– ಸಂವಿಧಾನದ ಅನುಚ್ಛೇಧ 254(2) ಅಡಿ ಕೇಂದ್ರದ ಕಾಯ್ದೆಯನ್ನು ಬೈಪಾಸ್ ಮಾಡಿ ರೈತಪರ ಕಾಯ್ದೆ ರೂಪಿಸಲು ಸಲಹೆ
ನವದೆಹಲಿ: ಯುಪಿಎ ಸರ್ಕಾರ ಆಡಳಿತ ನಡೆಸುತ್ತಿದ್ದಾಗ ಕೇಂದ್ರದ ಕಾನೂನುಗಳನ್ನು ಬೈಪಾಸ್ ಮಾಡಿಸುತ್ತಿದ್ದ ಬಿಜೆಪಿಯ ತಂತ್ರವನ್ನು ಈಗ ಕಾಂಗ್ರೆಸ್ ಬಳಸಿಕೊಳ್ಳುವ ಸೂಚನೆ ನೀಡಿದೆ.
ದೇಶಾದ್ಯಂತ ವಿರೋಧದ ಕಿಚ್ಚು ಹಚ್ಚಿರುವ ಕೃಷಿ ಸಂಬಂಧಿತ ಕಾಯ್ದೆಗಳನ್ನು ಜಾರಿ ಮಾಡದೆ ಜನರ ಭಾವನೆಗಳ ಜೊತೆ ನಿಲ್ಲುವ ನಿರ್ಧಾರ ಮಾಡಿರುವ ಕಾಂಗ್ರೆಸ್ ಅದಕ್ಕಾಗಿ ಸಂವಿಧಾನದ ಅಂಶಗಳನ್ನು ಬಳಸಿಕೊಳ್ಳುತ್ತಿದೆ. ಕೇರಳದ ಎಲ್ಡಿಎಫ್ ಮತ್ತು ಪಂಜಾಬ್ ಕಾಂಗ್ರೆಸ್ ಸರ್ಕಾರ ಮತ್ತು ಕೇರಳ ಕಾಂಗ್ರೆಸ್ ಸಂಸದ ಪ್ರತಾಪನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಸಂಬಂಧಿತ ಮೂರು ಕಾಯ್ದೆಗಳು ಜಾರಿಯಾಗದಂತೆ ಶಾಸನ ರೂಪಿಸಿ ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಪಕ್ಷದ ಆಡಳಿತವಿರುವ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದಾರೆ.
ಈ ರೈತ ವಿರೋಧಿ ಕಾಯ್ದೆಗಳು ಜಾರಿಯಾಗದ ರೀತಿಯಲ್ಲಿ ಮಾರ್ಗೋಪಾಯಗಳನ್ನ ಹುಡುಕುವಂತೆ ಸೋನಿಯಾ ಗಾಂಧಿ ಮನವಿ ಮಾಡಿದ್ದಾರೆಂದು ಕಾಂಗ್ರೆಸ್ ಪಕ್ಷ ಹೇಳಿಕೆ ನೀಡಿದೆ. “ಕೃಷಿ ವಿರೋಧಿ ಎನಿಸುವ ಕೇಂದ್ರದ ಕಾನೂನುಗಳನ್ನ ರಾಜ್ಯಗಳಲ್ಲಿ ತಪ್ಪಿಸಲು ಸಂವಿಧಾನದಲ್ಲಿ ಅವಕಾಶ ಇದೆ. ಸಂವಿಧಾನದ 254(2) ಅಡಿ ಶಾಸನ ರೂಪಿಸುವ ಸಂಭಾವ್ಯತೆ ಬಗ್ಗೆ ಅವಲೋಕಿಸಬೇಕೆಂದು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕಾಂಗ್ರೆಸ್ ಅಧ್ಯಕ್ಷರು ಸಲಹೆ ನೀಡಿದ್ದಾರೆ” ಎಂದು ಕಾಂಗ್ರೆಸ್ ಪಕ್ಷದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ನಿನ್ನೆ ಕರ್ನಾಟಕ ಬಂದ್ ನಡೆದಿತ್ತು. ಪಂಜಾಬ್ ರಾಜ್ಯ ಅಕ್ಷರಶಃ ಹೊತ್ತಿಉರಿಯುತ್ತಿದೆ. ಕಾಂಗ್ರೆಸ್ ಆಡಳಿತ ಇರುವ ಅಲ್ಲಿ ಅತೀ ಹೆಚ್ಚು ವಿರೋಧ ವ್ಯಕ್ತವಾಗಿದೆ. ಎನ್ಡಿಎ ಅಂಗಪಕ್ಷವಾಗಿದ್ದ ಶಿರೋಮಣಿ ಅಕಾಲಿ ದಳ ಕೂಡ ಸರ್ಕಾರದ ವಿರುದ್ಧ ತಿರುಗಿಬಿದ್ದು ಪಂಜಾಬ್ ರೈತರ ಹೋರಾಟಕ್ಕೆ ಕೈಜೋಡಿಸಿದೆ. ರೈತ ವಿರೋಧಿ ಎಂದು ಭಾವಿಸಲಾಗಿರುವ ಕೇಂದ್ರದ ಕೃಷಿ ಕಾಯ್ದೆಗಳನ್ನ ಕಾಂಗ್ರೆಸ್ ಆಡಳಿತದಲ್ಲಿ ಜಾರಿ ಮಾಡದಿರಲು ನಿರ್ಧರಿಸಲಾಗಿದೆ. ಅದಕ್ಕೆ ಪೂರಕವಾಗಿ ಸಂವಿಧಾನದತ್ತ ಅಧಿಕಾರ ಬಳಸಿಕೊಂಡು ಶಾಸನ ರೂಪಿಸಿರಿ ಎಂದು ಸೋನಿಯಾ ಗಾಂಧಿ ಸೂಚಿಸಿದ್ದಾರೆ.
ಸಂವಿಧಾನದಲ್ಲಿರುವ 245(2) ವಿಧಿಯಲ್ಲಿ ಕೇಂದ್ರದ ಕಾನೂನನ್ನು ಪಾಲಿಸದಿರುವ ಅವಕಾಶವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ. ಯುಪಿಎ ಸರ್ಕಾರ ಇದ್ದಾಗ ಜಾರಿಯಾಗಿದ್ದ ಭೂಸ್ವಾಧೀನ ಕಾನೂನನ್ನು ಬೈಪಾಸ್ ಮಾಡುವಂತೆ ದಿವಂಗತ ಅರುಣ್ ಜೇಟ್ಲಿ ಅವರು ಇದೇ ಸಂವಿಧಾನದ ಅಂಶವನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ್ದರು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳುತ್ತಾರೆ.
ಇದೇ ಅಕ್ಟೋಬರ್ 2ರ ಗಾಂಧಿ ಜಯಂತಿಯನ್ನು ಕಾಂಗ್ರೆಸ್ ಪಕ್ಷ ‘ರೈತರು-ಕಾರ್ಮಿಕರನ್ನು ಉಳಿಸಿ’ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ. ಆ ದಿನ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಹಾಗೂ ಜಿಲ್ಲೆಗಳ ಕಚೇರಿಗಳಲ್ಲಿ ಧರಣಿ ಮತ್ತು ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲು ತೀರ್ಮಾನಿಸಿದೆ.