ಯಕರ್ತಳಾಗಿ, ಇಂಟರ್ನೆಟ್ ಮತ್ತು ಮನೆಯಲ್ಲಿ ಕಂಪ್ಯೂಟರ್ ಬಳಕೆಯ ಬಗ್ಗೆ ಪ್ರಶ್ನೆಗಳು ನನಗೆ ವಿಶೇಷ ಕಾಳಜಿಯ ವಿಷಯವಾಗಿರಲಿಲ್ಲ, ಆದರೆ COVID-19 ಸಾಂಕ್ರಾಮಿಕವು ನನ್ನನ್ನು – ಮತ್ತು ನನ್ನ ಸ್ಥಾನದಲ್ಲಿರುವ ಅನೇಕರನ್ನು – ಭಾರತದ ಡಿಜಿಟಲ್ ಕಂದಕದ ವಾಸ್ತವಕ್ಕೆ ಮುಖಾಮುಖಿಯಾಗಿಸಿದೆ.  ನಾವು ಜೂಮ್ ಮತ್ತು ಸ್ಕೈಪ್ ಸ್ಟೇಷನ್‌ಗಳನ್ನು ಬಳಸುತ್ತಾ ಆನ್‌ಲೈನ್ ಕಲಿಕೆಯ ಸಂತೋಷವನ್ನು ಮೆಲುಕು ಹಾಕುತ್ತಿದ್ದೇವೆ ಎಂದು ಹೇಳುತ್ತಿದ್ದರೂ, ಹಲವು ಆತಂಕಗಳಿಗೆ ಸಾಕ್ಷಿಯಾಗಬೇಕಾಗಿದೆ.  ದೇಶಾದ್ಯಂತ ನನ್ನ ಸಹ ಅಧ್ಯಾಪಕರು, ತಮ್ಮ ಪಠ್ಯಪುಸ್ತಕಗಳಿಲ್ಲದೆ ಒದ್ದಾಡುತ್ತಿರುವ ಅಥವಾ ಅವರ ಕೈ ಬರಹದ ಅಸೈನ್ ಮೆಂಟ್ ನ್ನು  ಮೊಬೈಲ್ ಸ್ಕ್ಯಾನ್ ಮಾಡಿ ಸಲ್ಲಿಸಬಹುದೇ ಎಂದು ಕೇಳಿದ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದ್ದಾರೆ. ಅಥವಾ ತಮ್ಮ ವೆಬ್‌ಕ್ಯಾಮ್‌ಗಳ ಮೂಲಕ ಎಲ್ಲರಿಗೂ ತಮ್ಮ  ಜರ್ಝರಿತ ಮನೆಗಳ ನೋಟವನ್ನು ನೀಡಲು ಮುಜುಗರಗೊಂಡ ವಿದ್ಯಾರ್ಥಿಗಳ ಕುರಿತು ಹೇಳಿದ್ದಾರೆ.

