ತಿರುವನಂತಪುರಂ: ಕಾಂಗ್ರೆಸ್ನ ಕೇರಳ ಘಟಕದ ಮುಖವಾಣಿ, ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾಲಕತ್ವದ ‘ಜೈಹಿಂದ್ ಟಿವಿ’ಯ ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಶನಿವಾರ ಫ್ರೀಜ್ ಮಾಡಿದೆ ಎಂದು ವರದಿಯಾಗಿದೆ. ಬಾಕಿ ಉಳಿದಿರುವ ತೆರಿಗೆಯ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದ್ದರೂ, ಇದು ರಾಜಕೀಯ ದ್ವೇಷಕ್ಕಾಗಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
“ಕಾಂಗ್ರೆಸ್ ನಾಯಕ, ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಡಿರುವ ಹೂಡಿಕೆಯ ಕಾರಣಕ್ಕೆ ಖಾತೆಗಳನ್ನು ಸ್ಥಗಿತಗೊಳಿಸಿರಬಹುದು. ಐಟಿ ಇಲಾಖೆಯ ಈ ಕ್ರಮ ಪ್ರತೀಕಾರಕವಾಗಿದೆ” ಎಂದು ಜೈಹಿಂದ್ ಟಿವಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಶಿಜು ಹೇಳಿದ್ದಾರೆ.
ಇದನ್ನೂ ಓದಿ:ಅತಿಥಿ ಶಿಕ್ಷಕರ ಅಕ್ರಮ ನೇಮಕ ದಾಖಲೆ ಬಹಿರಂಗಪಡಿಸಿದರೂ ಪ್ರಿನ್ಸಿಪಾಲ್ ಮೇಲೆ ಕ್ರಮವಿಲ್ಲ: SFI ಆಕ್ರೋಶ
“ಏಳು ವರ್ಷಗಳ ಹಿಂದಿನ ಸೇವಾ ತೆರಿಗೆ ಬಾಕಿ ಪ್ರಕರಣದ ಕಾರಣಕ್ಕೆ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಈ ಪ್ರಕರಣದ ವಿಚಾರಣೆ ಪ್ರಸ್ತುತ ಹೈಕೋರ್ಟ್ನಲ್ಲಿ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ. ಇದೀಗ ಜೈ ಹಿಂದ್ ಟಿವಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದಕ್ಕೂ ಮುಂಚೆ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಯೂತ್ ಕಾಂಗ್ರೆಸ್ನ ಬ್ಯಾಂಕ್ ಖಾತೆಗಳನ್ನು ಆದಾಯ ಇಲಾಖೆ ಸ್ಥಗಿತಗೊಳಿಸಿತ್ತು. ಬ್ಯಾಂಕ್ ಅಧಿಕಾರಿಗಳು
ಕೇಂದ್ರ ಸರ್ಕಾರದ ಅಧಿಕಾರಿಗಳ ನಿರ್ದೇಶನಗಳ ಹಿನ್ನೆಲೆಯಲ್ಲಿ ಟಿವಿಯ ಬ್ಯಾಂಕ್ ಖಾತೆಯ ಸ್ಥಗಿತಗೊಳಿಸಲಾಗಿದೆ ಎಂದು ಅಲ್ಪ ವಿವರಗಳನ್ನು ಮಾತ್ರವೆ ಒದಗಿಸಿದ್ದಾರೆ ಎಂದು ಶಿಜು ವಿವರಿಸಿದ್ದಾರೆ. “ನಾವು ಈ ಕ್ರಮದ ಹಿಂದಿನ ಕಾರಣವನ್ನು ಕೋರಿ ಪತ್ರ ಬರೆದಿದ್ದೇವೆ. ಹೀಗಾಗಿ ಎಚ್ಡಿಎಫ್ಸಿ ಬ್ಯಾಂಕ್ ಸಿಜಿಎಸ್ಟಿ ಇಲಾಖೆಯ ಪತ್ರದ ಪ್ರತಿಯನ್ನು ನಮೆಗೆ ನೀಡಿತು” ಎಂದು ಅವರು ಹೇಳಿದ್ದಾರೆ.
