ಕಲಬುರಗಿ: ಆಳಂದ ತಾಲೂಕಿನಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹುಡುಗಿಯನ್ನು ಚುಡಾಯಿಸಿದ ಎಂದು ಅಗಸ್ಟ್ 2ರಂದು ವಿವಿ ಆವರಣದ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ವಿಶ್ವವಿದ್ಯಾಲಯದ ಮೆಸ್ ಮತ್ತು ಆವರಣದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ಮಾಡುತ್ತಿರುವುದು ಹಾಗೂ ಕೆಲವರ ಮೇಲೆ ಆಕ್ರೋಶಗೊಂಡಿರುವುದನ್ನು ವಿಡಿಯೊ ಮಾಡಿಕೊಂಡ ಕೆಲವರು ಅವುಗಳನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ನಲ್ಲಿ ಹರಿದಾಡುತ್ತಿವೆ.
ವಿದ್ಯಾರ್ಥಿಯೊಬ್ಬನನ್ನು ನೆಲಕ್ಕೆ ಉರುಳಿಸಿದ ಕೆಲವು ಆತನನ್ನು ಹಲ್ಲೆ ಮಾಡುತ್ತಿರುವುದು, ಕೆಡವಿ ಕೆಲವರು ಮತ್ತೊಬ್ಬ ವಿದ್ಯಾರ್ಥಿಯ ಕೂದಲು ಹಿಡಿದು ಹಲ್ಲೆ ಮಾಡುತ್ತಿರುವುದು 25 ಸೆಕೆಂಡ್ನ ವಿಡಿಯೊವೊಂದರಲ್ಲಿ ದಾಖಲಾಗಿದೆ. ಮತ್ತೊಂದು ವಿಡಿಯೊದಲ್ಲಿ ಪುಂಡರಂತೆ ವರ್ತಿಸಿದ ವಿದ್ಯಾರ್ಥಿಗಳು ರಸ್ತೆಯಲ್ಲಿ ತಿರುಗಾಡಿ ಭೀತಿ ಹುಟ್ಟಿಸಿದ ದೃಶ್ಯಗಳೂ ಕಂಡು ಬಂದಿದೆ.
ದೆಹಲಿ ಮೂಲದ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ವಿದ್ಯಾರ್ಥಿಯೊಬ್ಬ ಚುಡಾಯಿಸಿ ಕಿರುಕುಳ ನೀಡಿದ್ದಾನೆ ಎಂದು ವಿದ್ಯಾರ್ಥಿಗಳು ದೂರಿದ್ದು, ಕಿರುಕುಳಕ್ಕೆ ಒಳಗಾದ ವಿದ್ಯಾರ್ಥಿನಿ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರಿಗೆ ಮೌಖಿಕ ದೂರು ನೀಡಿದ್ದಾಳೆ ಎಂದು ಹೇಳಲಾಗಿದೆ.
ಈ ಕುರಿತು ವಿಶ್ವವಿದ್ಯಾಲಯದ ಶಿಸ್ತು ಸಮಿತಿ ತನಿಖೆ ನಡೆಸುತ್ತಿದೆ. ಕೇರಳ, ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ, ದೆಹಲಿ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಾಗಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಡೋಣೂರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಭಾಷೆ, ಧರ್ಮ, ಸಿದ್ಧಾಂತದ ವಿಚಾರಕ್ಕೆ ಸಂಬಂಧಿಸಿ ಜಗಳವಾಡಿದ ಬಗ್ಗೆ ಮಾಹಿತಿ ಇಲ್ಲ. ವೈಯಕ್ತಿಕ ಕಾರಣಗಳಿಗಾಗಿ ಜಗಳ ನಡೆದಿರಬಹುದು. ವರದಿ ಬಂದ ಬಳಿಕ ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.