ನಾನು ಮೆಟ್ರೋಪಾಲಿಟನ್ ನಗರದಲ್ಲಿ, ನಗರದ ಒಂದು ಪ್ರಮುಖ ಸ್ಥಳದಲ್ಲಿ ಇರುವ ಸಾರ್ವಜನಿಕ-ಅನುದಾನದ ಸಂಸ್ಥೆಯಲ್ಲಿ ಕೆಲಸ ಮಾಡುತ್ತೇನೆ ಮತ್ತು ವೈವಿಧ್ಯಮಯ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದೇನೆ.  ಇತರ ಸಾರ್ವಜನಿಕ-ಅನುದಾನಿತ ಸಂಸ್ಥೆಗಳಂತೆ, ಅವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಮೊದಲ ತಲೆಮಾರಿನ ಕಲಿಯುವವರು. ನನ್ನ ತರಗತಿಗಳು ಅವುಗಳ ಜಾತಿ ಮತ್ತು ವರ್ಗ ಸಂಯೋಜನೆಯ ವಿಷಯದಲ್ಲಿ ವೈವಿಧ್ಯಮಯವಾಗಿವೆ. ಪಶ್ಚಿಮ ಬಂಗಾಳದ ಶಾಲೆಗಳು ಮತ್ತು ಕಾಲೇಜುಗಳು ದೇಶದ ಇತರ ಭಾಗಗಳಂತೆ  ಲಾಕ್‌ಡೌನ್ ಅನ್ನು ಅಧಿಕೃತವಾಗಿ ಪ್ರಾರಂಭಿಸುವ ಮೊದಲು ಮುಚ್ಚಲಾಯಿತು. ಪ್ರಪಂಚದಾದ್ಯಂತದ ಸಂಸ್ಥೆಗಳು ಇದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡ ನಂತರ, ಭಾರತದಲ್ಲಿ ಇಂತಹ ಬೆಳವಣಿಗೆಯನ್ನು ನಾನು ನಿರೀಕ್ಷಿಸಿದ್ದೆ.  ಆದರೆ ನನ್ನ ಸಹೋದ್ಯೋಗಿಗಳು ಈ ಆನ್‌ಲೈನ್ ಪರಿವರ್ತನೆಗೆ ಸಾಕಷ್ಟು ಹೆಣಗಾಡಿದರು. ನನ್ನ ವಿದ್ಯಾರ್ಥಿಗಳು ಅಂತರ್ಜಾಲವನ್ನು ಹೇಗೆ ಬಳಸುತ್ತಾರೆ ಎಂಬ ಕಲ್ಪನೆಯನ್ನು ಪಡೆಯುವ ಆಶಯದೊಂದಿಗೆ, ನಾನು ಅವರಿಗೆ ಗೂಗಲ್ ಫಾರ್ಮ್‌ಗಳಲ್ಲಿ ಒಂದು ಸಣ್ಣ ಸಮೀಕ್ಷೆಯನ್ನು ತಯಾರಿಸಿ ಅದನ್ನು ಭರ್ತಿ ಮಾಡಲು ಕೇಳಿದೆ. ನಾನು ಸ್ವೀಕರಿಸಿದ 91 ಉತ್ತರಗಳಲ್ಲಿ (ಒಂದು ಸಣ್ಣ ಸ್ಯಾಂಪಲ್ ಆದರೂ) 69 ವಿದ್ಯಾರ್ಥಿಗಳು ಇಂಟರ್ನೆಟ್ ಪ್ರವೇಶಕ್ಕಾಗಿ ತಮ್ಮ ಮೊಬೈಲ್ ಫೋನ್‌ಗಳನ್ನು ಮಾತ್ರ ಅವಲಂಬಿಸಿದ್ದಾರೆ ಎಂದು ನನಗೆ ಮಾಹಿತಿ ನೀಡಿದರು. ಅವರಲ್ಲಿ ಹೆಚ್ಚಿನವರ ಮನೆಯಲ್ಲಿ ಸ್ಥಿರ ಲೈನ್ ಸಂಪರ್ಕಗಳು ಅಥವಾ ವೈಫೈ ಹೊಂದಿಲ್ಲ ಮತ್ತು ವೈಯಕ್ತಿಕ ಡೇಟಾ ಯೋಜನೆಗಳ ಮೇಲೆ ಅವಲಂಬಿತವಾಗಿದ್ದರು.. ಕೆಲವರು ತಮ್ಮ ಫೋನ್‌ಗಳನ್ನು ಆಗಾಗ ರೀಚಾರ್ಜ್ ಮಾಡುವ ಕಷ್ಟದ ಬಗ್ಗೆ ಸಾಕಷ್ಟು ಚಿಂತಿತರಾಗಿದ್ದರು.

