ತಿರುವನಂತಪುರಂ: ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಕೇರಳ ರಾಜ್ಯದ ಮಾಜಿ ಶಾಸಕ ಮತ್ತು ಜಾತ್ಯತೀತ ಜನಪಕ್ಷಂ ನಾಯಕ ಪಿ.ಸಿ.ಜಾರ್ಜ್ ರನ್ನು ತಿರುವನಂತಪುರ ಪೋರ್ಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಾರ್ಜ್ ರಾಜ್ಯದ ಧಾರ್ಮಿಕ-ಕೋಮು ಸೌಹಾರ್ದತೆಯನ್ನು ಕಲುಷಿತಗೊಳಿಸುವ ಭಾಷಣ ಮಾಡಿದ್ದಾರೆ ಎಂದು ಯೂತ್ ಲೀಗ್, ಡಿವೈಎಫ್‌ಐ, ವೆಲ್ಫೇರ್ ಪಾರ್ಟಿ ಮತ್ತು ಪಾಪ್ಯುಲರ್ ಫ್ರಂಟ್‌ನಂತಹ ಸಂಘಟನೆಗಳು ಪಿ.ಸಿ.ಜಾರ್ಜ್ ವಿರುದ್ಧ ದೂರು ದಾಖಲಿಸಿದ್ದವು. ಧಾರ್ಮಿಕ ವೈಷಮ್ಯ ಹರಡಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಯತ್ನಿಸುತ್ತಿದೆ ಎಂದು ಸಂಘಟನೆಗಳು ಆರೋಪಿಸಿವೆ.
ಶುಕ್ರವಾರ(ಏಪ್ರಿಲ್ 29) ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವಾಗ ಮುಸ್ಲಿಂ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಭಾಷಣ ಮಾಡಿದ್ದ ಪಿ.ಸಿ.ಜಾರ್ಜ್ ವಿರುದ್ದ ಪ್ರಕರಣ ದಾಖಲಾಗಿತ್ತು.
ಇಂದು ಮುಂಜಾನೆ 5 ಗಂಟೆಗೆ ಎರಟ್ಟುಪೆಟ್ಟದಲ್ಲಿರುವ ನಿವಾಸದಲ್ಲಿ ಪಿ.ಸಿ.ಜಾರ್ಜ್ ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಡಿಜಿಪಿ ಅನಿಲ್ ಕಾಂತ್ ಸೂಚನೆಯನ್ವಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಹೇಳಿದ್ದೇನು?: ಶುಕ್ರವಾರ ನಡೆದ ಅನಂತಪುರಿ ಹಿಂದೂ ಮಹಾ ಸಮ್ಮೇಳನದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದ ಪಿ.ಸಿ. ಜಾರ್ಜ್, ‘ಕೇರಳದಲ್ಲಿರುವ ಮುಸ್ಲಿಮೇತರರು ಮುಸ್ಲಿಂ ಸಮುದಾಯದವರು ನಡೆಸುತ್ತಿರುವ ರೆಸ್ಟೋರೆಂಟ್‌ಗಳಿಗೆ ತೆರಳಬೇಡಿ. ತಿರುವನಂತಪುರಂನಲ್ಲಿರುವ ಎಂ.ಎ.ಯೂಸಫಲಿ ಅವರ ಮಾಲ್‌ಗೆ ಹಿಂದೂಗಳು ಹೋಗಬೇಡಿ’ ಎಂದಿದ್ದರು.