ಕೇಂದ್ರದ ಸಚಿವರುಗಳಿಂದಲೇ ಕೋವಿಡ್ ನಿಯಮಗಳ ಉಲ್ಲಂಘನೆ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ

ಬೆಂಗಳೂರು: ‘ಕೇಂದ್ರದ ಬಿಜೆಪಿ ನೇತೃತ್ವದ ಸಚಿವರುಗಳೇ ಕಾನೂನುಗಳನ್ನು ಉಲ್ಲಂಘಿಸುತ್ತಿದ್ದಾರೆ. ಕೋವಿಡ್ ಮಾರ್ಗಸೂಚಿಗಳು ಕಠಿಣವಾಗಿದ್ದರೂ ಸಹ ಅವರಿಗೆ ಮಾತ್ರ ಅನ್ವಯವಾಗುವುದಿಲ್ಲವೇ? ಬಿಜೆಪಿಯವರಿಗೊಂದು ಕಾನೂನು, ಜನಸಾಮಾನ್ಯರು ಮತ್ತು ವಿರೋಧ ಪಕ್ಷದವರಿಗೆ ಬೇರೆ ಬೇರೆ ಕಾನೂನುಗಳು ಇವೆಯೇ?’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ ಅವರು ಪ್ರಶ್ನಿಸಿದರು.

ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ರಾಮಲಿಂಗಾರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ‘ರಾಜ್ಯದಿಂದ ಆಯ್ಕೆಯಾದ ನಾಲ್ವರು ಕೇಂದ್ರ ಸಚಿವರು ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದಾರೆ. ಯಾತ್ರೆ ಮಾಡಲಿ ಆದರೆ, ಕೋವಿಡ್ ಪಿಡುಗು ನಿಯಂತ್ರಣ ಮಾರ್ಗಸೂಚಿಗಳು ಅವರಿಗೆ ಅನ್ವಯವಾಗುವುದಿಲ್ಲವೇ? ಕೇಂದ್ರ ಸಚಿವರಾದ ಖೂಬಾ ಅವರಿಂದ ಹಿಡಿದು, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ  ಅವರು 700-800 ಕಿ.ಮೀ. ನಷ್ಟು ಜನಾಶೀರ್ವಾದ ಯಾತ್ರೆ ಮಾಡಿದ್ದಾರೆ. ಇವರು ಹೋದಲ್ಲೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಸಭೆ ಸಮಾರಂಭ ಮಾಡಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ. ಇವರ ವಿರುದ್ಧ ಪೊಲೀಸರು ಯಾವ ಪ್ರಕರಣವನ್ನು ದಾಖಲಿಸಿಲ್ಲ ಯಾಕೆ?’ ಎಂದು ಪ್ರಶ್ನಿಸಿದರು.

‘ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮ ಆಚರಿಸಲು ಸರ್ಕಾರ ಅನುಮತಿ ನಿರಾಕರಿಸಿತ್ತು. ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಅವರ 300 ಬೆಂಬಲಿಗರ ವಿರುದ್ಧ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ಆ ಮೂಲಕ ಬಿಜೆಪಿ ನಾಯಕರು ಕಾನೂನಿಗಿಂತ ದೊಡ್ಡವರು ಎಂಬಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಪೊಲೀಸ್ ಅಧಿಕಾರಿಗಳು ಕೂಡ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಕೇಂದ್ರ ಸಚಿವ ಖೂಬಾ ಯಾದಗಿರಿಗೆ ಆಗಸಮಿಸಿದ ಸಂದರ್ಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತ ಕೋರಲಾಯಿತು. ಆದರೆ ಈ ಪ್ರಕರಣದಲ್ಲೂ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಗೃಹಮಂತ್ರಿಗಳು ಇದು ಸಂಪ್ರದಾಯ ಎಂದು ಸಮರ್ಥಿಸಿಕೊಂಡಿದ್ದಾರೆ. ಎಲ್ಲವೂ ಸಂಪ್ರದಾಯವೇ ಆದರೆ, ಈ ಮಾರ್ಗಸೂಚಿ, ಕಾನೂನು ಎಲ್ಲ ಯಾಕೆ ಬೇಕು? ಎಲ್ಲವನ್ನು ತೆಗೆದುಹಾಕಿ. ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ತಾವೇ ಗುಂಡು ಹಾರಿಸಿದ ಫೋಟೋ ಮಾಧ್ಯಮಗಳಲ್ಲಿ ಬಂದಿದ್ದು, ಅವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ?’ ಎಂದರು.

ಬಿಜೆಪಿ ಸರ್ಕಾರದ ಈ ನಡೆಯಿಂದಾಗಿ ಕಾನೂನು ಇದೆಯೋ, ಇಲ್ಲವೋ ಎಂಬ ಪ್ರಶ್ನೆ ಮೂಡುತ್ತಿದೆ. ವಿನಯ್ ಕುಲಕರ್ಣಿ ಅವರ ಮೇಲೆ ಪ್ರಕರಣ ದಾಖಲಿಸಿರುವುದು ತಪ್ಪು ಎಂದು ಹೇಳುತ್ತಿಲ್ಲ. ಕಾನೂನು ಉಲ್ಲಂಘನೆ ಮಾಡಿದರೆ ಯಾರೇ ಆಗಲಿ, ನಾವಾದರೂ ಸರಿ ನಮ್ಮ ಮೇಲೆ ಕೇಸ್ ಹಾಕಲಿ. ಆದರೆ, ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಯಾಕೆ ಪ್ರಕರಣ ದಾಖಲಿಸುತ್ತಿಲ್ಲ? ವಿನಯ್ ಕುಲಕರ್ಣಿ ಅವರನ್ನು ಸ್ವಾಗತ ಮಾಡಿರುವುದರ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಅವರ ನಾಯಕರಾದ ಬಿ.ಎಸ್ ಯಡಿಯೂರಪ್ಪ, ಜನಾರ್ದನ ರೆಡ್ಡಿ ಅವರು ಜೈಲಿನಿಂದ ಬಿಡುಗಡೆಯಾದ ಮೇಲೆ ಎರಡು ಕೈಗಳಲ್ಲಿ ವಿಕ್ಟರಿ ಸನ್ನೆ ಮಾಡುತ್ತಾ ಹೊರಬರಲಿಲ್ಲವೇ?’ ಎಂದರು.

Donate Janashakthi Media

Leave a Reply

Your email address will not be published. Required fields are marked *