“ಕಾನೂನು ಪ್ರಕ್ರಿಯೆಗಳನ್ನು ಪರಿಗಸಿಲ್ಲ. ಇಲಾಖೆಯ ಈ ಕ್ರಮದಿಂಗಾಗಿ ಚಾನಲ್ನ ದೈನಂದಿನ ಕಾರ್ಯಾಚರಣೆಗಳಿಗೆ ಗಮನಾರ್ಹ ಅಡ್ಡಿಯಾಗುತ್ತಿದೆ. ಈ ಹಠಾತ್ ಕ್ರಮ ನಿಜಕ್ಕೂ ದುರದೃಷ್ಟಕರ ಮತ್ತು ಚಾನಲ್ ಅನ್ನು ಬಿಕ್ಕಟ್ಟಿನ ಸ್ಥಿತಿಗೆ ತಳ್ಳಿದೆ” ಎಂದು ಶಿಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬ್ರಿಟಿಷರ ಕಾಲಿಗೆ ಬಿದ್ದ ಸಾವರ್ಕರ್ ದೇಶಭಕ್ತನಾಗಲು ಸಾಧ್ಯವೆ? – ಮೀನಾಕ್ಷಿ ಬಾಳಿ
ಈ ಕ್ರಮದ ಹಿಂದಿನ ಸಂಭಾವ್ಯ ಉದ್ದೇಶವನ್ನು ಎತ್ತಿ ತೋರಿಸಿದ ಶಿಜು ಅವರು, ಜೈಹಿಂದ್ ಟಿವಿಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರಿಂದ ಹೂಡಿಕೆ ವಿವರಗಳನ್ನು ಕೋರಿ ಡಿಸೆಂಬರ್ 22, 2023 ರಂದು ಸ್ವೀಕರಿಸಿದ ನೋಟಿಸ್ ಅನ್ನು ಉಲ್ಲೇಖಿಸಿದ್ದಾರೆ.
ನೋಟಿಸ್ಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳೊಂದಿಗೆ ಟಿವಿಯು ಸಹಕರಿಸಿದೆ. ಅದಾಗ್ಯೂ, ನಂತರ ಕೂಡಾ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಏಜೆನ್ಸಿಗಳಿಂದ ಹಲವಾರು ನೋಟಿಸ್ಗಳನ್ನು ನೀಡಲಾಗಿದೆ ಎಂದು ಚಾನೆಲ್ ಹೇಳಿದೆ.
ಇದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಡಿಕೆ ಶಿವಕುಮಾರ್ ವಿರುದ್ಧದ ರಾಜಕೀಯ ಸೇಡಿನ ಸ್ಪಷ್ಟ ಪ್ರಕರಣ ಎಂಬುದು ಸ್ಪಷ್ಟವಾಗಿದೆ ಎಂದು ಶಿಜು ಆರೋಪಿಸಿದ್ದಾರೆ. “ಭಾರತ ನ್ಯಾಯ ಯಾತ್ರೆಯ ವಿವರಗಳನ್ನು ಪ್ರಸಾರ ಮಾಡುವ ಏಕೈಕ ಚಾನೆಲ್ ನಾವಾಗಿದ್ದು. ಇದಕ್ಕೆ ಅಡ್ಡಿ ಪಡಿಸಲು ಬೇಕಾಗಿ ಅವರು ಇಂತಹ ಕ್ರಮ ಕೈಗೊಂಡಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ಫೆಬ್ರವರಿ 16 ರಂದು ಕಾಂಗ್ರೆಸ್ ಮುಖಂಡ ಅಜಯ್ ಮಾಕನ್ ಅವರು ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. “ಕಾಂಗ್ರೆಸ್ ಪಕ್ಷದ ಖಾತೆಗಳನ್ನೂ ಜಪ್ತಿ ಮಾಡಲಾಗಿದೆ. ಯೂತ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷದಿಂದ 210 ಕೋಟಿ ರೂ. ವಸೂಲಿಗಾಗಿ ಆದಾಯ ತೆರಿಗೆ ಕೇಳಿದೆ. ಕ್ರೌಡ್ ಫಂಡಿಂಗ್ ಮೂಲಕ ಪಕ್ಷಕ್ಕೆ ಬಂದ ಹಣವನ್ನೂ ಸ್ಥಗಿತಗೊಳಿಸಲಾಗಿದೆ. ಚುನಾವಣೆಗೆ ಎರಡು ವಾರಗಳ ಮೊದಲು ಪ್ರತಿಪಕ್ಷಗಳ ಖಾತೆಗಳನ್ನು ಫ್ರೀಜ್ ಮಾಡಿರುವುದು, ಪ್ರಜಾಪ್ರಭುತ್ವವನ್ನು ಫ್ರೀಝ್ ಮಾಡಿರುವುದಕ್ಕೆ ಸರಿ” ಎಂದು ಅವರು ಆರೋಪಿಸಿದ್ದರು.