– ವಸಂತರಾಜ ಎನ್.ಕೆ
ಕೇರಳ ಸ್ಥಳೀಯ ಚುನಾವಣಾ ಫಲಿತಾಂಶಗಳ ಅಂಕೆಸಂಖ್ಯೆಗಳನ್ನು ಪರಿಶೀಲಿಸಿದರೆ ಯು.ಡಿ.ಎಫ್ ಅತಿ ದೊಡ್ಡ ಕೂಟವಾಗಿ ಹೊಮ್ಮಿದೆ. ಬಿಜೆಪಿ ಸ್ವಲ್ಪ ಮುನ್ನಡೆ ಸಾಧಿಸಿದೆ, ಎಲ್.ಡಿ.ಎಫ್ ಗೆ ಸ್ವಲ್ಪ ಹಿನ್ನಡೆಯಾಗಿದೆ ಎನ್ನಬಹುದು ಅಷ್ಟೇ. ಯು.ಡಿ.ಎಫ್ ನ ಭಾರೀ ವಿಜಯ, ಎನ್.ಡಿ.ಎ ಯ ‘ಚಾರಿತ್ರಿಕ ವಿಜಯ”, “ಎಲ್.ಡಿ.ಎಫ್ ಅವಸಾನ” ಎಂದು ಕರೆಯುವುದು ಹಾಸ್ಯಾಸ್ಪದ.
ಕೇರಳ ಸ್ಥಳೀಯ ಚುನಾವಣಾ ಫಲಿತಾಂಶಗಳು ಬಂದಿವೆ. ಅದರ ಕುರಿತು ಮಾಧ್ಯಮಗಳಲ್ಲಿ ಮತ್ತು ರಾಜಕೀಯ ಚರ್ಚೆಗಳಲ್ಲಿ – ‘ಕೇರಳದಲ್ಲೂ ಎಲ್.ಡಿ.ಎಫ್ ಮತ್ತು ಸಿಪಿಎಂ ಕಥೆ ಮುಗಿಯಿತು’, ‘ಯು.ಡಿ.ಎಫ್/ಕಾಂಗ್ರೆಸ್ ಜಯಭೇರಿ, ಮುಂದಿನ ವಿಧಾನಸಭೆ ಗೆಲುವಿಗೆ ಸಜ್ಜು’ ಮತ್ತು ‘ಎನ್.ಡಿ.ಎ/ಬಿಜೆಪಿ ಗೆ ಚಾರಿತ್ರಿಕ ಭರ್ಜರಿ ವಿಜಯ’ ಎಂದೆಲ್ಲಾ ಹೇಳಲಾಗಿದೆ. ಇವು ಸರಿಯಾದ ತೀರ್ಮಾನಗಳೇ ಎಂದು ಪರಿಶೀಲಿಸೋಣ.
ಮೂರು ಹಂತದ ಪಂಚಾಯತ್ ಸಂಸ್ಥೆಗಳುಳ್ಳ ಕೇರಳದ ಸ್ಥಳಿಯ ಸಂಸ್ಥೆಗಳ ಚುನಾವಣೆಗಳು ನಡೆದವು. ನಗರ ಪ್ರದೇಶಗಳಲ್ಲಿ ಪಟ್ಟಣ/ಸಣ್ನ ನಗರಗಳಿಗೆ ಮುನಿಸಿಪಾಲಿಟಿ ಮತ್ತು ದೊಡ್ಡ ನಗರಗಳಿಗ ಕಾರ್ಪೊರೆಶನ್ ಗೆ ಚುನಾವಣೆಗಳು ನಡೆದವು. 941 ಗ್ರಾಮ ಪಂಚಾಯತುಗಳ 17,337 ವಾರ್ಡುಗಳಿಗೆ, 152 ಬ್ಲಾಕ್ ಪಂಚಾಯತ್ ಗಳ 2267 ವಾರ್ಡುಗಳಿಗೆ, 14 ಜಿಲ್ಲಾ ಪಂಚಾಯತುಗಳ 346 ವಾರ್ಡುಗಳಿಗೆ, 87 ಮುನಿಸಿಪಾಲಿಟಿಗಳ 3249 ವಾರ್ಡುಗಳಿಗೆ, 6 ಕಾರ್ಪೊರೇಶನ್ ಗಳ 421 ವಾರ್ಡುಗಳಿಗೆ ಚುನಾವಣೆಗಳು ನಡೆದವು. ಮತದಾನದ ಪ್ರಮಾಣ 73.69% ಆಗಿದ್ದು ಕಳೆದ ಬಾರಿಗಿಂತ (2020) 2.51 % ರಷ್ಟು ಮತದಾನ ಕಡಿಮೆಯಾಗಿದೆ.