ಸಮೀಕ್ಷೆಯನ್ನು ನೋಡುವಾಗ, ಜೂಮ್ ಅಥವಾ ಮೈಕ್ರೋಸಾಫ್ಟ್ ಟೀಮ್ಸ್  ಅಥವಾ ಗೂಗಲ್ ಹ್ಯಾಂಗ್ ಔಟ್ ಗಳಂತಹ ಅಪ್ಲಿಕೇಶನ್ ಗಳನ್ನು ಆಧರಿಸಿದ ಸಿಂಕ್ರೊನಸ್ ಕಲಿಕೆ ನನ್ನ ತರಗತಿಯಲ್ಲಿ ಸಾಧ್ಯವಿಲ್ಲ; ಅವು ಬಹುಸಂಖ್ಯಾತ ವಿದ್ಯಾರ್ಥಿಗಳನ್ನು ಹೊರಗಿಡುವ ಆಯ್ಕೆಯಾಗುತ್ತದೆ – ಎಂಬುದು  ನನಗೆ ಆ ಸಮಯದಲ್ಲಿ ಸ್ಪಷ್ಟವಾಯಿತು. ಲಾಕ್ಡೌನ್ ಮುಂದುವರೆದಂತೆ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಳಪೆ ನೆಟ್ವರ್ಕ್ ಮತ್ತು ಡೇಟಾ ಬಳಕೆಯ ಕೊರತೆ ಬಗ್ಗೆ ಹಿಂಜರಿಯುತ್ತಾ ಮಾತನಾಡಿದ್ದರಿಂದ ನಾನು ಈ ನಿರ್ಧಾರದಲ್ಲಿ ದೃಡವಾಗಿದ್ದೆ. ನಾನು ಯೂಟ್ಯೂಬ್ ನಲ್ಲಿ ಉಪನ್ಯಾಸಗಳನ್ನು ಅಪ್ಲೋಡ್ ಮಾಡಿದ್ದೇನೆ ಮತ್ತು ಅವುಗಳನ್ನು ಇತರ ಓದುವ ಸಾಮಗ್ರಿಗಳೊಂದಿಗೆ ಗೂಗಲ್ ತರಗತಿಯಲ್ಲಿ ಹಂಚಿಕೊಂಡಿದ್ದೇನೆ. ಅವರು ತಮ್ಮನ್ನು ತಾವು ಸವಾಲು ಮಾಡಬಹುದಾದ ಕಾರ್ಯಯೋಜನೆಗಳನ್ನು ನಾನು ಹೊಂದಿಸಿದ್ದೇನೆ. ನಿಯಮಿತವಾಗಿ ಅವರಿಗೆ ಮಾನಸಿಕ ಆರೋಗ್ಯದ ಮತ್ತು ಸೋಂಕು ರಹಿತವಾಗಿರಿಸಲು ಡಿವೈಸುಗಳ ಮೇಲೆ ನೀಲಿ ಬೆಳಕಿನ ಫಿಲ್ಟರ್‌ಗಳನ್ನು ಹಾಕುವ ಕುರಿತು ಸಲಹೆ ನೀಡುತ್ತಿದ್ದೇನೆ.. ದುರದೃಷ್ಟವಶಾತ್, ಕಡಿಮೆ ಬ್ಯಾಂಡ್‌ವಿಡ್ತ್ ಆಯ್ಕೆಗಳ ಮೂಲಕ ಆನ್‌ಲೈನ್ ಬೋಧನೆ ಸಹ ತಾರತಮ್ಯದಿಂದ ಕೂಡಿತ್ತು. ಏಕೆಂದರೆ ನನ್ನ ವಿದ್ಯಾರ್ಥಿಗಳ ಒಂದು ವಿಭಾಗಕ್ಕೆ ತಮ್ಮ ಯಾವುದೇ ತಪ್ಪಿಲ್ಲದೆ ಸಹ ಈ ಆನ್ಲೈನ್ ಪ್ರವೇಶ ಸಹ ಸಾಧ್ಯವಾಗಲಿಲ್ಲ. ಹೀಗಾಗಿ, ಎಲ್ಲರ ಬೆರಳ ತುದಿಯಲ್ಲಿ ಕಲಿಯಲು ಅನುವು ಮಾಡಿಕೊಡುವ ಸ್ಮಾರ್ಟ್‌ಫೋನ್ ಕ್ರಾಂತಿಯ ಫ್ಯಾಂಟಸಿ ಕೇವಲ ಫ್ಯಾಂಟಸಿ ಯಾಗಿಯೇ ಉಳಿದಿದೆ.  ಉನ್ನತ ಶಿಕ್ಷಣಕ್ಕೆ ಕಂಪ್ಯೂಟರ್ ಸಾಧನಗಳ ಲಭ್ಯತೆ ಮತ್ತು ಸಮಂಜಸವಾದ ಇಂಟರ್ನೆಟ್ ಸಂಪರ್ಕವು ಅತ್ಯಗತ್ಯವಿರುವಾಗ, ಸ್ಮಾರ್ಟ್‌ಫೋನ್ ಕ್ರಾಂತಿಯು ಉನ್ನತ ಶಿಕ್ಷಣದ ಮಟ್ಟಿಗಂತೂ ಯಾವುದೇ ಉದ್ದೇಶವನ್ನು ಪೂರೈಸದ ಒಂದು ವಿಲಕ್ಷಣ ಫ್ಯಾಂಟಸಿಯಷ್ಟೇ ಎಂಬುದು ನನಗೆ ಸ್ಪಷ್ಟವಾಗುತ್ತಾ ಹೋಯಿತು.

