ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ರಾಜ್ಯದ ವಿವಿಧ ಮಂಡಳಿಗಳು ಮತ್ತು ನಿಗಮಗಳಿಗೆ ನಡೆಸುತ್ತಿರುವ ಪರೀಕ್ಷೆಗಳಲ್ಲಿ ಅನುಸರಿಸಬೇಕಾದ ಡ್ರೆಸ್ ಕೋಡ್ ಕುರಿತು ಸ್ಪಷ್ಟೀಕರಣ ನೀಡಿರುವ ಉನ್ನತ ಶಿಕ್ಷಣ ಸಚಿವ ಎಂ. ಸಿ. ಸುಧಾಕರ್, “ಪರೀಕ್ಷೆ ವೇಳೆ ಹಿಜಾಬ್ ಧರಿಸುವುದಕ್ಕೆ ನಿಷೇಧವಿಲ್ಲ” ಎಂದು ಮಂಗಳವಾರ ಹೇಳಿದ್ದಾರೆ. ಪರೀಕ್ಷೆ ವೇಳೆ ಹಿಜಾಬ್ ನಿಷೇಧ ಮಾಡಿರುವ ಬಗ್ಗೆ ಕಳೆದ ಮಂಗಳವಾರ KEA ಘೋಷಿಸಿತ್ತು.
ಕೆಇಎ ಹಿಜಾಬ್ ನಿಷೇಧಿಸಿ ಆದೇಶಿಸಿದ ನಂತರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವಾರು ರಾಜಕಾರಣಿಗಳು ತೀವ್ರವಾಗಿ ಟೀಕೆ ಮಾಡಿದ್ದರು. ಇದರ ನಂತರ, ಸಚಿವರು ಈ ವಿವಾದದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಇದನ್ನೂ ಓದಿ: ಹಿರಿಯ ಸಿಪಿಐ(ಎಂ) ನಾಯಕ, ಸ್ವಾತಂತ್ಯ್ರ ಹೋರಾಟಗಾರ ಎನ್. ಶಂಕರಯ್ಯ (102) ನಿಧನ
ನಕಲು ಹೊಡೆಯಲು ಸಹಾಯವಾಗುವಂತ ಉಡುಪುಗಳನ್ನು ಅನುಮತಿಸುವುದಿಲ್ಲ. ಅದಕ್ಕಾಗಿ ಡ್ರೆಸ್ ಕೋಡ್ ನಿಮಯ ತರಲಾಗಿದೆ. ಆದರೆ ಹಿಜಾಬ್ ಬಾಯಿ ಅಥವಾ ಮುಖವನ್ನು ಮುಚ್ಚುವುದಿಲ್ಲವಾದ್ದರಿಂದ, ಬ್ಲೂಟೂತ್ನಂತಹ ಸಾಧನವನ್ನು ಬಳಸಿಕೊಂಡು ಮೋಸ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಜ್ಯಾದ್ಯಂತ ನವೆಂಬರ್ 18 ಮತ್ತು 19 ರಂದು ಪರೀಕ್ಷೆಗಳು ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಕೆಇಎ ಆದೇಶವನ್ನು ಹೊರಡಿಸಿತ್ತು. ಬ್ಲೂಟೂತ್ ಸಾಧನಗಳನ್ನು ಇಟ್ಟು ನಕಲು ಮಾಡುವುದನ್ನು ತಡೆಯಲು “ತಲೆ, ಬಾಯಿ ಅಥವಾ ಕಿವಿಯನ್ನು ಮುಚ್ಚುವ ಯಾವುದೇ ಉಡುಪು ಅಥವಾ ಟೋಪಿ”ಯನ್ನು ಅನ್ನು ನಿಷೇಧಿಸಲಾಗಿದೆ ಎಂದು ಹೇಳಿತ್ತು. ಈ ವರ್ಷದ ಆರಂಭದಲ್ಲಿ ಬ್ಲೂಟೂತ್ ಸಾಧನಗಳನ್ನು ಬಳಸಿಕೊಂಡು ವಂಚನೆ ಮಾಡಿರುವ ಬಗ್ಗೆ ವರದಿಯಾದ ನಂತರ ಈ ಆದೇಶವನ್ನು ಹೊರಡಿಸಲಾಗಿತ್ತು.
“ಹಿಜಾಬ್ ಧರಿಸುವ ಮಹಿಳಾ ಅಭ್ಯರ್ಥಿಗಳು ಒಂದು ಗಂಟೆಯ ಹಿಂದೆಯೆ ಪರೀಕ್ಷಾ ಕೇಂದ್ರಗಳಿಗೆ ಬಂದು ವರದಿ ಮಾಡಬೇಕು ಮತ್ತು ಸೂಕ್ತ ತಪಾಸಣೆಗೆ ಒಳಗಾಗಬೇಕು. ಈ ವರ್ಷ ಹೆಚ್ಚಿನ ಮೆಟಲ್ ಡಿಟೆಕ್ಟರ್ಗಳನ್ನು ಪರಿಚಯಿಸಲಾಗುವುದು. ಈ ನಿಯಮಗಳು ಹೊಸದೇನಲ್ಲ. ಅವೆಲ್ಲಾ ಮೊದಲೇ ಅಸ್ತಿತ್ವದಲ್ಲಿದ್ದುದಾಗಿದೆ. ನಾವು ಜಾಗರೂಕತೆಯನ್ನು ಹೆಚ್ಚಿಸಲು ಬಯಸುತ್ತೇವೆ. ಅನಗತ್ಯ ಕ್ಯಾಪ್ ಅಥವಾ ಸ್ಕಾರ್ಫ್ಗಳನ್ನು ಧರಿಸುವುದನ್ನು ಅನುಮತಿಸಲಾಗುವುದಿಲ್ಲ ಆದರೆ ಇದು ಹಿಜಾಬ್ಗೆ ಅನ್ವಯಿಸುವುದಿಲ್ಲ” ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ವಿಡಿಯೊ ನೋಡಿ: ದೀಪಾವಳಿ ಹಬ್ಬದ ವಿಶೇಷ ಕವಿತೆ : ನನ್ನ ಹಣತೆ – ಡಾ. ಜಿ.ಎಸ್. ಶಿವರುದ್ರಪ್ಪ Janashakthi Media