ಚುನಾವಣೆಯಲ್ಲಿ ಮೂರು ಪ್ರಧಾನವಾಗಿ ಮೂರು ಕೂಟಗಳು ಸ್ಪರ್ಧಿಸಿದ್ದವು – ಸಿಪಿಎಂ ನಾಯಕತ್ವದ ಎಡ-ಪ್ರಜಾಸತ್ತಾತ್ಮಕ ರಂಗ (ಎಲ್.ಡಿ.ಎಫ್), ಕಾಂಗ್ರೆಸ್ ನಾಯಕತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (ಯು.ಡಿ.ಎಫ್), ಮತ್ತು ಬಿಜೆಪಿ ನಾಯಕತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್.ಡಿ.ಎ). ಪಕ್ಷೇತರರು ಮತ್ತು ಕೆಲವು ಸಣ್ಣ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದರು.
ಫಲಿತಾಂಶಗಳನ್ನು ಕೋಷ್ಕಕ 1 ಮತ್ತು 2 ರಲ್ಲಿ ಕೊಡಲಾಗಿದೆ. ಕೋಷ್ಟಕ-1ರಲ್ಲಿ ಈ ಮೂರು ಕೂಟಗಳು ಮತ್ತು ಇತರರು ವಿವಿಧ ಸ್ತಳೀಯ ಸಂಸ್ಥೆಗಳಲ್ಲಿ ಎಷ್ಟರಲ್ಲಿ ನಿಚ್ಚಳ ಬಹುಮತ ಪಡೆದವು ಮತ್ತು ಅತಿ ದೊಡ್ಡ ಕೂಟವಾಗಿ ಹೊಮ್ಮಿದವು ಎಂಬ ವಿವರಗಳಿವೆ. ಎಷ್ಟು ಸ್ತಳೀಯ ಸಂಸ್ಥೆಗಳಲ್ಲಿ ಯಾವ ಕೂಟಕ್ಕೂ ನಿಚ್ಚಳ ಬಹುಮತ ಬರದೆ ಅತಂತ್ರವಾಗಿವೆ ಮತ್ತು ಎಷ್ಟು ಸಂಸ್ಥೆಗಳಲ್ಲಿ ಎರಡು ಕೂಟಗಳು ಸಮಬಲ ಹೊಂದಿವೆ ಎಂಬ ಮಾಹಿತಿಯೂ ಇಲ್ಲಿದೆ. ಎಲ್ಲ 4 ಗುಂಪುಗಳು ನಿಚ್ಚಳ ಬಹುಮತ ಪಡೆದ ಮತ್ತು ಅತಂತ್ರವಾದ ಸಂಸ್ಥೆಗಳ ಸಂಖ್ಯೆ ಕೂಡಿಸಿದರೆ ಒಟ್ಟು ಸಂಸ್ಥೆಗಳ ಸಂಖ್ಯೆ ಸಿಗುತ್ತದೆ. ಹಾಗೇನೇ ಎಲ್ಲ 4 ಗುಂಪುಗಳು ಅತಿ ದೊಡ್ಡ ಗುಂಪಾಗಿ ಹೊಮ್ಮಿದ ಮತ್ತು ಎರಡು ಗುಂಪುಗಳು ಸಮಬಲ ಪಡೆದ ಸಂಸ್ಥೆಗಳ ಸಂಖ್ಯೆ ಕೂಡಿಸಿದರೆ ಒಟ್ಟು ಸಂಸ್ಥೆಗಳ ಸಂಖ್ಯೆ ಸಿಗುತ್ತದೆ.
ಇದನ್ನೂ ಓದಿ : ತಿರುವನಂತಪುರದ ಕಾರ್ಪೊರೇಶನ್ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ?

