ಬೆಂಗಳೂರು: ಜ, 05: ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮಾತೇ ಇಲ್ಲ ಎಂದಿರುವ ಕೇಂದ್ರ ಸರ್ಕಾರ, ರೈತರ ಪಾಲಿಗೆ ಶಾಪಗ್ರಸ್ತ ಸರ್ಕಾರವಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡುರಾವ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೇಂದ್ರ ಸರಕಾರದ ಮೂರು ಕೃಷಿ ಕಾನೂನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ 41 ದಿನಗಳು ಕಾಲ ಕಳೆದಿದೆ. ರೈತರು ಮತ್ತು ಸರಕಾರದ ನಡುವೆ ಇಲ್ಲಿಯವರೆಗೆ 7 ಸುತ್ತಿನ ಮಾತುಕತೆಗಳು ನಡೆದಿವೆ. ಕೃಷಿಕಾಯ್ದೆ ರದ್ದು ಮಾಡುವ ಸೂಚನೆಯನ್ನು ಕೇಂದ್ರ ಸರಕಾರ ತೋರುತ್ತಿಲ್ಲ. ಬದಲಾಗಿ ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಉದ್ಧಟತನ ತೋರುತ್ತಿದೆ ಎಂದು ಆಪಾದಿಸಿದ್ದಾರೆ.
ಕೇಂದ್ರ ಸರಕಾರ ರೈತರನ್ನು ಅವಮಾನಿಸುತ್ತಿದೆ. ಜಗತ್ತಿಗೆ ಅನ್ನ ನೀಡುವ ರೈತನಿಗೆ ಸಂಕಷ್ಟ ಬಂದಿದೆ. ಮಳೆ, ಚಳಿಯನ್ನೂ ಲೆಕ್ಕಿಸದೆ ದೆಹಲಿಯಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಕೃಷಿ ಕಾನೂನನ್ನು ರದ್ದುಗೊಳಿಸುವ ಬದಲಾಗಿ ಪದೇ ಪದೇ ಸಭೆ ಕರೆಯೋದು ಯಾಕೆ? ಇದು ರೈತರನ್ನು ವಂಚಿಸುವ ಯತ್ನವಾಗಿದೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.