- ಭ್ರಷ್ಟಾಚಾರ ಆರೋಪಕ್ಕೆ ಸಾಕ್ಷಿಗಳಿಲ್ಲ ಎಂದ ಬಿಜೆಪಿ ನಾಯಕನಿಂದ ಕೋರ್ಟ್‍ನಲ್ಲಿ ಕ್ಷಮೆಯಾಚನೆ
ದೆಹಲಿ: ಆಮ್ ಆದ್ಮಿ ಪಕ್ಷದ ಸಚಿವ ಸತ್ಯಂದರ್ ಜೈನ್ ವಿರುದ್ಧ ಆಕ್ಷೇಪಾರ್ಹ ಟೀಕೆ ಮಾಡಿದ್ದ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಬೇಷರತ್ ಕ್ಷಮೆ ಕೇಳಿದ್ದಾರೆ. ಹಾಗಾಗಿ ಅವರ ಮೇಲಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ದೆಹಲಿ ಕೋರ್ಟ್ ಅಂತ್ಯಗೊಳಿಸಿದೆ.
2017 ರಲ್ಲಿ ಕಪಿಲ್ ಮಿಶ್ರಾ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದರ್ ಜೈನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು, “ಸತ್ಯೇಂದರ್ ಜೈನ್ 2 ಕೋಟಿ ರೂ ಲಂಚ ಪಡೆದಿದ್ದಾರೆ. ಅರವಿಂದ್ ಕೇಜ್ರಿವಾಲ್ ಸಂಬಂಧಿಯೊಬ್ಬರಿಗೆ 50 ಕೋಟಿ ಮೌಲ್ಯದ ಆಸ್ತಿ ಪರಬಾರೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಇದಕ್ಕಾಗಿ ಸತ್ಯಂದರ್ ಜೈನ್ ಜೈಲಿಗೆ ಹೋಗುತ್ತಾರೆ” ಎಂದು ಮಿಶ್ರಾ ಘೋಷಿಸಿದ್ದರು.
ಈ ಕುರಿತು ಸತ್ಯಂದರ್ ಜೈನ್‌ರವರು ಕಪಿಲ್ ಮಿಶ್ರಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಶಾಲ್ ಪಹುಜಾ ಎದುರು ತಪ್ಪೊಪ್ಪಿಕೊಂಡ ಕಪಿಲ್ ಮಿಶ್ರಾ ತಾನು ಮಾಡಿರುವ ಆರೋಪಕ್ಕೆ ತನ್ನ ಬಳಿ ಯಾವುದೇ ಆಧಾರಗಳಿಲ್ಲ ಎಂದು ಒಪ್ಪಿಕೊಂಡಿದ್ದರು. ಅಲ್ಲದೆ, ಈ ಸಂಬಂಧ ಲಿಖಿತವಾಗಿಯೂ ಕೋರ್ಟ್ಗೆ ಮಾಹಿತಿ ನೀಡಿದ್ದರು. ಹೀಗಾಗಿ ಕೋರ್ಟ್ನಲ್ಲೇ ಅವರು ತಮ್ಮ ಆಧಾರ ರಹಿತ ಆರೋಪಕ್ಕೆ ಬೇಷರತ್ ಕ್ಷಮೆ ಕೇಳಲು ಒಪ್ಪಿಕೊಂಡಿದ್ದಾರೆ.
ಕ್ಷಮೆ ಕೇಳಲು ಒಪ್ಪಿಕೊಂಡ ನಂತರ ದೂರುದಾರರಾದ ಸತ್ಯಂದರ್ ಜೈನ್ ಸಹ ತಮ್ಮ ದೂರನ್ನು ಹಿಂಪಡೆಯಲು ಒಪ್ಪಿದರು. ನಂತರ ಪ್ರಕರಣವನ್ನು ಅಂತ್ಯಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಕ್ಷಮೆಯಾಚಿಸದೇ ಇದ್ದಲ್ಲಿ ಈ ಅಪರಾಧಕ್ಕಾಗಿ ಎರಡು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅಧಿಕಾರ ಕೋರ್ಟ್‌ಗಿತ್ತು