ಕೋಷ್ಟಕ-1 ವಿವಿಧ ಕೂಟಗಳು ಬಹುಮತ ಪಡೆದ ಅಥವಾ ಅತಿದೊಡ್ಡ ಕೂಟವಾದ ಸ್ಥಳೀಯ ಸಂಸ್ಥೆಗಳ ಸಂಖ್ಯೆ
ಮೂಲ : ಕೇರಳ ರಾಜ್ಯ ಚುನಾವಣಾ ಕಮಿಶನ್ (https://trend.sec.kerala.gov.in/)
ಕೋಷ್ಟಕ-2ರಲ್ಲಿ ಈ ಮೂರು ಕೂಟಗಳು ಮತ್ತು ಇತರರ ಗುಂಪು ವಿವಿಧ ಸ್ತಳೀಯ ಸಂಸ್ಥೆಗಳಲ್ಲಿ ಎಷ್ಟು ವಾರ್ಡುಗಳಲ್ಲಿ ಗೆದ್ದವು ಎಂಬ ವಿವರಗಳಿವೆ.

ಕೋಷ್ಟಕ-2 ವಿವಿಧ ಕೂಟಗಳು ಗೆದ್ದ ಸ್ಥಳೀಯ ಸಂಸ್ಥೆಗಳ ವಾರ್ಡುಗಳ ಸಂಖ್ಯೆ
ಮೂಲ : ಕೇರಳ ರಾಜ್ಯ ಚುನಾವಣಾ ಕಮಿಶನ್ (https://trend.sec.kerala.gov.in/)

ಈ ಅಂಕೆಸಂಖ್ಯೆಗಳನ್ನು ಪರಿಶೀಲಿಸಿದರೆ ಈ ಕೆಲವು ಅಂಶಗಳು ಕಂಡು ಬರುತ್ತವೆ :
* ಯು.ಡಿ.ಎಫ್ ಈ ಮೂರು ಕೂಟಗಳಲ್ಲಿ ಹೆಚ್ಚಿನ ಮುನ್ನಡೆ ಸಾಧಿಸಿದೆ ಎಂಬುದು ಸ್ಪಷ್ಟ. ಆದರೆ ಅದನ್ನು ಭಾರೀ ಮುನ್ನಡೆ ಎನ್ನಲು ಸಾಧ್ಯವಿಲ್ಲ. ಗ್ರಾಮ ಪಂಚಾಯತ್, ಮುನಿಸಿಪಾಲಿಟಿ ಮತ್ತು ಕಾರ್ಪೊರೇಶನ್ ನ ಒಟ್ಟು ವಾರ್ಡುಗಳಲ್ಲಿ ಯು.ಡಿ.ಎಫ್ ಗೆದ್ದ ವಾರ್ಡುಗಳ ಸಂಖ್ಯೆ ಅರ್ಧಕ್ಕಿಂತ ಕಡಿಮೆಯಿದೆ.
* ಇದಲ್ಲದೆ ಮೊದಲ ಹಂತದ ಸಂಸ್ಥೆಗಳಾದ ಗ್ರಾಮ ಪಂಚಾಯತ್ ಗಳಲ್ಲಿ ಮೂರನೇ ಒಂದರಷ್ಟು, ಮುನಿಸಿಪಾಲಿಟಿಗಳಲ್ಲಿ ಮೂರನೇ ಒಂದಕ್ಕಿಂತಲೂ ಹೆಚ್ಚು, ಕಾರ್ಪೊರೇಶನ್ ಗಳಲ್ಲಿ ಅರ್ಧದಷ್ಟು ಅತಂತ್ರವಾಗಿವೆ ಅಂದರೆ ಯಾವುದೇ ಕೂಟಕ್ಕೆ ನಿಚ್ಚಳ ಬಹುಮತವಿಲ್ಲ. ಇದರರ್ಥ ಪ್ರಮುಖ ಎರಡು ಕೂಟಗಳ ನಡುವೆ ತೀವ್ರ ಹಣಾಹಣಿಯಿದೆ, ಮೊದಲ ಸ್ಥಾನದಲ್ಲಿರುವ ಕೂಟ ಭಾರೀ ಮುನ್ನಡೆ ಸಾಧಿಸಿಲ್ಲ ಅಂತಲೇ.