ಇಂಟರ್ನೆಟ್ ಸ್ಥಗಿತಗೊಳಿಸುವಿಕೆ ಸಾಮಾನ್ಯವಾಗಿರುವ (ಸಾಂಕ್ರಾಮಿಕದ ಮಧ್ಯದಲ್ಲಿಯೂ ಸಹ ಕಾಶ್ಮೀರದಲ್ಲಿ ಇನ್ನೂ 2 ಜಿ ಸಂಪರ್ಕಗಳಿಗೆ ಮಾತ್ರ ಅವಕಾಶವಿದೆ ಎಂಬುದನ್ನು ನಾವು ಗಮನಿಸಬೇಕು),  ಉತ್ತಮ ಗುಣಮಟ್ಟದ ಟೆಲಿಕಾಂ ನೆಟ್ ವರ್ಕ್  ಇನ್ನೂ ವಿರಳ ಮತ್ತು ಅಪರೂಪವಾಗಿರುವ ಮತ್ತು ಮೊಬೈಲ್ ಫೋನ್ ಗಳನ್ನು ಹೊರತುಪಡಿಸಿ ಬೇರೆ ಯಾವ ಕಂಪ್ಯೂಟರ್ ಸಾಧನಗಳ ಬಳಕೆ ಅಸಾಧ್ಯವಾಗಿರುವ ನಮ್ಮ ದೇಶದಲ್ಲಿ  ಆನ್-ಲೈನ್ ಕಲಿಕೆಯ ಅರ್ಥವೇ ಬಹುಶಃ ಬಹುಪಾಲು ವಿದ್ಯಾರ್ಥಿಗಳನ್ನು ಅದರಿಂದ ಹೊರಗಿಡುವುದು ಎಂದಾಗುತ್ತದೆ.  COVID-19 ಬಿಕ್ಕಟ್ಟು ಅಂತಿಮವಾಗಿ ಕೊನೆಗೊಳ್ಳುತ್ತದೆ, ಆದರೆ ಶಿಕ್ಷಣ ಇಲಾಖೆ (MHRD) ಯ #BharathPhadeOnline (ಭಾರತ್ ಪಡೇ ಆನ್-ಲೈನ್) ಅಭಿಯಾನವು ಆನ್‌ಲೈನ್ ಕಲಿಕೆಯ ಬಗ್ಗೆ ನೀತಿ ನಿರೂಪಕರ ಉತ್ಸಾಹವು COVID-19 ನಂತರದ ಅವಧಿಗೆ ವಿಸ್ತರಿಸುತ್ತದೆ ಎಂದು ಸೂಚಿಸುತ್ತದೆ. ಆದ್ದರಿಂದ, ತಂತ್ರಜ್ಞಾನಕ್ಕೆ ಪ್ರವೇಶವು, ಕೆಲವರ ಕೈಯಲ್ಲಿ ಜ್ಞಾನ ಮತ್ತು ಮಾಹಿತಿಯ ಹಕ್ಕನ್ನು ಮತ್ತಷ್ಟು ಕ್ರೋಡಿಕರಿಸುವ ಭವಿಷ್ಯವನ್ನು ಕಲ್ಪಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.

(*ಸ್ವಾತಿ ಮೊಯಿತ್ರಾ ಕೋಲ್ಕತ್ತಾದ ಕಾಲೇಜಿನಲ್ಲಿ ಇಂಗ್ಲಿಷ್ ಕಲಿಸುತ್ತಾರೆ. ಅವರನ್ನು [email protected] ನಲ್ಲಿ ಸಂಪರ್ಕಿಸಬಹುದು.)

Donate Janashakthi Media

Leave a Reply

Your email address will not be published. Required fields are marked *