ಕೇರಳದ ಆರೋಗ್ಯ ಸೇವೆಗೆ ವಿಶ್ವಸಂಸ್ಥೆಯ ಪ್ರಶಸ್ತಿ

 

ತಿರುವನಂತಪುರಂ: ಕೇರಳ ಸರ್ಕಾರ ಮೊದಲ ಬಾರಿಗೆ ವಿಶ್ವಸಂಸ್ಥೆಯ ಈ ವರ್ಷದ ಸಾಂಕ್ರಾಮಿಕವಲ್ಲದ ಕಾಯಿಲೆಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತು UN Interagency Task Force (UNIATF) ಪ್ರಶಸ್ತಿ ಪಡೆದಿದೆ.

ಕೇರಳ ರಾಜ್ಯವು ಸಾಂಕ್ರಾಮಿಕವಲ್ಲದ ಕಾಯಿಲೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಕೊಡುಗೆ ನೀಡಿರುವುದಕ್ಕೆ ಈ ಪ್ರಶಸ್ತಿ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಈ ಪ್ರಶಸ್ತಿ ಘೋಷಿಸಿದ್ದಾರೆ.

2019ರ ಅವಧಿಯಲ್ಲಿ, ಕೇರಳ ಸರ್ಕಾರ ಮಾನಸಿಕ ಆರೋಗ್ಯ, ಎನ್‌ಸಿಡಿ ನಿಯಂತ್ರಣಗಳ ಬಗ್ಗೆ ತೆಗೆದುಕೊಂಡ ಅಭಿವೃದ್ಧಿ ಕ್ರಮಗಳು ಮತ್ತು ಅವುಗಳ ಸಾಧನೆಯನ್ನು ಗುರುತಿಸಲಾಗಿದೆ. “ಈ ಪ್ರಶಸ್ತಿ ಆರೋಗ್ಯ ಕ್ಷೇತ್ರದಲ್ಲಿ ಕೇರಳದ ದಣಿವರಿಯದ ಸೇವೆಗೆ ದಕ್ಕಿದ ಮಾನ್ಯತೆ”  ಎಂದಿರುವ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ರಾಜ್ಯದ ಸಾಧನೆಗಾಗಿ ಎಲ್ಲ ಆರೋಗ್ಯ ಕಾರ್ಯಕರ್ತರನ್ನು ಅವರು ಅಭಿನಂದಿಸಿದರುವಿಶ್ವದ ಏಳು ಆರೋಗ್ಯ ಸಚಿವಾಲಯಗಳಲ್ಲಿ ಕೇರಳವೂ ಸೇರಿದೆ.

ರಾಜ್ಯ ಸರ್ಕಾರವು ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ನೀಡುವ ಎಲ್ಲಾ ಮೂಲಭೂತ ಸೌಕರ್ಯವನ್ನು ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ, ಆಸ್ಪತ್ರೆಗಳಿಗೆ ನೀಡಿತ್ತು. ಸಾಂಕ್ರಾಮಿಕವಲ್ಲದ ರೋಗಗಳ ಮೇಲೆ ಗಮನಹರಿಸಿದ್ದ ಕಾರಣ ಕೊರೊನಾ ಅವಧಿಯಲ್ಲಿ ಸಾವಿನ ಪ್ರಮಾಣವನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಕೊರೊನಾ ವಿರುದ್ಧ ರಾಜ್ಯದ ಹೋರಾಟವನ್ನು ಮುನ್ನಡೆಸಿದ್ದಕ್ಕಾಗಿ ವಿಶ್ವದಾದ್ಯಂತ ಶ್ಲಾಘಿಸಲ್ಪಟ್ಟ ಕೇರಳದ ಆರೋಗ್ಯ ಸಚಿವೆ ಕೆ. ಕೆ. ಶೈಲಾಜಾ ಅವರನ್ನು ಬ್ರಿಟಿಷ್ ನಿಯತಕಾಲಿಕೆ ಪ್ರಾಸ್ಪೆಕ್ಟ್ ವಿಶ್ವದ ‘ಟಾಪ್ ಥಿಂಕರ್-2020’ ಎಂದು ಗೌರವಿಸಿತ್ತು.

ಯುಕೆ ಪತ್ರಿಕೆ ‘ದಿ ಗಾರ್ಡಿಯನ್’ ತನ್ನ ಲೇಖನದಲ್ಲಿ ಸಚಿವೆ ಕೆ. ಕೆ. ಶೈಲಾಜಾ ಅವರನ್ನು ‘ಕೊರೊನಾ ವೈರಸ್ ಸ್ಲೇಯರ್’ ಮತ್ತು ’ರಾಕ್ ಸ್ಟಾರ್ ಆರೋಗ್ಯ ಮಂತ್ರಿ ’ಎಂದು ಶ್ಲಾಘಿಸಿದೆ.

Donate Janashakthi Media

Leave a Reply

Your email address will not be published. Required fields are marked *