* ಉದಾಹರಣೆಗೆ ಯು.ಡಿ.ಎಫ್ 941 ಗ್ರಾಮ ಪಂಚಾಯತ್ ಗಳಲ್ಲಿ 505ರಲ್ಲಿ, 87 ಮುನಿಸಿಪಾಲಿಟಿಗಳಲ್ಲಿ 54ರಲ್ಲಿ ಗೆದ್ದು ಭಾರೀ ಮುನ್ನಡೆ ಸಾಧಿಸಿವೆ ಎಂದು ಮಾಧ್ಯಮಗಳು ಹೇಳಿವೆ. ಆದರೆ ಇದು ಪೂರ್ತಿ ನಿಜವಲ್ಲ. ಯು.ಡಿ.ಎಫ್ 505ರಲ್ಲಿ ಅತಿ ದೊಡ್ಡ ಗುಂಪಾಗಿ ಹೊಮ್ಮಿದೆ, ನಿಚ್ಚಳ ಬಹುಮತ ಪಡೆದದ್ದು 382ರಲ್ಲಿ ಮಾತ್ರ. ಅದೇ ರೀತಿ 54 ಮುನಿಸಿಪಾಲಿಟಿಗಳಲ್ಲಿ ಅತಿ ದೊಡ್ಡ ಗುಂಪಾಗಿ ಹೊಮ್ಮಿದ್ದು 40ರಲ್ಲಿ ಮಾತ್ರ ನಿಚ್ಚಳ ಬಹುಮತ ಪಡೆದಿದೆ.
* ತಿರುವನಂತಪುರ ಕಾರ್ಪೊರೇಶನ್ ನಲ್ಲಿ ಅತಿ ದೊಡ್ಡ ಕೂಟವಾಗಿ ಹೊಮ್ಮಿದ್ದನ್ನು ಇಟ್ಟುಕೊಂಡು “ಬಿಜೆಪಿ/ಎನ್.ಡಿ.ಎ ಚಾರಿತ್ರಿಕ ವಿಜಯ ಸಾಧಿಸಿದೆ” ಎಂದು ಪ್ರಧಾನಿ ಮೋದಿ ಯಿಂದ ಆರಂಭಿಸಿ ಗೋದಿ ಮಾತ್ರವಲ್ಲ “ಮುಖ್ಯವಾಹಿನಿ” ಮಾಧ್ಯಮಗಳು ಸಹ ಹೇಳುತ್ತಿವೆ. “ತಿರುವನಂತಪುರದಲ್ಲಿ ಬಿಜೆಪಿ ಹೇಗೆ ಗೆದ್ದಿತು” ಎಂಬುದರ ಬಗ್ಗೆ ಪ್ರತ್ಯೇಕ ಬರಹ ನೋಡಿ (???.). ಕಾರ್ಪೊರೇಶನ್ ಬಿಟ್ಟರೆ ಇತರ ಎಲ್ಲ ಸ್ತಳೀಯ ಸಂಸ್ಥೆಗಳಲ್ಲಿ ಅದು ಗೆದ್ದ ವಾರ್ಡುಗಳ ಸಂಖ್ಯೆ ಪಕ್ಷೇತರ ಮತ್ತು ಇತರ ಸಣ್ಣ ಪಕ್ಷಗಳ ಹತ್ತಿರವಿದೆ. ಅದು ಒಂದೂ ಬ್ಲಾಕ್ ಅಥವಾ ಜಿಲ್ಲಾ ಪಂಚಾಯತ್ ಗೆದ್ದಿಲ್ಲ. ಇಡೀ ರಾಜ್ಯದಲ್ಲಿ ಕೇವಲ ಒಂದು ಜಿಲ್ಲಾ ಪಂಚಾಯತ್ ವಾರ್ಡ್ (ಕಾಸರಗೋಡು ಜಿಲ್ಲೆಯಲ್ಲಿ) ಗೆದ್ದಿದೆ. ಕಳೆದ ಬಾರಿ 2 ವಾರ್ಡುಗಳಲ್ಲಿ ಗೆದ್ದಿತ್ತು.
