ಬೆಂಗಳೂರು: ಕಳೆದ ಎರಡು ವರ್ಷಗಳ ಹಿಂದೆ ಬಹುದೊಡ್ಡ ಹೋರಾಟ ದೆಹಲಿ ಗಡಿಯಲ್ಲಿ ನಡೆದಿತ್ತು. ಕೇಂದ್ರ ಸರಕಾರವನ್ನು ಅಲಗಾಡಿಸಿದ ಹೋರಾಟ ಇದು. ರೈತ ವಿರೋಧಿಯಾಗಿದ್ದ ಮೂರು ಕೃಷಿಕಾಯ್ದೆಗಳನ್ನು ರದ್ದುಗೊಳಿಸಿದ ಹೋರಾಟ ಅದಾಗಿತ್ತು. ಈ ಹೋರಾಟ ರೈತರ ಒಗ್ಗಟ್ಟಿನ ಶಕ್ತಿಯನ್ನು ಪ್ರದರ್ಶಿಸಿತು. ಸಮರಶೀಲ ಹೋರಾಟದಿಂದ ಕೇಂದ್ರದ ಬಿಜೆಪಿ ಸರ್ಕಾರವನ್ನೇ ನಡುಗುವಂತೆ ಮಾಡಲಾಯಿತು ಎಂದು ದರ್ಶನ್ ಪಾಲ್ ಹೇಳಿದರು.
ಇಂದು (ಫೆಬ್ರವರಿ 16) ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಹಮ್ಮಿಕೊಂಡ ಸಮಸ್ತ ಜನ ಚಳುವಳಿಗಳ ಸಂಯುಕ್ತ ದನಿಯಾಗಿ ʻಜನಾಗ್ರಹ ಸಮಾವೇಶʼವನ್ನು ಉದ್ದೇಶಿಸಿ ರಾಷ್ಟ್ರೀಯ ಹೋರಾಟಗಾರ, ರೈತ ಮುಖಂಡ ದರ್ಶನ್ ಪಾಲ್ ಮಾತನಾಡಿ, ಕೃಷಿ ಕಾಯ್ದೆಗಳ ರದ್ದತಿ ಆಗ್ರಹಿಸಿ ರೈತರು ನಡೆಸಿದ ಹೋರಾಟದಲ್ಲಿ 740 ಜನ ರೈತರು ಹುತಾತ್ಮರಾದರು. ಹೋರಾಟವನ್ನು ಹತ್ತಿಕ್ಕಲು ಲಖಿಂಪುರಿ ಸೇರಿದಂತೆ ಹಲವೆಡೆ ರೈತರ ಮೇಲೆ ಕಗ್ಗೊಲೆ ನಡೆಯಿತು. 2023 ಹಾಗೂ 2024 ನಮಗೆ ಮಹತ್ವದ ದಿನಗಳಾಗಿವೆ. ಚುನಾವಣೆಗಳಲ್ಲಿ ಸರಕಾರಗಳನ್ನು ಸೋಲಿಸಬೇಕು. ರೈತರಷ್ಟೆ ಅಲ್ಲದೆ ಎಲ್ಲರನ್ನು ಒಳಗೊಂಡ ಜನಪ್ರವಾಹದ ಹೋರಾಟ ರೂಪಗೊಳ್ಳಲಿದೆ ಎಂದು ಹೇಳಿದರು.
ಇದನ್ನು ಓದಿ: ರೈತ ಹೋರಾಟಕ್ಕೆ ಸಂದ ಭಾರೀ ಜಯ: ಸಂಯುಕ್ತ ಹೋರಾಟ ಕರ್ನಾಟಕ ಹರ್ಷ
ಬಿಬಿಸಿ ಮೇಲೆ ದಾಳಿ ನಡೆದಿದೆ. ಮೋದಿ, ಷಾ, ಆದಾನಿಯವರನ್ನು ಪ್ರಶ್ನಿಸಿದರೆ ದೇಶದ್ರೋಹ ಎಂದೆನ್ನುತ್ತಾರೆ. ಅವರ ಬಗ್ಗೆ ಮಾತನಾಡಿದರೆ ಜೈಲಗಟ್ಟುತ್ತಾರೆ. ಇದು ಸರ್ವಾಧಿಕಾರಿ ಸರಕಾರವಾಗಿದೆ. ಹಾಗಾಗಿ ಈ ಸರಕಾರಗಳನ್ನು ಸೋಲಿಸಲು ಪಣ ತೊಡಬೇಕಿದೆ. ಅದಕ್ಕಾಗಿ ಬಲವಾದ ಜನಾಂದೋಲನ ನಡಯಬೇಕು ಎಂದು ಕರೆ ನೀಡಿದರು.
ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ರಾಜ್ಯ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಮಾತನಾಡಿ, ಸರಕಾರಗಳು ರೈತರ ಜೊತೆ ಚಲ್ಲಾಟವಾಡುತ್ತಿವೆ. ಜನರ ಸಂಕಷ್ಟಗಳಿಗೆ ಸ್ಪಂದಿಸದ ಸರಕಾರ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಜನರ ಬಾಳಿಗೆ ಕಂಟಕವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ರೈತರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಕಾರ್ಮಿಕರು, ವಿದ್ಯಾರ್ಥಿ, ಯುವಜನರು, ಮಹಿಳೆಯರು, ಕೂಲಿಕಾರರ ಜೊತೆಗೂಡಿ ಜನವಿರೋಧಿ ಸರಕಾರಗಳನ್ನು ಸೋಲಿಸಲಿದ್ದಾರೆ ಎಂದರು.
ಇದನ್ನು ಓದಿ: ದೇಶದ ರೈತ ಬಾಂಧವರಿಗೆ ಪ್ರಧಾನಿ ನೀಡಿದ ಭರವಸೆ ಇನ್ನೂ ಈಡೇರಿಲ್ಲ: ಸಂಯುಕ್ತ ಕಿಸಾನ ಮೋರ್ಚಾ
ಕರ್ನಾಟಕ ರಾಜ್ಯ ರೈತ ಸಂಘ(ಕೆಆರ್‌ಆರ್‌ಎಸ್)ದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಜನಾಗ್ರಹ ಸಮಾವೇಶದ 12 ಹಕ್ಕೋತ್ತಾಯಗಳನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಎಚ್.ಆರ್. ಬಸವರಾಜಪ್ಪ, ನೂರ್ ಶ್ರೀಧರ್, ದೇವಿ, ಮಾವಳ್ಳಿ ಶಂಕರ್, ಜಿ.ಎನ್. ನಾಗರಾಜ್, ಡಾ. ಸಿದ್ದನಗೌಡ ಪಾಟೀಲ್, ಎಚ್.ಪಿ. ಶಿವಪ್ರಕಾಶ್, ಗುರುಪ್ರಸಾದ್ ಕೆರೆಗೋಡು, ಕುಮಾರ್ ಸಮತಳ, ಚಾಮರಸ ಮಾಲೀಪಾಟೀಲ್, ಡಿ.ಎಚ್ ಪೂಜಾರ್ ಇದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