ಕೊಚ್ಚಿ: ಕಳೆದ ಕೆಲವೇ ತಿಂಗಳುಗಳಲ್ಲಿ ಕೇಂದ್ರ ಸರಕಾರ ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ಸರಿಸುಮಾರು ರೂ.30ಕ್ಕಿಂತ ಹೆಚ್ಚಿನ ಮೊತ್ತವನ್ನು ತೆರಿಗೆ ಮತ್ತು ಸೆಸ್ ಮೂಲಕ ವಿಧಿಸಿದೆ. ಈಗಿನ ಬೆಲೆ ಕಡಿತ ಏನೇನೂ ಅಲ್ಲ ಎಂದು ಕೇರಳ ಎಡರಂಗ ಸರ್ಕಾರದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲನ್ ಆರೋಪಿಸಿದರು.
ಜನರ ತೀವ್ರ ವಿರೋಧದ ಪರಿಣಾಮವಾಗಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಅಲ್ಪ ಪ್ರಮಾಣದಲ್ಲಿ ಮಾತ್ರ ಇಳಿಸಲು ನಿರ್ಧರಿಸಿದೆ. ಪೆಟ್ರೋಲ್ ಗೆ 5 ರೂ., ಡೀಸೆಲ್ ಗೆ 10 ರೂ. ಇಳಿಕೆಯಾಗಲಿದೆ.
ಇದನ್ನು ಓದಿ: ಜನರ ಆಕ್ರೋಶಕ್ಕೆ ಮಣಿದ ಕೇಂದ್ರ: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ
ಪೆಟ್ರೋಲಿಯಂನ ಅಂತರರಾಷ್ಟ್ರೀಯ ಬೆಲೆ ಏರಿಳಿತಗಳನ್ನು ಲೆಕ್ಕಿಸದೆ ಕೇಂದ್ರವು ವಿಧಿಸುವ ಹೆಚ್ಚುವರಿ ತೆರಿಗೆಗಳು ಭಾರೀ ಪ್ರಮಾಣದಲ್ಲಿಯೇ ಇದೆ. ಅಲ್ಲದೆ, ಏರಿಸಲಾದ ತೆರಿಗೆಗಳನ್ನು ಕೇಂದ್ರವು ರಾಜ್ಯಗಳಿಗೆ ಹಂಚಿಕೆ ದೊಡ್ಡ ಪ್ರಮಾಣದಲ್ಲಿ ಮಾಡಲೂ ಇಲ್ಲ. ಈಗ ದೇಶಾದ್ಯಂತ ಹೆಚ್ಚುತ್ತಿರುವ ಸಾರ್ವಜನಿಕ ಆಕ್ರೋಶದಿಂದ ಮಣಿದ ಕೇಂದ್ರವು ದರ ಕಡಿತದ ನಿರ್ಧಾರಕ್ಕೆ ಬಂದಿದೆ. ಇದು ನಿಜಕ್ಕೂ ಜನರ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.
“ಕಳೆದ ಆರು ತಿಂಗಳಿನಿಂದ ಕೇಂದ್ರವು ಪ್ರತಿ ಗ್ರಾಹಕರಿಂದ ಒಂದು ಲೀಟರ್ ಪೆಟ್ರೋಲ್‌ಗೆ ವಿಶೇಷ ಅಬಕಾರಿ ಸುಂಕ ಮತ್ತು ಸೆಸ್‌ನಂತೆ ಸುಮಾರು 30 ರೂಪಾಯಿಗಳನ್ನು ಸಂಗ್ರಹಿಸುತ್ತಿದೆ. ಕೇಂದ್ರವು ಈ ಹೆಚ್ಚುವರಿ ತೆರಿಗೆ ಸಂಗ್ರಹದಿಂದ ಯಾವುದೇ ಅನುಪಾತದ ಮೊತ್ತವನ್ನು ರಾಜ್ಯಗಳಿಗೆ ನೀಡಿಲ್ಲ. ಅಬಕಾರಿ ದರಗಳನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಕೇರಳವು ಇಂಧನ ಬೆಲೆಯಲ್ಲಿ ಏಕಕಾಲದಲ್ಲಿ ಇಳಿಕೆಗೆ ಸಾಕ್ಷಿಯಾಗಲಿದೆ ಆದರೆ ಹೆಚ್ಚು ಅಲ್ಲ” ಎಂದು ಸಚಿವರು ತಿಳಿಸಿದರು.
“ಕೇಂದ್ರವು ಮನುಷ್ಯನನ್ನು ದರೋಡೆ ಮಾಡಿದ ನಂತರ ಜೇಬುಗಳ್ಳನಂತೆ ಒಂದಷ್ಟು ಮೊತ್ತ ನೀಡುವ ಹಾಗೆ ತೆರಿಗೆ ಕಡಿತಕ್ಕೆ ಮುಂದಾಗಿದೆ. ರಾಜ್ಯವು ನೀಡಬಹುದಾದ ಕಡಿತಕ್ಕೂ ಒಂದಷ್ಟು ಮಿತಿಯೂ ಇದೆ” ಎಂದು ಅವರು ಹೇಳಿದರು.
ಈಗಿರುವ ಕೇಂದ್ರ ತೆರಿಗೆಯ ಜೊತೆಗೆ ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ವಿಶೇಷ ತೆರಿಗೆ ಮತ್ತು ಸೆಸ್ ಎಂದು ವಿಧಿಸುತ್ತಿದ್ದು ಅವುಗಳಲ್ಲಿ ಪ್ರತಿ ಲೀಟರ್ ಗೆ ರೂ.30ರಷ್ಟು ದರವನ್ನು ಕೂಡಲೇ ಕಡಿಮೆ ಮಾಡಿ ಜನರಿಗೆ ನೆರವಾಗಬೇಕು ಎಂದು ಕೆ.ಎನ್.ಬಾಲಗೋಪಾಲ್ ಹೇಳಿದರು.
ಎಡರಂಗ ಮೈತ್ರಿಕೂಟ(ಎಲ್‌ಡಿಎಫ್) ಸರ್ಕಾರವು ಕಳೆದ ಆರು ವರ್ಷಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯ ತೆರಿಗೆಯನ್ನು ಹೆಚ್ಚಿಳ ಮಾಡಿರಲಿಲ್ಲ. ಅಲ್ಲದೆ ಇದೇ ಅವಧಿಯಲ್ಲಿ ಒಮ್ಮೆ ತೆರಿಗೆಯನ್ನು ಕಡಿಮೆ ಮಾಡಿದೆ ಎಂದು ಇದೇ ಸಂದರ್ಭದಲ್ಲಿ ನೆನಪಿಸಿದರು.