*ಇಡೀ ರಾಜ್ಯದಲ್ಲಿ 6 ಗ್ರಾಮ ಪಂಚಾಯತ್ ಗಳನ್ನು ಬಿಟ್ಟರೆ ಬಿಜೆಪಿ/ಎನ್.ಡಿ.ಎ ಕೂಟ ಬೇರೆ ಯಾವುದೇ ಸ್ತಳೀಯ ಸಂಸ್ಥೆಯಲ್ಲಿ ನಿಚ್ಚಳ ಬಹುಮತ ಪಡೆದಿಲ್ಲ. ಕಳೆದ ಬಾರಿ ಗೆದ್ದಿದ್ದ ಪಲಕ್ಕಡ್ ಮುನಿಸಿಪಾಲಿಟಿಯಲ್ಲಿ ಸಹ ನಿಚ್ಚಳ ಬಹುಮತ ಕಳೆದುಕೊಂಡಿದೆ. 2 ಮುನಿಸಿಪಾಲಿಟಿಗಳಲ್ಲಿ ಮತ್ತು 1 ಕಾರ್ಪೊರೇಶನ್ ನಲ್ಲಿ ಅತಿ ದೊಡ್ಡ ಗುಂಪಾಗಿ ಹೊಮ್ಮಿದೆ. ಇದನ್ನು “ಚಾರಿತ್ರಿಕ” ವಿಜಯ ಎನ್ನುವುದಾದರೆ ಯು.ಡಿ.ಎಫ್ ಮತ್ತು ಎಲ್.ಡಿ.ಎಫ್ ಸಾಧನೆಯನ್ನು ಏನೆಂದು ಕರೆಯಬೇಕು?!
ಈ ಅಂಕೆಸಂಖ್ಯೆಗಳನ್ನು ಪರಿಶೀಲಿಸಿದರೆ ಯು.ಡಿ.ಎಫ್ ಅತಿ ದೊಡ್ಡ ಕೂಟವಾಗಿ ಹೊಮ್ಮಿದೆ. ಬಿಜೆಪಿ ಸ್ವಲ್ಪ ಮುನ್ನಡೆ ಸಾಧಿಸಿದೆ, ಎಲ್.ಡಿ.ಎಫ್ ಗೆ ಸ್ವಲ್ಪ ಹಿನ್ನಡೆಯಾಗಿದೆ ಎನ್ನಬಹುದು ಅಷ್ಟೇ. ಯು.ಡಿ.ಎಫ್ ನ ಭಾರೀ ವಿಜಯ, ಎನ್.ಡಿ.ಎ ಯ ‘ಚಾರಿತ್ರಿಕ ವಿಜಯ” ಎಂದು ಕರೆಯುವುದು ಹಾಸ್ಯಾಸ್ಪದ ಬಿಟ್ಟರೆ ಮತ್ತೇನಲ್ಲ.
ಈ ಅಂಕೆಸಂಖ್ಯೆಗಳಿಂದ ಕಳೆದ ಎರಡು ಸ್ಥಳೀಯ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದ ಎಲ್.ಡಿ.ಎಫ್ ಗೆ ಹಿನ್ನಡೆಯಾಗಿದೆ ಎಂಬುದು ಸ್ಪಷ್ಟ. ನಿಚ್ಚಳ ಬಹುಮತ ಪಡೆದ ಅಥವಾ ಅತಿ ದೊಡ್ಡ್ ಗುಂಪಾಗಿ ಹೊಮ್ಮಿದ ಸ್ಥಳೀಯ ಸಂಸ್ಥೆಗಳ ಮತ್ತು ಗೆದ್ದ ವಾರ್ಡುಗಳ ಸಂಖ್ಯೆ ಎರಡರಲ್ಲೂ ಎಲ್.ಡಿ.ಎಫ್ ಗೆ ಹಿನ್ನಡೆಯಾಗಿದೆ. ಆದರೆ ಮತಗಳಿಕೆಯಲ್ಲಿ ಹೆಚ್ಚಿನ ಕುಸಿತವೇನೂ ಕಂಡು ಬಂದಿಲ್ಲ. ಒಂದು ಕಡೆ ಕೇರಳದಲ್ಲಿ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಾದಿ ಹಾಗೂ ಜಾತಿವಾದಿ ಶಕ್ತಿಗಳ ಪ್ರಭಾವ ಕಳವಳಕಾರಿಯಾಗಿ ಹೆಚ್ಚಿದೆ. ಯು.ಡಿ.ಎಫ್ ತನ್ನ ಇದ್ದ ಬದ್ದ ಸೆಕ್ಯುಲರ್ ಧೋರಣೆಗೆ ತಿಲಾಂಜಲಿಯಿತ್ತು, ಈ ಶಕ್ತಿಗಳ ಜತೆ ಶಾಮೀಲಾಗಿ ಅದನ್ನು ರಾಜಕೀಯವಾಗಿ ಬಳಸಲು ಮುಂದಾಗಿದೆ. ಕೋಮುವಾದಿ ಮತ್ತು ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಟದ ಜವಾಬ್ದಾರಿಯನ್ನು ನಿರ್ಲಕ್ಷಿಸಿ ಎಲ್.ಡಿ.ಎಫ್ ಸೋಲಿಸುವುದನ್ನು ಏಕಮಾತ್ರ ಅಜೆಂಡಾ ಮಾಡಿದೆ. ಇದಕ್ಕಾಗಿ ಆಯ್ದ ಕ್ಷೇತ್ರಗಳಲ್ಲಿ ಯು.ಡಿ.ಎಫ್ ಮತ್ತು ಎನ್.ಡಿ.ಎ ಪರಸ್ಪರ ಮತ ವರ್ಗಾವಣೆ (ತಿರುವನಂತಪುರ ಕಾರ್ಪೊರೇಶನ್ ನಲ್ಲಿ ಮಾತ್ರವಲ್ಲ) ಮಾಡಿರುವಂತೆ ಕಾಣುತ್ತದೆ. ಇನ್ನೊಂದು ಕಡೆ ಸ್ತಳೀಯ ಸಂಸ್ಥೆಗಳಲ್ಲೂ ರಾಜ್ಯ ಸರಕಾರದಲ್ಲೂ ಉತ್ತಮ ಸಾಧನೆ ಮಾಢಿದ ಎಲ್.ಡಿ.ಎಫ್ ಈ ಅನಿರೀಕ್ಷಿತ ಹಿನ್ನಡೆಗೆ ಆಡಳಿತಾತ್ಮಕ ಮತ್ತು ಸಂಘಟನಾತ್ಮಕ ಕಾರಣಗಳ ಕುರಿತು ಆತ್ಮವಿಮರ್ಶೆ ಮಾಡುವುದಾಗಿ ಹೇಳಿದೆ.
ಕೇರಳದ ಸಮಾಜದಲ್ಲಿ ಆಗಿರುವ ಸಾಮಾಜಿಕ-ರಾಜಕೀಯ ಬದಲಾವಣೆಗಳ ಪರಿಣಾಮಗಳ ಕುರಿತು ಸಹ ವಿಮರ್ಶೆ ಮಾಡಬೇಕಾಗಿದೆ. ಕೇರಳದ ಪ್ರಬುದ್ಧ ನಾಗರಿಕರ ರಾಜಕೀಯ ಟ್ರೆಂಡ್ ನೋಡಿದರೆ, ಎರಡು ಸತತ ಅವಧಿಗಳಲ್ಲಿ ಸ್ತಳೀಯ ಸಂಸ್ಥೆ ಹಾಗೂ ವಿಧಾನಸಭಾ ಚುನಾವಣೆಗಳಲ್ಲೂ ಎಲ್.ಡಿ.ಎಫ್ ವಿಜಯ ಸಾಧಿಸಿದ ನಂತರ ಈ ಹಿನ್ನಡೆ ತೀರಾ ಆಶ್ವರ್ಯಕರವೇನಲ್ಲ. ಆದರೆ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಇದೇ ಟ್ರೆಂಡ್ ಮುಂದುವರೆಯಬಹುದು ಎಂತಲೂ ಅಲ್ಲ. ಫಲಿತಾಂಶದ ವಿಮರ್ಶೆಯಿಂದ ಸೂಕ್ತ ಪಾಠ ಕಲಿತರೆ ಇದು ಸರಿಪಡಿಸಲಾಗದ ಹಿನ್ನಡೆಯೇನಲ್ಲ.
ಇದನ್ನೂ ನೋಡಿ : ₹ 36 ಸಾವಿರ ವೇತನಕ್ಕೆ ಆಗ್ರಹ: ಗ್ರಾ.ಪಂ. ನೌಕರರ ಪ್ರತಿಭಟನೆ Janashakthi Media
